ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಲೋಕಾಯುಕ್ತದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ಪಾರದರ್ಶಕ ತನಿಖೆಗೆ ಅವಕಾಶ ನೀಡಲು ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಒತ್ತಾಯಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬವನ್ನು ವ್ಯಕ್ತಿಗತ ಟೀಕೆ ಮಾಡಿಕೊಂಡು ಛಲವಾದಿ ನಾರಾಯಣಸ್ವಾಮಿ ಬಿಜೆಪಿಯಲ್ಲಿ ರಾಜಕೀಯ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಬಿ.ಎಲ್.ಸಂತೋಷ್ ಕೃಪಾಕಟಾಕ್ಷದಿಂದ ಬಿಜೆಪಿಯ ಹಿರಿಯನ್ನು ಬದಿಗೆ ತಳ್ಳಿ ಸಾಂವಿಧಾನಿಕ ಹುದ್ದೆ ಗಿಟ್ಟಿಸಿಕೊಂಡಿರುವ ಇವರು ಕಾಂಗ್ರೆಸ್ ನಾಯಕರ ವಿರುದ್ಧ ಹತಾಶೆಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಗುರುವಾರ ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಾಲ್ಮೀಕಿ ನಿಗಮದ ಹಗರಣವನ್ನು ಪ್ರಸ್ತಾಪಿಸಿ ಹಲವಾರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನಾಯಕರ ಮೇಲೆ ಇಡಿ ಪ್ರಕರಣಗಳು ದಾಖಲಾಗಿದ್ದರೂ ಈವರೆಗೂ ಚಕಾರ ಎತ್ತದ ಛಲವಾದಿ ನಾರಾಯಣಸ್ವಾಮಿ ಯಾವ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಿದ್ದಾರೆ ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.ಇ.ಡಿ. ಸಂಸ್ಥೆ ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಪತ್ರಿಕಾ ಟಿಪ್ಪಣಿ ನೀಡಿದ ರೀತಿಯಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಮೇಲೆ ಇರುವ ಪ್ರಕರಣದ ಮಾಹಿತಿಯನ್ನು ಏಕೆ ಸಾರ್ವಜನಿಕವಾಗಿ ಹಂಚಿಕೊಂಡಿಲ್ಲ. ಹೈಕೋರ್ಟ್‌ನಲ್ಲಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ವಿರುದ್ಧ ಬಹಳ ದಿನಗಳಿಂದ ಬಾಕಿಯಿರುವ ಪ್ರಕರಣವನ್ನು ಇ.ಡಿ. ತೆರವುಗೊಳಿಸುವ ಅಥವಾ ತನಿಖೆ ನಡೆಸುವ ಪ್ರಾಮಾಣಿಕ ಪ್ರಯತ್ನವನ್ನು ಏಕೆ ಮಾಡಿಲ್ಲ. ಹೊಸಕೋಟೆ ಸಿಎ ನಿವೇಶನದ ಬಿರಿಯಾನಿ ಹೋಟೆಲ್ ಹಗರಣದ ಕುರಿತು ಬಿಜೆಪಿ ನಾಯಕರು ಏಕೆ ಸ್ಪಷ್ಟೀಕರಣ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಎಂ.ಸಿ.ನಾಣಯ್ಯ, ಡಿ.ಬಿ.ಚಂದ್ರೇಗೌಡ, ಕೆ.ಎಚ್.ಶ್ರೀನಿವಾಸ್ ಸೇರಿದಂತೆ ಅನೇಕ ಹಿರಿಯರು ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಸದನದ ಗೌರವ ಮತ್ತು ಪಾವಿತ್ರ್ಯತೆ ಎತ್ತಿ ಹಿಡಿದಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಈ ಪರಂಪರೆ ಮತ್ತು ಸಂಸ್ಕೃತಿಗೆ ಕಳಂಕ ಬರುವ ರೀತಿಯಲ್ಲಿ ನಡೆದುಕೊಳ್ಳುವ ಬದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತೆರಳಬೇಕೆಂದು ಒತ್ತಾಯಿಸಿದ್ದಾರೆ.