ಶಾಸಕ ಕೆ. ಹರೀಶ್‌ ಗೌಡ ನೇತೃತ್ವದಲ್ಲಿ ಕಾಂಗ್ರೆಸ್‌ನಿಂದ ಧರ್ಮಸ್ಥಳ ಯಾತ್ರೆ

| Published : Sep 04 2025, 01:00 AM IST

ಶಾಸಕ ಕೆ. ಹರೀಶ್‌ ಗೌಡ ನೇತೃತ್ವದಲ್ಲಿ ಕಾಂಗ್ರೆಸ್‌ನಿಂದ ಧರ್ಮಸ್ಥಳ ಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ವಿರೋಧ ಪಕ್ಷದವರು ಬಟ್ಟೆ ಬದಲಿಸಿದಂತೆ ಹೇಳಿಕೆ ನೀಡಿದರೆ ತನಿಖೆ ಮಾಡಲು ಸಾಧ್ಯ ಇಲ್ಲ. ಮೊದಲು ಎಸ್ಐಟಿ ತನಿಖೆ ವರದಿ ಬರಲಿ. ಮುಂದೆ ನೋಡೋಣ. ಮುಸುಕುದಾರಿ ಹಿನ್ನೆಲೆ ತನಿಖೆ ಆಗಬೇಕು. ಆತ ಹೇಳುವ ಹೆಸರುಗಳ ಬಗ್ಗೆ ಕೂಡ ತನಿಖೆ ಆಗಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಧರ್ಮಸ್ಥಳ ಮತ್ತು ಅಲ್ಲಿನ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧದ ಅಪಪ್ರಚಾರ ಖಂಡಿಸಿ ಜೆಡಿಎಸ್‌, ಬಿಜೆಪಿ ನಡೆಸಿದ ಯಾತ್ರೆಯ ಬಳಿಕ ಕಾಂಗ್ರೆಸ್‌ ಶಾಸಕ ಕೆ. ಹರೀಶ್‌ ಗೌಡ ನೇತೃತ್ವದಲ್ಲಿ ಸಾವಿರಾರು ಮಂದಿ ಮೈಸೂರಿನಿಂದ ಧರ್ಮಸ್ಥಳಕ್ಕೆ ಯಾತ್ರೆ ಹೊರಟರು.

ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಹಾಗೂ ಅಲ್ಲಿನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ಸೂಚಿಸಿ ಮೈಸೂರು ನಗರ ಕಾಂಗ್ರೆಸ್ ಸಮಿತಿ ಚಾಮರಾಜ ಕ್ಷೇತ್ರದ ವತಿಯಿಂದ ಈ ಯಾತ್ರೆ ಕೈಗೊಳ್ಳಲಾಗಿದೆ. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಿಂದ ಈ ಯಾತ್ರೆ ಹೊರಟಿತು.

ಯಾತ್ರೆಗೆ ಶಾಸಕ ತನ್ವೀರ್‌ಸೇಠ್‌ ಚಾಲನೆ ನೀಡಿದರು. ಶಾಸಕ ಕೆ. ಹರೀಶ್‌ಗೌಡ ನೇತೃತ್ವದಲ್ಲಿ ಸುಮಾರು 30 ಬಸ್‌ ಮತ್ತು ಕಾರಿನಲ್ಲಿ ಸಾವಿರಾರು ಮಂದಿ ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡರು.

ಈ ವೇಳೆ ಮಾತನಾಡಿದ ಶಾಸಕ ಕೆ. ಹರೀಶ್‌ಗೌಡ, ನಮ್ಮದು ಬಿಜೆಪಿ, ಜೆಡಿಎಸ್ ರೀತಿ ರಾಜಕೀಯ ಪ್ರೇರಿತ ಯಾತ್ರೆಯಲ್ಲ. ನಾವು ಮಾಡುತ್ತಿರುವುದು ಧರ್ಮ ವಿಜಯ ಯಾತ್ರೆ. ಧರ್ಮಸ್ಥಳ ವಿಚಾರವಾಗಿ ಎಸ್ಐಟಿ ತನಿಖೆ ಮಾಡಿಸಿ ಸತ್ಯ ಹೊರ ಬರುವಂತೆ ಮಾಡಿದ್ದೇವೆ. ಆ ಮೂಲಕ ಶ್ರೀಕ್ಷೇತ್ರದ ಮೇಲೆ ಇದ್ದ ಕಳಂಕ ದೂರ ಮಾಡುವ ಕೆಲಸ ಮಾಡಿದ್ದೇವೆ. ಈಗಾಗಿ ನಮ್ಮದು ನಿಜವಾದ ಧರ್ಮಯಾತ್ರೆ ಎಂದರು.

ನಾವೆಲ್ಲ ಶಿವನ ಆರಾಧಕರು. ಇಲ್ಲಿಂದ ತೆರಳಿ ಒಂದು ದಿನ ತಂಗಿದ್ದು, ಗುರುವಾರ ದರ್ಶನ ಮಾಡಿ ಬರುತ್ತೇವೆ. ಈಗಾಗಲೇ ಧರ್ಮಾಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಅಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ನಮ್ಮ ಪಕ್ಷದ ಒಪ್ಪಿಗೆ ಕೂಡ ಇದೆ. ನಮ್ಮ ಪಕ್ಷ ಧರ್ಮಾತೀತವಾದದ್ದು. ಹಿಂದೂ, ಮುಸ್ಲಿಂ, ಭೌದ್ಧ ಸೇರಿ ಎಲ್ಲಾ ಧರ್ಮವನ್ನು ಆರಾಧಿಸುತ್ತೇವೆ. ಕ್ಷೇತ್ರದಲ್ಲಿರುವ ಧರ್ಮಸ್ಥಳ ಭಕ್ತಾಧಿಗಳ ಭಾವನೆಗೆ ಸ್ಪಂದಿಸಿ ಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಶಾಸಕ ತನ್ವೀರ್ ಸೇಠ್ ಮಾತನಾಡಿ, ಎಸ್ಐಟಿ ಸ್ವಾಗತ ಮಾಡಿದವರು, ತನಿಖೆಗೆ ಮುಕ್ತ ಅವಕಾಶ ನೀಡದೆ ಮಧ್ಯ ಪ್ರವೇಶ ಮಾಡಿ ಜನರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಭಕ್ತರ ಭಾವನೆಯಂತೆ ಮಂಜುನಾಥ ದರ್ಶನಕ್ಕೆ ಹೊರಟಿದ್ದಾರೆ ಎಂದರು.

ಇದಕ್ಕೆ ಕಾಂಗ್ರೆಸ್ ಯಾತ್ರೆ ಎನ್ನಬೇಡಿ, ಜನರ ಯಾತ್ರೆ ಎನ್ನಬೇಕು. ಪಕ್ಷದ ವತಿಯಿಂದ ಇಲ್ಲಿ ಯಾತ್ರೆ ಕೈಗೊಂಡಿಲ್ಲ. ಧರ್ಮಸ್ಥಳದ ಬಗ್ಗೆ ಮಾತನಾಡಿದ ಮುಸುಕುದಾರಿ ಮಂಪರು ಪರೀಕ್ಷೆ ಆಗಬೇಕು. ಕನಿಷ್ಠ ಎಸ್ಐಟಿ ಮಧ್ಯಂತರ ವರದಿಯಾದರೂ ಹೊರ ಬರಬೇಕು. ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಗೃಹಸಚಿವರಿಗೆ ಕೇಳಿದ್ದೇನೆ ಎಂದು ಅವರು ತಿಳಿಸಿದರು.

ಷಡ್ಯಂತರಕ್ಕೆ ವಿದೇಶಿ ಹಣ ಹರಿದು ಬಂದಿದೆ ಎಂಬ ಕುರಿತು ಪ್ರತಿಕ್ರಿಯಿಸಿ, ಇದಕ್ಕೆ ನಾನು ಉತ್ತರ ಕೊಡುವುದಿಲ್ಲ. ಯಾವುದೇ ವಿದೇಶಿ ಹಣ ಬರಬೇಕು ಅಂದರೆ ಕೇಂದ್ರದ ಮೂಲಕವೇ ಬರಬೇಕು. ತನಿಖೆ ವೇಳೆ ಇದೂ ಕೂಡ ತನಿಖೆ ಆಗಲಿ ಎಂದರು.

ಧರ್ಮಸ್ಥಳ ಪ್ರಕರಣದಿಂದ ಮೈಸೂರು ಭಾಗದ ಭಕ್ತಾದಿಗಳ ಭಾವನೆಗೆ ಚ್ಯುತಿ ತಂದಿದೆ. ರಾಜಕೀಯವಾಗಿ ಅನೇಕರು ಅವರ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಎಸ್ಐಟಿ ತನಿಖೆ ಮಾಡಿ ಸತ್ಯ ಹೊರ ತರುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಅವರು ತಿಳಿಸಿದರು.

ಎನ್ಐಎ ತನಿಖೆ ಆಗಬೇಕು ಎಂಬ ಒತ್ತಾಯ ವಿಚಾರವಾಗಿ ಮಾತನಾಡಿ, ವಿರೋಧ ಪಕ್ಷದವರು ಬಟ್ಟೆ ಬದಲಿಸಿದಂತೆ ಹೇಳಿಕೆ ನೀಡಿದರೆ ತನಿಖೆ ಮಾಡಲು ಸಾಧ್ಯ ಇಲ್ಲ. ಮೊದಲು ಎಸ್ಐಟಿ ತನಿಖೆ ವರದಿ ಬರಲಿ. ಮುಂದೆ ನೋಡೋಣ. ಮುಸುಕುದಾರಿ ಹಿನ್ನೆಲೆ ತನಿಖೆ ಆಗಬೇಕು. ಆತ ಹೇಳುವ ಹೆಸರುಗಳ ಬಗ್ಗೆ ಕೂಡ ತನಿಖೆ ಆಗಬೇಕು ಎಂದು ಹೇಳಿದರು.

ಕ್ಷೇತ್ರ ವ್ಯಾಪ್ತಿಯ ಪ್ರತಿ ವಾರ್ಡ್‌ ಗೂ ಶಾಸಕ ಕೆ. ಹರೀಶ್‌ ಗೌಡ ಬಸ್‌ ವ್ಯವಸ್ಥೆ ಮಾಡಿದ್ದು ವಿಶೇಷ. ಇಂದು ಸಂಜೆಯೊಳಗೆ ಧರ್ಮಸ್ಥಳ ತಲುಪಿ ವಾಸ್ತವ್ಯ ಹೂಡಿ, ಸೆ. 4ರಂದು ಬೆಳಗ್ಗೆ 8.30ಕ್ಕೆ ಧರ್ಮಾಧಿಕಾರಿಗಳ ಪರ ಶಾಂತಿಯಾತ್ರೆ ನಡೆಸಿದ ಬಳಿಕ ಶ್ರೀ ಮಂಜುನಾಥಸ್ವಾಮಿ ದರ್ಶನ, ಧರ್ಮಾಧಿಕಾರಿಗಳ ಭೇಟಿ ಹಾಗೂ ಅಣ್ಣಪ್ಪ ಸ್ವಾಮಿಯ ದರ್ಶನಪಡೆದು ಹಿಂದಿರುಗುವರು.

ಈ ವೇಳೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು, ಯೋಗೇಶ್, ಅನಂತ ನಾರಾಯಣ, ರಾಮಚಂದ್ರ ಮೊದಲಾದವರು ಇದ್ದರು.