ಕಾಂಗ್ರೆಸ್ಸಿನಿಂದ ಧರ್ಮಸ್ಥಳದಲ್ಲಿ ಪಾವಿತ್ರ್ಯತೆ ಹಾಳು

| Published : Sep 01 2025, 01:04 AM IST

ಕಾಂಗ್ರೆಸ್ಸಿನಿಂದ ಧರ್ಮಸ್ಥಳದಲ್ಲಿ ಪಾವಿತ್ರ್ಯತೆ ಹಾಳು
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳದಲ್ಲಿ ಇಲ್ಲದ ಪ್ರಕರಣ ಹುಡುಕಿ ಇವರು ರಾಡಿ ಮಾಡಿದ್ದಾರೆ. ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲಿನ ನಂಬಿಕೆ ಕಡಿಮೆ ಮಾಡಿದ್ದಾರೆ. ಶ್ರದ್ಧಾ ಕೇಂದ್ರಗಳ ಮೇಲಿನ ದಾಳಿಗೆ ಕಾಂಗ್ರೆಸ್ ಸಾಥ್ ಕೊಟ್ಟಿದೆ. ದೇಶದ ಅಸ್ಮಿತೆ ಜತೆಗೆ ಆಟವಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ.

ಹುಬ್ಬ‍ಳ್ಳಿ: ಧರ್ಮಸ್ಥಳದಲ್ಲಿ ಕಾಂಗ್ರೆಸ್ ಪಾವಿತ್ರ್ಯತೆ ಹಾಳು ಮಾಡಿದೆ. ಅಲ್ಲಿನ ಅಧಿಕಾರಿಗಳು ದಕ್ಷರಾಗಿದ್ದು, ಮೇಲೆ ಕುಳಿತ ಕಳ್ಳರು ಅಧಿಕಾರಿಗಳ ಮೂಲಕ ಆಟವಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದಲ್ಲಿ ಭಾನುವಾರ ಮರಾಠಾ ಗಲ್ಲಿಯಲ್ಲಿ ಪ್ರತಿಷ್ಠಾಪಿಸಿರುವ ಹುಬ್ಬಳ್ಳಿ ಕಾ ಮಹಾರಾಜಾ ಗಣಪತಿ ಮೂರ್ತಿ ಪೆಂಡಾಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ ಕಿ ಬಾತ್ ವೀಕ್ಷಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಸರ್ಕಾರದವರು ಅಧಿಕಾರಿಗಳಿಗೆ ಹೇಳಿ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ಬರುವಂತೆ ನೋಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿರುವ ಎಡ ಪಂಥೀಯ ಶಕ್ತಿಗಳು ಇದನ್ನು ಮಾಡಿಸುತ್ತಿವೆ ಎಂದರು.

ಇಂದು ಧರ್ಮಸ್ಥಳ ಚಲೋ: ಧರ್ಮಸ್ಥಳದಲ್ಲಿ ಇಲ್ಲದ ಪ್ರಕರಣ ಹುಡುಕಿ ಇವರು ರಾಡಿ ಮಾಡಿದ್ದಾರೆ. ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲಿನ ನಂಬಿಕೆ ಕಡಿಮೆ ಮಾಡಿದ್ದಾರೆ. ಶ್ರದ್ಧಾ ಕೇಂದ್ರಗಳ ಮೇಲಿನ ದಾಳಿಗೆ ಕಾಂಗ್ರೆಸ್ ಸಾಥ್ ಕೊಟ್ಟಿದೆ. ದೇಶದ ಅಸ್ಮಿತೆ ಜತೆಗೆ ಆಟವಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ. ಇದನ್ನು ಖಂಡಿಸಿ ನಾವು ಸೆ. 1ರಂದು ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ. ನಾನೂ ಧರ್ಮಸ್ಥಳಕ್ಕೆ ಹೋಗುತ್ತಿದ್ದೇನೆ. ಮೈತ್ರಿ ಪಕ್ಷಗಳು ಪ್ರತ್ಯೇಕವಾಗಿ ಹೋರಾಟ ಮಾಡಿದರೆ ತಪ್ಪೇನೂ ಇಲ್ಲ. ಜೆಡಿಎಸ್ ಹೋರಾಟ ಜೆಡಿಎಸ್‌ನದ್ದು. ನಮ್ಮ ಹೋರಾಟ ನಮ್ಮದು. ಧರ್ಮಸ್ಥಳದ ಜತೆ ನಾವಿದ್ದೇವೆ ಎಂದು ಸಂದೇಶ ಕೊಡುವುದೇ ನಮ್ಮ ಗುರಿ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಆಸ್ತಿ ನೋಂದಣಿ ಶುಲ್ಕ ಏರಿಸಿ ಜನರಿಗೆ ಬರೆ ಎಳೆದಿದೆ. ಗ್ಯಾರಂಟಿ ಯೋಜನೆ ಸಹ ಸರಿಯಾಗಿ ಕೊಡುತ್ತಿಲ್ಲ. ರಾತ್ರೋರಾತ್ರಿ ಶುಲ್ಕವನ್ನು ಹೆಚ್ಚು ಮಾಡುತ್ತಾರೆ. ಇವರು ಜನರಿಗೆ ಟೋಪಿ ಹಾಕುವ ದುರುಳರಿದ್ದಾರೆ ಎಂದರು.

ಸಮಾಜವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಜನರ ಜತೆ ಚೆಲ್ಲಾಟ ಆಡುತ್ತಿದ್ದಾರೆ. ತಹಸೀಲ್ದಾರ್ ಸೇರಿ ಎಲ್ಲ ಕಚೇರಿಗಳಲ್ಲೂ ಭ್ರಷ್ಟಾಚಾರ ಇಲ್ಲದೆ ಕೆಲಸ ಆಗುವುದಿಲ್ಲ. ಮೊದಲು ಲೋಕಾಯುಕ್ತಕ್ಕೆ ಹೆದರುತ್ತಿದ್ದರು. ಇದೀಗ ಆ ಹೆದರಿಕೆಯೂ ಇಲ್ಲಾದಂತಾಗಿದೆ ಎಂದರು.

ಭಾಗವತ್ ಹೇಳಿಕೆ ಸಮರ್ಥನೆ: ಬೇರೆ ಧರ್ಮದವರು ಬೇಕಾದಷ್ಟು ಮಕ್ಕಳನ್ನು ಹುಟ್ಟಿಸಿದರೂ ಕಾಂಗ್ರೆಸ್‌ನವರಿಗೆ ಸಮಸ್ಯೆ ಇಲ್ಲ. ಆದರೆ, ಹಿಂದೂಗಳಿಗೆ ಮೋಹನ್ ಭಾಗವತ್ ಕರೆ ಕೊಟ್ಟರೆ ಬ್ಯಾನಿ ಆಗುತ್ತದೆ ಎಂದು ನಾವಿಬ್ಬರು, ನಮಗೆ ಮೂವರು ಎಂದಿರುವ ಮೋಹನ್ ಭಾಗವತ್ ಹೇಳಿಕೆಯನ್ನು ಜೋಶಿ ಸಮರ್ಥಿಸಿಕೊಂಡರು.

ಮಹುವಾ ಮೊಯತ್ರಾ ಅಮಿತ್ ಶಾ ಅವರನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ಸಮಾವೇಶದಲ್ಲಿ ಮೋದಿ ಅವರ ತಾಯಿಯ ವಿರುದ್ಧ ಅಶ್ಲೀಲ ಪದ ಬಳಕೆಯಾಗಿದೆ. ಇದು ಅವರ ಮಟ್ಟವನ್ನು ಸೂಚಿಸುತ್ತದೆ. ಸೋಲಿನ ಹತಾಶೆಯಿಂದ ಈ ರೀತಿ ಮಾತನಾಡುತ್ತಾರೆ. ಅಮಿತ್ ಶಾ ಅವರ ತಲೆ ಕಡಿಯಬೇಕೆನ್ನುತ್ತಾರೆ. ನೀವು ಏನೇ ಮಾಡಿದರೂ ಜನ ನಿಮ್ಮನ್ನು ನಂಬುವುದಿಲ್ಲ ಎಂದರು.

ಹುಬ್ಬಳ್ಳಿಗೂ ಅಕ್ರಮ ನುಸುಳುಕೋರರು ಬಂದಿದ್ದಾರೆ. ಅಕ್ರಮ ನುಸುಳುಕೋರರಿಂದ ನಮ್ಮ ಹಕ್ಕು ಕಸಿಯುವ ಕೆಲಸ ನಡೆದಿದೆ. ದೇಶದಲ್ಲಿ ಅರಾಜಕತೆ ನಡೆಸುತ್ತಿರುವುದರ ವಿರುದ್ಧ ಯುದ್ಧ ನಡೆದಿದೆ. ಆದರೆ, ಅಕ್ರಮ ವಲಸಿಗರು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಅಂತ ವೋಟ್ ಬಚಾವ್ ಹೋರಾಟ ಮಾಡುತ್ತಿದೆ. ಇದು ವೋಟ್ ಬಚಾವ್ ಹೋರಾಟವಲ್ಲ. ನುಸುಳುಕೋರರ ಬಚಾವ್ ಆಂದೋಲನ ಎಂದರು.