ಸಾರಾಂಶ
ಕಾಂಗ್ರೆಸ್ ಸರ್ಕಾರ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಜನರ ದಿಕ್ಕು ತಪ್ಪಿಸಿ ಮೋಸ ಮಾಡಲು ಹೊರಟಿದ್ದು ಸರಿಯಲ್ಲ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಯುಕೆಪಿ ಯೋಜನೆ ಮೂರನೇ ಹಂತಕ್ಕೆ ಸಂಬಂಧಿಸಿದಂತೆ 2022 ಆ.12ರಂದು ನಡೆದ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ 522 ಮೀ. ವರೆಗೆ ಮಾತ್ರ ಭೂಸ್ವಾಧೀನ ಹಾಗೂ ಪರಿಹಾರ ನೀಡಬೇಕೆನ್ನುವ ವಿಷಯ ಚರ್ಚೆಯಾಗಿದ್ದರೂ ಅಂದಿನ ನಮ್ಮ ಸರ್ಕಾರ ಅದನ್ನು ಆದೇಶ ಮಾಡಿಲ್ಲವೆಂದು ಸಂಸದ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಮಿನಿ ನಾಯಕರು ನನ್ನ ರಾಜೀನಾಮೆ ಕೇಳುತ್ತಾರೆ. ಆದರೆ ನಮ್ಮ ಸರ್ಕಾರ ಇರುವವರೆಗೂ ಆದೇಶ ಮಾಡಿಲ್ಲ. 524 ಮೀ. ವರೆಗೂ ಪರಿಹಾರಧನ ವಿತರಣೆ ಮಾಡಿದ್ದೇವೆ ಎಂದು ಈ ಕುರಿತಾಗಿ ದಾಖಲೆ ನೀಡಿದರು.
ಅಂದಿನ ಸಭೆಯಲ್ಲಿ ಪ್ರೋಸಿಡಿಂಗ್ ಮಾತ್ರ ಮಾಡಿತ್ತು. ಅದು ಆದೇಶ ಅಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಜನರ ದಿಕ್ಕು ತಪ್ಪಿಸಿ ಮೋಸ ಮಾಡಲು ಹೊರಟಿದ್ದು ಸರಿಯಲ್ಲ. 524 ಮೀ.ವರೆಗೆ ಭೂಸ್ವಾಧೀನ ಮಾಡಿಕೊಂಡು ರೈತರಿಗೆ ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿದರು.ಉತ್ತರ ಕರ್ನಾಟಕಕ್ಕೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದ್ದು ಒಂದು ನೀರಾವರಿ ಯೋಜನೆಗಳು ಸಹಿತ ಮಾಡಿಲ್ಲ. ಸಚಿವ ತಿಮ್ಮಾಪೂರ ತಮ್ಮ ಕ್ಷೇತ್ರದಲ್ಲಿ ಯಾವ ನೀರಾವರಿ ಯೋಜನೆ ನೀಡಿದ್ದಾರೆ ಎಂದು ಪ್ರಶ್ನಿಸಿದರು. ವಿಧಾನಸಭೆ ಚಳಿಗಾಲ ಅಧಿವೇಶನದಲ್ಲಿ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಆಗಬೇಕು. ಆದರೆ ಈಗ ಭ್ರಷ್ಟಾಚಾರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಬಕಾರಿ ಇಲಾಖೆಯಲ್ಲಿ ನಡೆದಂತಹ ಭ್ರಷ್ಟಾಚಾರದ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗುತ್ತಿರುವುದು ನೋವಿನ ಸಂಗತಿ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್, ಶಿವಾನಂದ ಟವಳಿ, ಮುತ್ತಣ್ಣ ಬೆಣ್ಣೂರ, ಉಮೇಶ ಹಂಚಿನಾಳ ಇದ್ದರು.