ರಾಜ್ಯದಲ್ಲಿ ಬರಕ್ಕೆ ರೈತರು ಕಂಗಾಲಾಗಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಬರಬೇಕಿದ್ದ ಸರ್ಕಾರ ವಿಶೇಷ ಸದನದಲ್ಲಿ ಒಬ್ಬ ರೈತನಿಗೆ ₹2500 ಅಲ್ಪ ಮೊತ್ತದ ಪರಿಹಾರ ಘೋಷಣೆ ಮಾಡಿದ್ದಾರೆ.

ಹೂವಿನಹಡಗಲಿ: ದೇಶದ ಎಲ್ಲ ಕಡೆಗೂ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಯಾವುದೇ ಗೊಂದಲ, ಗಲಾಟೆ ಇಲ್ಲದೇ ನೆಡೆಯುತ್ತಿದೆ. ಆದರೆ ಕಾಂಗ್ರೆಸ್ ಇದನ್ನು ಸಹಿಸಿಕೊಳ್ಳಲು ಆಗದೇ ವಿನಾ ಕಾರಣ ಮುಖ್ಯ ಚುನಾವಣಾ ಆಯೋಗದ ಆಯುಕ್ತರ ವಿರುದ್ಧ ದೂರುತ್ತಿದ್ದಾರೆ. ಕಾಂಗ್ರೆಸ್‌ಗೆ ಸೋಲಿನ ಭೀತಿ ಕಾಡುತ್ತಿದ್ದು, ಪಾದಯಾತ್ರೆ ಹೆಸರಿನಲ್ಲಿ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ಕೃಷ್ಣನಾಯ್ಕ ಆರೋಪಿಸಿದರು.

ಇಲ್ಲಿನ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಆರ್ ಪ್ರಕ್ರಿಯೆ ಕುರಿತು ಕೋರ್ಟ್‌ಗೂ ಹೋಗಿದ್ದ ಕಾಂಗ್ರೆಸಿಗೆ ಜಯ ಸಿಕ್ಕಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಲು, ದೂರಲು ಯಾವುದೇ ವಿಷಯವಿಲ್ಲ. ಅದಕ್ಕೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ಟೀಕೆ ಮಾಡುತ್ತಿದ್ದಾರೆಂದು ಹೇಳಿದರು.

ರಾಜ್ಯದಲ್ಲಿ ಬರಕ್ಕೆ ರೈತರು ಕಂಗಾಲಾಗಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಬರಬೇಕಿದ್ದ ಸರ್ಕಾರ ವಿಶೇಷ ಸದನದಲ್ಲಿ ಒಬ್ಬ ರೈತನಿಗೆ ₹2500 ಅಲ್ಪ ಮೊತ್ತದ ಪರಿಹಾರ ಘೋಷಣೆ ಮಾಡಿದ್ದಾರೆ.ಇದನ್ನು ನೋಡಿದರೆ ರೈತರಿಗೆ ಅವಮಾನಿಸಿದ್ದಾರೆ. ರೈತರಿಗೆ ಕನಿಷ್ಠ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಕೇಂದ್ರಕ್ಕೆ ಬರ ಕುರಿತು ಪತ್ರ ಬರೆಯಲು ಮೂರು ತಿಂಗಳು ಕಾಲಹರಣ ಮಾಡಿ ದೆಹಲಿಯಲ್ಲಿ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದರು ಬರ ನಿರ್ವಹಣೆಗೆ ಕೇಂದ್ರ ಸಮರ್ಪಕ ಅನುದಾನ ನೀಡುತ್ತಿಲ್ಲ ಎಂದು ವಿನಾಃ ಕಾರಣ ಕೇಂದ್ರದ ಕಡೆಗೆ ಬೊಟ್ಟು ತೋರಿಸುತ್ತಿದ್ದಾರೆಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ರಾಜ್ಯದಲ್ಲಿ ಒಟ್ಟಾರೆ ಕಾಂಗ್ರೆಸ್ ಸರ್ಕಾರ ದಿವಾಳಿ ಅಂಚಿಗೆ ಹೋಗಿದೆ ಎಂದರು.

ಮಾಜಿ ಡಿಸಿಎಂ ಆಗಿದ್ದ ಎಂ.ಪಿ. ಪ್ರಕಾಶರ ಅವಧಿಯಲ್ಲಿ ಹೂವಿನಹಡಗಲಿ ಕ್ಷೇತ್ರ ರಾಜ್ಯದಲ್ಲೇ ವಿಶೇಷವಾಗಿತ್ತು. ಕೆಲ ಕಿಡಿಗೇಡಿಗಳು ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಅಡ್ಡಿ ಮಾಡಿ ಹಾಳು ಮಾಡಲು ಯತ್ನಿಸಿ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಆದರೆ ಇದನ್ನು ಚಾಲೆಂಜ್‌ ಆಗಿ ತೆಗೆದುಕೊಂಡು ಯಾವುದೇ ಗೊಂದಲ ಗಲಾಟೆ ಇಲ್ಲದೇ ಇಂತಹ ಕೆಲಸ ಮಾಡುವವರಿಗೆ ಎಚ್ಚರಿಕೆ ನೀಡಿದ್ದೇವೆ. ಇದಕ್ಕಾಗಿ ಪೊಲೀಸ್‌ ಇಲಾಖೆ ಹಗಳಿರುಳು ಶ್ರಮಿಸಿ ಸೂಕ್ತ ಬಂದೋಬಸ್ತ್‌ ಮಾಡಿ ಯಶಸ್ವಿಗೊಳಿಸಿದ್ದಾರೆಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌. ಸಂಜೀವರೆಡ್ಡಿ ಮಾತನಾಡಿ, ಕೇಂದ್ರದಲ್ಲಿ ಸತತ ಸೋಲಿನ ಹತಾಸೆಯಲ್ಲಿರುವ ಕಾಂಗ್ರೆಸ್‌ ತನ್ನ ಹೊಣೆಗಾರಿಕೆ ಮುಚ್ಚಿಕೊಳ್ಳಲು, ಇನ್ನಿಲ್ಲದ ಕೆಲಸಕ್ಕೆ ಕೈಹಾಕುತ್ತಿದ್ದಾರೆ, ಓಟ್‌ ಚೋರಿ ಆರೋಪಕ್ಕೆ ಆಧಾರವೇ ಇರಲಿಲ್ಲ, ಸ್ವಪಕ್ಷದ ಸಚಿವ ಟಿ.ಎನ್‌. ರಾಜಣ್ಣ ಓಟ್ ಚೋರಿ ಬಗ್ಗೆ ಮಾತನಾಡಿದಕ್ಕಾಗಿ ಅವರನ್ನು ಪಕ್ಷದಿಂದಲೇ ವಜಾ ಮಾಡಿದ್ದಾರೆ. ಅದನ್ನೇ ಅರಗಿಸಿಕೊಳ್ಳಲು ಕಾಂಗ್ರೆಸ್‌ ಪಕ್ಷಕ್ಕೆ ಆಗುತ್ತಿಲ್ಲ, ದೇಶದ ಸ್ವಯತ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇಡಿ, ಸಿಬಿಐ ದಾಳಿ ಮಾಡಿದರೂ ಸುಳ್ಳು ಆರೋಪ ಕಾಂಗ್ರೆಸ್‌ ಮಾಡುತ್ತಿದೆ ಎಂದು ದೂರಿದರು.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯು ಪ್ರಧಾನಿ ನೆಹರು ಕಾಲದಿಂದಲ್ಲೂ ನಡೆಯುತ್ತಿದೆ, 2011 ರಲ್ಲೇ ಆಗಬೇಕಿತ್ತು. ಕೆಲ ಸಮಸ್ಯೆಗಳಿಂದ ಈಗ ಆಗುತ್ತಿದೆ. ಇದಕ್ಕೆ ವಿರೋಧ ಪಕ್ಷ ನಾಯಕ ರಾಹುಲ್‌ ಗಾಂಧಿ ಬಾಲಶ ಹೇಳಿಕೆ ನೀಡುತ್ತಿದ್ದಾರೆ. ಎಸ್‌ಐಆರ್‌ ಕುರಿತು ಮೂರು ಜನ ಮುಖ್ಯ ಚುನಾವಣೆ ಆಯುಕ್ತರು ಈಗಾಗಲೇ ಸ್ಪಷ್ಟೀಕಣ ನೀಡಿದ್ದಾರೆಂದು ಹೇಳಿದರು.

ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್‌, ಜಿಲ್ಲಾ ಉಪಾಧ್ಯಕ್ಷ ಈಟಿ ಲಿಂಗರಾಜ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಮಂಜುನಾಥ ಜೈನ್‌, ನವಲಿ ಶಂಕರ್‌, ಜೆ.ಶಿವರಾಜ ಇದ್ದರು.