ಸಾರಾಂಶ
ಹುಬ್ಬಳ್ಳಿ:
ಕಾಂಗ್ರೆಸ್‌ನವರು ಗ್ಯಾರಂಟಿ ಯೋಜನೆಗಳಿಂದ ಆಸಕ್ತಿ ಕಳೆದುಕೊಂಡು ಹಾಸನ್ ಪೆನ್‌ಡ್ರೈವ್ ಹಗರಣವನ್ನೇ ನೆಚ್ಚಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ವಾರದವರೆಗೂ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆಯೇ ಮಾತನಾಡುತ್ತಿದ್ದರು. ಮೊದಲ ಹಂತದ ಚುನಾವಣೆಗೆ ಎರಡು ದಿನ ಮುಂಚಿತವಾಗಿ ಈ ಪೆನ್‌ಡ್ರೈವ್ ಬಿಡುಗಡೆ ಆಯಿತು. ಆಗಿನಿಂದ ಗ್ಯಾರಂಟಿ ಯೋಜನೆಗಳನ್ನೆಲ್ಲ ಮರೆತು ಬರೀ ಪೆನ್‌ಡ್ರೈವ್ ಎಂದು ಜಪ ಮಾಡುತ್ತಿದ್ದಾರೆ. ಇದೇ ತಮಗೆ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ ಕಾಂಗ್ರೆಸ್ಸಿಗರು ಎಂದು ಟೀಕಿಸಿದರು.
ಹಾಗಂತ ಪೆನ್‌ಡ್ರೈವ್ ಪ್ರಕರಣವನ್ನು ನಾವೇನು ಬೆಂಬಲಿಸುವುದಿಲ್ಲ. ಅದನ್ನು ನಾವಷ್ಟೇ ಅಲ್ಲ. ಯಾರೊಬ್ಬರು ಬೆಂಬಲಿಸುವಂತೆಯೇ ಇಲ್ಲ. ಈ ವಿಷಯದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ. ಯಾರೇ ಆಗಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ಒತ್ತಾಯಿಸಿದರು.ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಅತಿ ಕಠಿಣವಾದ ಶಿಕ್ಷೆಯಾಗಬೇಕು. ಈ ಸಂಬಂಧ ಸರ್ಕಾರ ಎಸ್‌ಐಟಿಯನ್ನು ರಚನೆ ಮಾಡಿದ್ದು ಆಗಿದೆ. ತನಿಖೆಯಾಗಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದ ಅವರು, ಪ್ರಕರಣದ ಬಗ್ಗೆ ಬಿಜೆಪಿ ನಾಯಕರಿಗಾಗಿ, ತಮಗಾಗಲಿ ಯಾವುದೇ ಪತ್ರ ಬಂದಿಲ್ಲ. ಯಾವ ಪುಣ್ಯಾತ್ಮ ಹೇಳಿದ್ದಾನೋ ಅವರನ್ನೇ ಕೇಳಿ ಎಂದರು.
ಆದರೆ ಕಾಂಗ್ರೆಸ್‌ನವರಿಗೆ ಮೊದಲೇ ಗೊತ್ತಿತ್ತು. ಹೀಗಾಗಿ ಅದನ್ನು ಚುನಾವಣೆಗೆ ಎರಡ್ಮೂರು ದಿನ ಬಾಕಿಯಿರುವಾಗಲೇ ಬಿಡುಗಡೆಯಾಗಿದೆ. ಚುನಾವಣೆಯಲ್ಲಿ ಅದನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಬೇಕು ಎಂದು ಶ್ರಮಿಸುತ್ತಿದೆ. ಆದರೆ ಅದು ಫಲನೀಡುವುದಿಲ್ಲ. ಮೋದಿ ಅವರು 3ನೆಯ ಬಾರಿಗೆ ಪ್ರಧಾನಿಯಾಗಬೇಕೆಂದು ಜನತೆಯೇ ಸಂಕಲ್ಪ ಮಾಡಿ ಆಗಿದೆ. ಹೀಗಾಗಿ ಈ ಪೆನ್‌ಡ್ರೈವ್ ಚುನಾವಣೆಯಲ್ಲಿ ಎಫೆಕ್ಟ್ ಆಗಲ್ಲ ಎಂದರು.28 ಕ್ಷೇತ್ರಗಳಲ್ಲಿ ಗೆಲವು:ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಕಳೆದ ಒಂದು ವಾರದಿಂದ ಕಲ್ಯಾಣ ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದೇನೆ. ನಮ್ಮ ನಿರೀಕ್ಷೆಗೆ ಮೀರಿದ ಜನಸ್ಪಂದನೆ ದೊರೆತಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಜನ ಸಂಕಲ್ಪ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎದಿಂದ ದೇಶಕ್ಕೆ ಒಳಿತಾಗುತ್ತದೆ ಎಂಬುದು ಜನರಿಗೆ ಮನವರಿಕೆ ಆಗಿದೆ ಎಂದರು.
ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದೆ ಗೆಲ್ಲುತ್ತದೆ ಎಂದ ಅವರು, ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಆತ್ಮಹತ್ಯೆ, ಲವ್ ಜಿಹಾದ್ ಪ್ರಕರಣ ಹೆಚ್ಚುತ್ತಿವೆ. ದಲಿತ ಹೆಣ್ಣುಮಗಳ ಮೇಲೆ ಸದ್ದಾಂ ಹುಸೇನ ಎಂಬುವವನು ನೀಚ ಕೃತ್ಯ ಎಸಗಿದ್ದಾನೆ. ಹೀಗಿದ್ದರೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತ್ತಿದೆ.ಸದ್ದಾಂಹುಸೇನ ಎಷ್ಟೊಂದು ನೀಚ ಎಂದರೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಅಂದರೆ ಇವರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದಾಗಲೂ ಬಂಧಿಸಲು ಮೀನಮೇಷ ಎಣಿಸುತ್ತಿದ್ದರು. ಕೊಲೆಗಡುಕರ ವಿರುದ್ಧ ಕ್ರಮಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿರಾತಂಕವಾಗಿ ಲವ್ ಜಿಹಾದ್ ನಡೆಯುತ್ತಿವೆ. ಕೊಲೆಗಡಕರಿಗೆ ರಾಜ್ಯ ಸರ್ಕಾರವೇ ರಕ್ಷಣೆ ನೀಡುತ್ತಿದೆ. ತುಷ್ಟಿಕರಣದ ರಾಜಕಾರಣಕ್ಕೆ ಜನರೇ ತಕ್ಕ ಉತ್ತರ ಕೊಡುತ್ತಾರೆ. ಕಾಂಗ್ರೆಸ್ ಹಿಂದೂ ವಿರೋಧಿ ಸರ್ಕಾರ ಎಂದು ಜನರಿಗೆ ಗೊತ್ತಾಗಿದೆ ಎಂದರು.ಈ ವೇಳೆ ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಮೇಯರ್ ವೀಣಾ ಬರದ್ವಾಡ ಸೇರಿದಂತೆ ಹಲವರಿದ್ದರು.