ಚುನಾವಣಾ ಆಯೋಗದಲ್ಲಿನ ಆಂತರಿಕ ಅಭಿಪ್ರಾಯ ಭೇದವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಎಸ್ಐಆರ್ ಕುರಿತಾದ ಆಯೋಗದ ನಿರ್ಣಯವನ್ನು ದೇಶವೇ ಒಪ್ಪಿಕೊಂಡಿದೆ. ಮತದಾರರಿಗೆ ಈ ನಿರ್ಣಯದಿಂದ ತೊಂದರೆಯಾಗಿಲ್ಲ. ಕಾಂಗ್ರೆಸ್ ಹತಾಶೆಯಿಂದ ಗೊಂದಲ ಮೂಡಿಸುತ್ತಿದೆ ಎಂದು ಸಂಸದ ಕಾಗೇರಿ ಟೀಕಿಸಿದರು.
ಯಲ್ಲಾಪುರ: ಚುನಾವಣಾ ಆಯೋಗದ ವಿಷಯದಲ್ಲಿ ಕಾಂಗ್ರೆಸ್ ತೋರುತ್ತಿರುವ ಅಪ್ರಬುದ್ಧತೆ ಕಾಂಗ್ರೆಸ್ ಪಕ್ಷದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಭಾನುವಾರ ಪಟ್ಟಣದ ಅಡಿಕೆ ಭವನದಲ್ಲಿ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ಪಶ್ಚಿಮ ಪದವಿಧರ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಚುನಾವಣಾ ಆಯೋಗದಲ್ಲಿನ ಆಂತರಿಕ ಅಭಿಪ್ರಾಯ ಭೇದವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಎಸ್ಐಆರ್ ಕುರಿತಾದ ಆಯೋಗದ ನಿರ್ಣಯವನ್ನು ದೇಶವೇ ಒಪ್ಪಿಕೊಂಡಿದೆ. ಮತದಾರರಿಗೆ ಈ ನಿರ್ಣಯದಿಂದ ತೊಂದರೆಯಾಗಿಲ್ಲ. ಕಾಂಗ್ರೆಸ್ ಹತಾಶೆಯಿಂದ ಗೊಂದಲ ಮೂಡಿಸುತ್ತಿದೆ ಎಂದು ಟೀಕಿಸಿದರು.ರಾಜ್ಯ ಸರ್ಕಾರದ ಖಜಾನೆ ಬರಿದಾಗಿ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಆದರೆ ಡಿಕೆಶಿ ಅವರು ಹೊಸ ಯೋಜನೆ, ಅನುದಾನಗಳ ಘೋಷಣೆಯ ಮೂಲಕ ತಾನು ಜನಪರ ಎಂಬ ಭ್ರಮೆಯನ್ನು ಸೃಷ್ಟಿಸುತ್ತಿದ್ದಾರೆ. ಕರಾವಳಿ ಅಭಿವೃದ್ಧಿ ಹೆಸರಿನಲ್ಲಿ ಜನರ ಮೂಗಿಗೆ ತುಪ್ಪ ಸವರಿ ತಮ್ಮ ಬಂಡವಾಳವನ್ನು ಇಲ್ಲಿ ಹೂಡಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನರಲ್ಲಿ ಮೋದಿ ಸರ್ಕಾರದ ಕುರಿತು ಅಪನಂಬಿಕೆ ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಅದನ್ನು ವಿಫಲಗೊಳಿಸಿ ಜನರಿಗೆ ಕೇಂದ್ರದ ಸಾಧನೆಯನ್ನು, ಸತ್ಯವನ್ನು ತಲುಪಿಸುವ ಕಾರ್ಯ ಬಿಜೆಪಿ ಕಾರ್ಯಕರ್ತರಿಂದ ಆಗಬೇಕು ಎಂದರು. ಶಾಸಕ ದಿನಕರ ಶೆಟ್ಟಿ ಮಾತನಾಡಿ, ಇಡೀ ಜಿಲ್ಲೆಯಲ್ಲಿ ಕುಮಟಾ ಕ್ಷೇತ್ರವನ್ನು ಮಾತ್ರ ಬರಗಾಲಪೀಡಿತ ಪ್ರದೇಶಗಳ ಪಟ್ಟಿಗೆ ಸರ್ಕಾರ ಸೇರಿಸಿಲ್ಲ. ಇಡೀ ರಾಜ್ಯಕ್ಕೆ ರಾಜ್ಯವೇ ಬರಗಾಲದಲ್ಲಿರುವಾಗ ಬರಗಾಲಪೀಡಿತ ಪ್ರದೇಶಗಳ ಘೋಷಣೆಯಲ್ಲೂ ರಾಜಕೀಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ರಾಜ್ಯದಲ್ಲಿ ನಿರುದ್ಯೋಗ ನಿವಾರಣೆಗೆ ಸರ್ಕಾರದಿಂದ ಯಾವುದೇ ಪ್ರಯತ್ನ ನಡೆದಿಲ್ಲ. ಪದವೀಧರರು, ಶಿಕ್ಷಣವಂತರು, ನೌಕರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊಂದಿದ್ದಾರೆ. ಹಾಗಾಗಿ ರಾಜ್ಯದ ನಾಲ್ಕೂ ಕ್ಷೇತ್ರಗಳಲ್ಲಿ ಎನ್ಡಿಎ ಕೂಟ ಗೆಲುವು ಸಾಧಿಸಲಿದೆ. ನಾನು ಎರಡು ಅವಧಿಗಳಲ್ಲಿ ಮಾಡಿದ ಉತ್ತಮ ಕಾರ್ಯಗಳು ಮೂರನೇ ಬಾರಿಯ ಗೆಲುವಿಗೆ ಮೆಟ್ಟಿಲಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಕಾರ್ಯನಿರ್ವಹಿಸಿ ಗೆಲ್ಲಬೇಕೆಂಬ ಸಂಕಲ್ಪ ಮಾಡಿದ್ದೇವೆ. ಪ್ರಚಾರ ಕಾರ್ಯದಲ್ಲಿ ಕಾರ್ಯಕರ್ತರು, ಮುಖಂಡರು ತೊಡಗಿಸಿಕೊಂಡು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಮತ ಬರುವಂತೆ ಶ್ರಮಿಸಬೇಕೆಂದರು. ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ವಿಭಾಗದ ಸಹಪ್ರಭಾರಿ ಆರ್.ಡಿ. ಹೆಗಡೆ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರಾದ ಕೆ.ಜಿ. ನಾಯ್ಕ, ವೆಂಕಟೇಶ ನಾಯ್ಕ, ಮಾಜಿ ಶಾಸಕರಾದ ಸುನೀಲ ಹೆಗಡೆ, ಸುನೀಲ ನಾಯ್ಕ, ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಇತರರಿದ್ದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ ಸ್ವಾಗತಿಸಿದರು. ಪ್ರಶಾಂತ ನಾಯ್ಕ ನಿರ್ವಹಿಸಿದರು.