ರಾಜ್ಯಪಾಲರು ದಲಿತರು ಎಂಬ ಕಾರಣಕ್ಕೆ ಮುಗಿಬಿದ್ದ ಕಾಂಗ್ರೆಸ್‌ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ

| Published : Sep 02 2024, 02:17 AM IST / Updated: Sep 02 2024, 09:47 AM IST

Prahlad Joshi
ರಾಜ್ಯಪಾಲರು ದಲಿತರು ಎಂಬ ಕಾರಣಕ್ಕೆ ಮುಗಿಬಿದ್ದ ಕಾಂಗ್ರೆಸ್‌ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದುಳಿದ ವರ್ಗದವರು ಎಂಬ ಕಾರಣಕ್ಕೆ ತಮ್ಮನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ. ರಾಜ್ಯಪಾಲರೂ ಅತ್ಯಂತ ಕೆಳವರ್ಗದಿಂದಲೇ ಬಂದವರು ಎಂಬುದನ್ನು ಅರಿಯಬೇಕು ಎಂದು ಪ್ರಹ್ಲಾದ ಜೋಶಿ ತಿರುಗೇಟು ನೀಡಿದರು.

ಹುಬ್ಬಳ್ಳಿ:  ರಾಜ್ಯಪಾಲರು ದಲಿತರು ಎಂಬ ಕಾರಣಕ್ಕೆ ಕಾಂಗ್ರೆಸ್‌ ಅವರ ವಿರುದ್ಧ ಮುಗಿಬಿದ್ದಿದ್ದು, ಅವರನ್ನು ಹೆದರಿಸುವ ತಂತ್ರ ಅನುಸರಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗದವರು ಎಂಬ ಕಾರಣಕ್ಕೆ ತಮ್ಮನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ. ರಾಜ್ಯಪಾಲರೂ ಅತ್ಯಂತ ಕೆಳವರ್ಗದಿಂದಲೇ ಬಂದವರು. ದಲಿತರು ಎಂಬ ಕಾರಣಕ್ಕೆ ಅವರ ವಿರುದ್ಧ ಮುಗಿಬಿದ್ದಿದ್ದಾರೆಯೇ? ಎಂದು ವಾಗ್ದಾಳಿ ನಡೆಸಿದರು.

ಹಿಂದೆ ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತನಿಖೆಗೆ ಅನುಮತಿ ನೀಡಿದರೆ ಸರಿ. ಈಗ ಸಿದ್ದರಾಮಯ್ಯ ವಿರುದ್ಧ ಒಬ್ಬ ದಲಿತ ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟರೆ ತಪ್ಪೇ? ಇದು ಕಾಂಗ್ರೆಸ್‌ನ ದಲಿತ ವಿರೋಧಿ ಮನಸ್ಥಿತಿ ತೋರಿಸುತ್ತದೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಯಾವಾಗಲೂ ಹಿಂದೂ ಹಾಗೂ ದಲಿತ ವಿರೋಧಿಯೇ ಆಗಿದೆ. ಹಿಂದುಳಿದ ವರ್ಗದ ದೇವರಾಜ ಅರಸು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಇಂದಿರಾಗಾಂಧಿ ಅಲ್ಲವೇ? ಬಂಗಾರಪ್ಪ ಅವರನ್ನು ಕೆಳಗಿಳಿಸಿದ್ದು ಸೋನಿಯಾ ಗಾಂಧಿ ಅಲ್ಲವೇ ಎಂದು ಪ್ರಶ್ನಿಸಿದರು.

ವಾಲ್ಮೀಕಿ, ಮುಡಾ ಹಗರಣದ ವಿರುದ್ಧ ಹೋರಾಟ ಶುರು ಮಾಡಿದ ಮೇಲೆ ಬಿಜೆಪಿ ಹಗರಣ ಬಿಚ್ಚಿಡುತ್ತೇವೆ ಎಂದು ಕಾಂಗ್ರೆಸ್‌ ಬೆದರಿಕೆ ತಂತ್ರ ಅನುಸರಿಸುತ್ತಿದೆ. ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೂವರೆ ವರ್ಷ ಏಕೆ ಸುಮ್ಮನಿತ್ತು? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಬಾಲಿಶ ಹೇಳಿಕೆ:  ಚುನಾವಣಾ ಬಾಂಡ್ ವಿಚಾರದಲ್ಲಿ ಕಾಂಗ್ರೆಸ್ ಅತ್ಯಂತ ಬಾಲಿಶವಾಗಿ ಮಾತನಾಡುತ್ತಿದೆ. ಚುನಾವಣಾ ಬಾಂಡ್ ವಿಚಾರದಲ್ಲಿ ಸುಪ್ರಿಂ ಕೋರ್ಟ್ ತೀರ್ಪನ್ನು ನಾವು ಒಪ್ಪಿಕೊಂಡಿದ್ದೇವೆ. ಆದರೆ, ಕಾಂಗ್ರೆಸ್ಸಿನ ವೃಥಾ ಆರೋಪ ಸರಿಯಲ್ಲ ಎಂದು ಖಂಡಿಸಿದರು.

ಚುನಾವಣಾ ಬಾಂಡ್ ಮೂಲಕ ಕಾಂಗ್ರೆಸ್ ₹1600 ಕೋಟಿ ಪಡೆದಿಲ್ಲವೇ? ತೃಣಮೂಲ ಕಾಂಗ್ರೆಸ್ ಸಹ ಇದರಲ್ಲಿ ವೈಟ್ ಮನಿ ಪಡೆದಿಲ್ಲವೇ ಎಂದು ಜೋಶಿ ಪ್ರಶ್ನಿಸಿದರು.

ಬಿಜೆಪಿ ದೊಡ್ಡ ಪಕ್ಷ, ಅದಕ್ಕೆ ಹೆಚ್ಚು ಹಣ ಹೋಗುತ್ತದೆ ಎಂಬ ಅಸೂಯೆ ಕಾಂಗ್ರೆಸ್ಸಿನದ್ದಾಗಿದೆ. ಆದರೆ, ಚುನಾವಣಾ ಬಾಂಡ್ ಯಾವುದೇ ಪಕ್ಷಕ್ಕಿರಲಿ, ವೈಟ್ ಮನಿ ಕೊಟ್ಟಿದೆಯೇ ಹೊರತು ಅಕ್ರಮ ಹಣವನ್ನಲ್ಲ ಎಂದರು.