ಸಾರಾಂಶ
ದ್ವಾರಮಕ್ಕಿಯ ಮಾಜಿ ಸಚಿವ ಡಿ.ಎನ್.ಜೀವರಾಜ್ ಮನೆಯಲ್ಲಿ ಭೀಮ ಸಂಗಮ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಬಿಜೆಪಿ ದಲಿತ ವಿರೋದಿ, ಸಂವಿಧಾನ ವಿರೋಧಿ ಎಂದು ಕಳೆದ 60 ವರ್ಷದಿಂದಲೂ ಕಾಂಗ್ರೆಸ್ ಪಕ್ಷ ಹಾಗೂ ಕೆಲವು ಬುದ್ಧಿ ಜೀವಿಗಳು ಸುಳ್ಳನ್ನು ಹೇಳಿಕೊಂಡೇ ಬರುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮಾಜಿ ಸಚಿವ ಎನ್.ಮಹೇಶ್ ಆರೋಪಿಸಿದರು.
ಬುಧವಾರ ದ್ವಾರಮಕ್ಕಿಯ ಮಾಜಿ ಸಚಿವ ಡಿ.ಎನ್.ಜೀವರಾಜ್ ಮನೆ ಅಂಗಳದಲ್ಲಿ ಶೃಂಗೇರಿ ಕ್ಷೇತ್ರ ಮಟ್ಟದ ದಲಿತರು ಹಾಗೂ ಹಿಂದಳಿದ ವರ್ಗದವರಿಗೆ ಏರ್ಪಡಿಸಿದ್ದ ಭೀಮ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದವರು ಯಾರು, ಅವರಿಗೆ ಗೌರವ ನೀಡುತ್ತಿರುವುವರು ಯಾರು ಎಂದು ವಿಮರ್ಶೆ ಮಾಡಬೇಕಾಗಿದೆ. ಬಿಜೆಪಿ ಸಂವಿಧಾನವನ್ನು ದುರ್ಬಲ ಗೊಳಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದವರು ಆರೋಪಿಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಸಂವಿಧಾನವನ್ನು ದುರ್ಬಲಗೊಳಿಸಿದೆಯೇ ? ಎಂದು ಪ್ರಶ್ನಿಸಿದರು.ಭಾರತ ದೇಶದ ಐಕ್ಯತೆ ಕಾಪಾಡಬೇಕು ಎಂದು ಡಾ.ಅಂಬೇಡ್ಕರ್ ಬರೆದ ಸಂವಿಧಾನ ಹೇಳುತ್ತಿದೆ. ಸಂವಿಧಾನದಿಂದ ಧಾರ್ಮಿಕ, ಆರ್ಥಿಕ, ಸಾಮಾಜಿಕ, ಆಹಾರ ಉತ್ಪಾದನೆ, ಉದ್ಯೋಗದಲ್ಲಿ ಸ್ವಾತಂತ್ರ ಸಿಕ್ಕಿದೆ. ಸಂವಿಧಾನದಿಂದಲೇ ಸಾಮಾನ್ಯ ಮನುಷ್ಯನು ಸಹ ಉನ್ನತ ಹುದ್ದೆಗೆ ಹೋಗಬಹುದಾಗಿದೆ. ಜಾತಿ, ಧರ್ಮವನ್ನು ನಾವು ಸೃಷ್ಠಿಸಿಕೊಂಡಿದ್ದೇವೆ. ಡಾ.ಅಂಬೇಡ್ಕರ್ ಸಂವಿಧಾನದ ಮೂಲಕ ರಕ್ತ ರಹಿತವಾಗಿ ದೇಶಕ್ಕೆ ಸಮಾನತೆ ತಂದಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಡಾ.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದೆ. 1951 ರಲ್ಲಿ ಡಾ.ಅಂಬೇಡ್ಕರ್ ಕೇಂದ್ರದಲ್ಲಿ ಕಾನೂನು ಮಂತ್ರಿಯಾಗಿದ್ದಾಗ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ ಕೊಡಬೇಕು ಎಂದು ಆಗ್ರಹಿಸಿದ್ದರು. ಪ್ರಧಾನಿಯಾಗಿದ್ದ ನೆಹರೂ ಅವಕಾಶ ನೀಡದಿದ್ದಾಗ ಅಂಬೇಡ್ಕರ್ ರಾಜೀನಾಮೆ ನೀಡಿದ್ದರು. ಎಸ್.ಸಿ, ಎಸ್.ಟಿ. ಅಲ್ಲದೆ ಓಬಿಸಿ ಯವರಿಗೂ ಶೇ. 50 ರಷ್ಟು ಮೀಸಲಾತಿ ನೀಡಬೇಕು ಎಂದು ಅಂಬೇಡ್ಕರ್ ಒತ್ತಾಯಕ್ಕೆ ನೆಹರೂ ಅವಕಾಶ ನೀಡಲಿಲ್ಲ.1952 ರಲ್ಲಿ ದೇಶದ ಮೊದಲ ಚುನಾವಣೆಯಲ್ಲಿ ಡಾ.ಅಂಬೇಡ್ಕರ್ ಬಾಂಬೆಯಿಂದ ಸ್ವರ್ಧಿಸಿದ್ದರು. ಆಗ ಕಾಂಗ್ರೆಸ್ ಅಂಬೇಡ್ಕರ್ ಅವರ ಆಪ್ತರನ್ನೇ ಎದುರಾಳಿಯಾಗಿ ನಿಲ್ಲಿಸಿ ಅಂಬೇಡ್ಕರ್ ಅವರನ್ನು ಸೋಲಿಸಿದ್ದರು.1954 ರ ಉಪ ಚುನಾವಣೆಯಲ್ಲಿ ಅಂಬೇಡ್ಕರ್ ಮತ್ತೆ ಸ್ಪರ್ಧಿಸಿದ್ದರು. ಆಗಲೂ ಕಾಂಗ್ರೆಸ್ ಪಿತೂರಿ ಮಾಡಿ ಅಂಬೇಡ್ಕರ್ ಅವರನ್ನು ಸೋಲಿಸಲಾಯಿತು. 1956 ರಲ್ಲಿ ಅಂಬೇಡ್ಕರ್ ತೀರಿಹೋದಾಗ ಅವರ ಅಂತ್ಯಕ್ರಿಯೆ ಮಾಡಲು ದೆಹಲಿಯಲ್ಲಿ ಜಾಗ ನೀಡಲಿಲ್ಲ. ಕಡೆಗೆ ಮುಂಬಯಿ ಸಮದ್ರ ತೀರದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ವಿಚಿತ್ರ ಎಂದರೆ ಅಂಬೇಡ್ಕರ್ ಅವರ ಸೋಲಿಸಿದ್ದ ಅವರ ಆಪ್ತರಿಗೆ 1960ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.1991 ರಲ್ಲಿ ವಿ.ಪಿ.ಸಿಂಗ್ ಪ್ರಧಾನಿಯಾದಾಗ ಅಂಬೇಡ್ಕರ್‌ಗೆ ಭಾರತ ರತ್ನ ನೀಡಿ ಗೌರವಿಸಲಾಯಿತು ಎಂದರು.
ವಾಜಪೇಯಿ ಪ್ರಧಾನಿಯಾಗಿದ್ದಾಗ ಅಂಬೇಡ್ಕರ್ ಮನೆಯನ್ನು ಸ್ಮಾರಕ ಮಾಡಲು ಆ ಜಾಗ ಕಾಯ್ದಿರಿಸಿದ್ದರು. ಆದರೆ, ನಂತರ ಕಾಂಗ್ರೆಸ್ ಸರ್ಕಾರ ಬಂದಿದ್ದು 10 ವರ್ಷಗಳ ಕಾಲ ಏನನ್ನು ಮಾಡಲಿಲ್ಲ. 2015 ರಲ್ಲಿ ಮೋದಿ ಸರ್ಕಾರ ಅಂಬೇಡ್ಕರ್ ಹುಟ್ಟಿದ ಮನೆಯನ್ನು ಮಹಾ ಪರಿನಿರ್ವಾಣ ರಾಷ್ಟ್ರೀಯ ಸ್ಮಾರಕವಾಗಿ ಮಾಡಲಾಗಿದೆ. ಅವರು ಓದಿದ ಮನೆ, ಅಂತ್ಯಕ್ರಿಯೆ ಸ್ಥಳವನ್ನು ಸ್ಮಾರಕ ಮಾಡಲಾಗಿದೆ. 2016 ರಲ್ಲಿ ನರೇಂದ್ರ ಮೋದಿ ಸರ್ಕಾರ ಅಂಬೇಡ್ಕರ್ ಅವರ 125ನೇ ಹುಟ್ಟುಹಬ್ಬದ ನೆನಪಿ ಗಾಗಿ ಭೀಮ್ ಆ್ಯಪ್ ತಂದಿದ್ದಾರೆ. ಇದುವರೆಗೆ ಸಂವಿಧಾನಕ್ಕೆ 175 ತಿದ್ದುಪಡಿ ತಂದಿದ್ದರೆ ಅದರಲ್ಲಿ ವಾಜಪೇಯಿ ಸರ್ಕಾರ 14 ತಿದ್ದುಪಡಿ, ಮೋದಿ ಸರ್ಕಾರ 8 ತಿದ್ದುಪಡಿ ತಂದಿದೆ. ಕಾಂಗ್ರೆಸ್ 42 ಬಾರಿ ತಿದ್ದುಪಡಿ ತಂದಿದೆ ಎಂದರು.ಕಾಂಗ್ರೆಸ್ ಇತಿಹಾಸವನ್ನು ತಿರುಚುತ್ತಿದೆ. ಬಿಜೆಪಿ ಬಗ್ಗೆ ಸುಳ್ಳನ್ನೇ ಹೇಳಿಕೊಂಡು ತಿರುಗುತ್ತಿದ್ದಾರೆ. ಸತ್ಯ ತಿರುಚಿಸುತ್ತಿದ್ದಾರೆ. ಸಾಕ್ಷಿ ಇಲ್ಲದೆ ಯಾವುದನ್ನು ನಂಬಬೇಡಿ ಎಂದು ದಲಿತ ಸಮುದಾಯಕ್ಕೆ ಕರೆ ನೀಡಿದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಕಾಂಗ್ರೆಸ್ ಪಕ್ಷದವರು ಹಲವಾರು ವರ್ಷಗಳಿಂದ ಸುಳ್ಳನ್ನೇ ಹೇಳಿಕೊಂಡು ಬಂದು ಸತ್ಯ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಸಂವಿಧಾನ ವಿರೋದಿ ಅಲ್ಲ. ನಾನು ಶಾಸಕನಾಗಿದ್ದಾಗ ಶೃಂಗೇರಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ದಲಿತ ಕೇರಿಗಳಿಗೆ ಕಾಂಕ್ರೀಟ್ ರಸ್ತೆ ಮಾಡಿಸಿಕೊಟ್ಟಿದ್ದೆ. ಗಂಗಾ ಕಲ್ಯಾಣ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದೆ.ಇದರಿಂದ ದಲಿತ ಸಮುದಾಯವರಿಗೆ, ಹಿಂದುಳಿದ ವರ್ಗದವರಿಗೆ ಅನುಕೂಲವಾಗಿತ್ತು ಎಂದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನರೇಂದ್ರ ಮಾತನಾಡಿ, ಬಿಜೆಪಿ ,ಆರ್ ಎಸ್.ಎಸ್ ದಲಿತ ವಿರೋಧಿಗಳು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದ್ದರಿಂದ ಜನರಿಗೆ ಸತ್ಯ ಹೇಳಲು ರಾಷ್ಟ ಮಟ್ಟದಲ್ಲೇ ಕಾರ್ಯಕ್ರಮ ಹಾಕಿಕೊಂಡಿದ್ದು ರಾಷ್ಟೀಯ ಸಂವಿಧಾನ ಗೌರವ ಅಭಿಯಾನ ನ.26 ರಿಂದ ಜ. 26 ರವರೆಗೂ ದೇಶದ ಎಲ್ಲಾ ಹಾಲಿ ಹಾಗೂ ಮಾಜಿ ಶಾಸಕರು, ಕೇಂದ್ರ ಸಚಿವರ ಮನೆಯಲ್ಲಿ ಭೀಮ ಸಂಗಮ ಕಾರ್ಯಕ್ರಮ ನಡೆಸಿ ದಲಿತರಿಗೆ ಸತ್ಯ ಹೇಳುತ್ತಾ ಬಂದಿದ್ದೇವೆ. ಮಹಿಳೆಯರಿಗೆ ಮನೆಯ ಒಳಗೆ ಕರೆದು ಅರಸಿನ, ಕುಂಕುಮ ನೀಡುತ್ತೇವೆ. ನಂತರ ಸಹ ಪಂಕ್ತಿ ಬೋಜನ ನಡೆಸುತ್ತಿದ್ದೇವೆ ಎಂದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ರಾಜ್ಯ ಎಸ್.ಸಿ.ಮೋರ್ಚದ ವಕ್ತಾರ ಶೃಂಗೇರಿ ಶಿವಣ್ಣ,ತಾಲೂಕು ಬಿಜೆಪಿ ಅದ್ಯಕ್ಷ ವಿ.ನೀಲೇಶ್, ನಿಕಟಪೂರ್ವ ಅಧ್ಯಕ್ಷ ಅರುಣಕುಮಾರ್, ಕೊಪ್ಪ ತಾ.ಬಿಜೆಪಿ ಅಧ್ಯಕ್ಷ ದಿನೇಶ್ ಹೊಸೂರು ಇದ್ದರು. ಭಾಗವಹಿಸಿದ್ದ ಎಲ್ಲರಿಗೂ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.