ಸಾರಾಂಶ
ಕೆಕೆಆರ್‌ಡಿಬಿ ಅನುದಾನ ಹಂಚಿಕೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದ್ದು, ತಾವು ಮಧ್ಯ ಪ್ರವೇಶಿಸಿ ಅನ್ಯಾಯ ಸರಿಪಡಿಸುವಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಅನುದಾನ ಹಂಚಿಕೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದ್ದು, ತಾವು ಮಧ್ಯ ಪ್ರವೇಶಿಸಿ ಅನ್ಯಾಯ ಸರಿಪಡಿಸುವಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಆ ಭಾಗದ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಮಂಗಳವಾರ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 5 ಸಾವಿರ ರು. ಅನುದಾನ ಘೋಷಿಸಿದ್ದರು. ಈ ಪೈಕಿ ಮುಖ್ಯಮಂತ್ರಿಗೆ ಶೇ.5, ಮಂಡಳಿ ಅಧ್ಯಕ್ಷ ಶೇ.3, ಯೋಜನಾ ಸಚಿವ ಶೇ.3 ಹಾಗೂ ಆರು ಜಿಲ್ಲಾ ಉಸ್ತುವಾರಿ ಸಚಿವರಿಗೆ ತಲಾ ಶೇ.5ರಷ್ಟು ಅನುದಾನ ಹಂಚಿಕೆ ಮಾಡಲಾಗಿದೆ.
ಈ 5 ಸಾವಿರ ಕೋಟಿ ರು. ಅನುದಾನದ ಪೈಕಿ ಈಗಾಗಲೇ 2 ಸಾವಿರ ಕೋಟಿ ರು. ಹಂಚಲಾಗಿದೆ. ಉಳಿದ 3 ಸಾವಿರ ಕೋಟಿ ರು. ಅನುದಾನವನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರಿಗೆ ಸಮಾನವಾಗಿ ಹಂಚುವ ಬದಲು ಕೇವಲ ಕಾಂಗ್ರೆಸ್ ಶಾಸಕರಿಗೆ ಹಂಚಲಾಗುತ್ತಿದೆ. ಇದರಿಂದ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿ ಕುಂಠಿತವಾಗಿದೆ.
ಅಂತೆಯೆ ಈ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಒಬ್ಬ ಶಾಸಕರೂ ಇಲ್ಲ. ಹೀಗಾಗಿ ಈ ಭಾಗದ ಜಿಲ್ಲೆಗಳ ಜನರ ಹಿತದೃಷ್ಟಿಯಿಂದ ತಾವು ಮಧ್ಯ ಪ್ರವೇಶಿಸಿ ಈ ಅನ್ಯಾಯವನ್ನು ಸರಿಪಡಿಸಬೇಕು ಎಂದು ನಿಯೋಗ ರಾಜ್ಯಪಾಲರಿಗೆ ಮನವಿ ಮಾಡಿದೆ.
ಆರ್.ಅಶೋಕ್ ನೇತೃತ್ವದ ನಿಯೋಗದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ಶಾಸಕರಾದ ಜನಾರ್ಧನ ರೆಡ್ಡಿ, ಪ್ರಭು ಚೌವ್ಹಾಣ್, ಶರಣು ಸಲಗಾರು, ಕರೆಯಮ್ಮ ಮತ್ತಿತರರಿದ್ದರು.