ಸಾರಾಂಶ
ಸಾಗುವಳಿದಾರರ ಒಕ್ಕಲೆಬ್ಬಿಸುತ್ತಿರುವ ಸರ್ಕಾರದ ವಿರುದ್ಧ ಕಾನೂನು ಭಂಗ ಚಳವಳಿ ನಡೆಸಲಾಗುವುದು ಎಂದು ಮಲೆನಾಡು ರೈತರ ಹೋರಾಟ ಸಮಿತಿಯ ಸಂಚಾಲಕ ತಿ.ನಾ.ಶ್ರೀನಿವಾಸ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗಮುಳುಗಡೆ ಸಂತ್ರಸ್ಥರ ನೆರವಿಗೆ ಬರುವುದಾಗಿ ಚುನಾವಣೆ ವೇಳೆ ನೀಡಿದ್ದ ಮಾತು ಮರೆದ ಕಾಂಗ್ರೆಸ್ ಸರ್ಕಾರ ಮತ್ತು ಬಗರ್ ಹುಕುಂದಾರರನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಸಚಿವರ ವಿರುದ್ಧ ಕಾನೂನು ಭಂಗ ಚಳವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಮಲೆನಾಡು ರೈತರ ಹೋರಾಟ ಸಮಿತಿಯ ಸಂಚಾಲಕ ತಿ.ನಾ.ಶ್ರೀನಿವಾಸ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಸಾಗುವಳಿದಾರರ ಮತ್ತು ಮುಳುಗಡೆ ಸಂತ್ರಸ್ಥರ ಸಮಸ್ಯೆಗಳು ಬಗೆಹರಿಯಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ಪ್ರಣಾಳಿಕೆಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿತ್ತು. ಆದರೂ ಕೂಡ ಬಗೆಹರಿಸಲಿಲ್ಲ ಎಂದು ಟೀಕಿಸಿದರು.ಅರಣ್ಯ ಮಂತ್ರಿಗೆ ಮಲೆನಾಡಿನ ಸಮಸ್ಯೆಗಳ ಅರಿವು ಸ್ವಲ್ಪವೂ ಇಲ್ಲವಾಗಿದೆ. ರೈತರ ಪಾಲಿಗೆ ಅವರು ರಾಕ್ಷಸನಂತೆ ಕಾಣುತ್ತಿದ್ದಾರೆ. ಹಾಗೆಯೇ ಮಲೆನಾಡಿಗರ ಸಮಸ್ಯೆಗಳ ಬಗ್ಗೆ ಗಂಧವೂ ಗೊತ್ತಿಲ್ಲದ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸೊನ್ನೆಯಾಗಿದ್ದಾರೆ ಎಂದು ಟೀಕಿಸಿದ ಅವರು ಕಂದಾಯ ಇಲಾಖೆಯವರು ಕೊಟ್ಟಿರುವ ಹಕ್ಕುಪತ್ರಗಳಿಗೆ ಬೆಲೆ ಇಲ್ಲ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಹೀಗಾದರೆ ರೈತರನ್ನು ರಕ್ಷಿಸುವವರು ಯಾರು ಎಂದು ಪ್ರಶ್ನಿಸಿದರು.ಈ ನಾಡಿಗಾಗಿ ತಮ್ಮ ಭೂಮಿ ತ್ಯಾಗ ಮಾಡಿದ ಮುಳುಗಡೆ ಸಂತ್ರಸ್ಥರು 40 ವರ್ಷದಿಂದ ಸರ್ಕಾರವೇ ತೋರಿಸಿದ ಜಾಗದಲ್ಲಿ ಕೃಷಿ ಮಾಡುತ್ತಿದೆ. ಇದು ಕಂದಾಯ ಭೂಮಿಯೇ ಆಗಿದ್ದು, ರೈತರ ಹೆಸರಿನಲ್ಲಿ ದಾಖಲೆಗಳು ಇದ್ದರೂ ಕೂಡ ಅರಣ್ಯ ಇಲಾಖೆ ಅವುಗಳನ್ನೆಲ್ಲ ರದ್ದುಮಾಡಿ ಈಗ ರೈತರಿಗೆ ನೋಟೀಸ್ ಕೊಡುತ್ತಿದ್ದಾರೆ ಎಂದು ಟೀಕಿಸಿದರು.
ಪಾದಯಾತ್ರೆ ಮರೆತರಾ ಸಚಿವ ಮಧು?ಮುಳುಗಡೆ ಸಂತ್ರಸ್ಥರನ್ನು ಕಡೆಗಣಿಸಿ, ಸಾಗುವಳಿದಾರರಿಗೆ ಕಿರುಕುಳ ನೀಡಲು ಕಾರಣವಾಗಿರುವ ಅರಣ್ಯ ಸಚಿವ ರಾಕ್ಷಸ ನಾದರೆ, ಜಿಲ್ಲಾ ಉಸ್ತುವಾರಿ ಸಚಿವ ಸೊನ್ನೆಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪಾದಯಾತ್ರೆ ಮಾಡಿ ದ್ದನ್ನು ಮರೆತುಬಿಟ್ಟಿದ್ದಾರೆ ಎಂದು ತಿ.ನಾ.ಶ್ರೀನಿವಾಸ ವ್ಯಂಗ್ಯವಾಡಿದರು.ಶಿವಮೊಗ್ಗ ತಾಲ್ಲೂಕಿನ ಹುಬ್ಳೆ ಬೈಲು, ಕಾಚಿನ ಕಟ್ಟೆ, ಹಾಲು ಲಕ್ಕವಳ್ಳಿ, ಎರಗನಾಳು, ತೋಟದಕೆರೆ, ಕಡೆಕಲ್ಲು, ಕುಸ್ಕೂರು ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ಈಗಾಗಲೇ ಅರಣ್ಯ ಇಲಾಖೆ ನೋಟೀಸ್ ಕೊಡುತ್ತಿದೆ. ಆದರೆ ಸರ್ಕಾರ ಮಾತ್ರ ಬಗರ್ ಹುಕುಂ ಸಾಗುವಳಿದಾರರ ನೆರವಿಗೆ ಬಾರದೆ ಕಣ್ಣು ಮುಚ್ಚಿಕೊಂಡು ಕುಳಿತಿದೆ ಎಂದು ದೂರಿದರು.ಮಲೆನಾಡು ರೈತರ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಬೇಕು. ಒಕ್ಕಲೆಬ್ಬಿಸುವುದನ್ನು ತಕ್ಷಣ ನಿಲ್ಲಿಸಬೇಕು. ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ ಕಾಯ್ದೆ ಕೂಡ ಮಾಡಬೇಕು ಎಂದು ಒತ್ತಾಯಿಸಿದರು.ಗೋಷ್ಠಿಯಲ್ಲಿ ಪ್ರಮುಖರಾದ ಎಸ್. ಟಿ. ಕೃಷ್ಣೇಗೌಡ, ಎಂ.ಬಿ. ಕೃಷ್ಣಪ್ಪ, ಮಹಾದೇವ ಸೇರಿದಂತೆ ಹಲವರಿದ್ದರು.