ಸಾರಾಂಶ
ಹುಬ್ಬಳ್ಳಿ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಪರಾಧಿಗಳಿಗೆ ಸ್ವರ್ಗವಾಗಿದೆ. ಈ ಸರ್ಕಾರವಿರುವುದೇ ನಮ್ಮಂತಹ ಅಪರಾಧಿಗಳನ್ನು ರಕ್ಷಿಸುವುದಕ್ಕೆ ಎನ್ನುವ ಧೈರ್ಯ ಬಂದಂತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆಯಲ್ಲಿ ಆಕಳು ಕೆಚ್ಚಲು ಕತ್ತರಿಸಿದ ಪ್ರಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಗಟ್ಟಿಯಾಗಿದ್ದರೆ ಇಂತಹ ಪ್ರಕರಣ ನಡೆಯುತ್ತಿರಲಿಲ್ಲ. ಇದನ್ನೆಲ್ಲ ನೋಡಿದರೆ ಸರ್ಕಾರದ ವೈಫಲ್ಯ ಸ್ಪಷ್ಟವಾಗಿ ಕಾಣುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದಾಗೆಲ್ಲ ಅಲ್ಪಸಂಖ್ಯಾತರ ತುಷ್ಟೀಕರಣ ನಡೆಯುತ್ತದೆ. ಅವರ ಮೇಲಿನ ಪ್ರಕರಣ ಹಿಂಪಡೆದ ಹಿನ್ನೆಲೆ ಸಮಾಜದ್ರೋಹಿ ಶಕ್ತಿಗಳಿಗೆ ಬಲ ಬಂದಿದೆ. ಇದರಿಂದಾಗಿಯೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.
ಜಮೀರ್‌ಗೆ ಬುದ್ಧಿ ಇದೆಯಾ?ಇದರ ಬಗ್ಗೆ ಹೋರಾಟ ಮಾಡಿದರೆ ಇದು ರಾಜಕೀಯ ಪ್ರೇರಿತ ಎಂದು ಮುಖ್ಯಮಂತ್ರಿಗಳು ಅಸಡ್ಡೆಯಾಗಿ ಹೇಳಿಕೆ ನೀಡುತ್ತಾರೆ. ಹೀಗಾದಲ್ಲಿ ಜನರ ಬದುಕು ಹೇಗೆ ಎನ್ನುವ ಚಿಂತನೆ ಮಾಡಬೇಕಿದೆ. ಕುಡಿದ ಮತ್ತಿನಲ್ಲಿ ಕೊಲೆ ಮಾಡಿದರೆ ಬಿಡುತ್ತಾರೆಯೇ? ಈ ರೀತಿಯಾಗಿ ಹೇಳಿದವರ ಮನೆಯಲ್ಲಿ ಕೊಲೆ ಮಾಡಿದರೆ ಬಿಡುತ್ತಾರೆಯೇ? ಇದ್ದ ಹಸುಗಳನ್ನು ನರಳುವಂತೆ ಮಾಡಿ, ಹೊಸ ಹಸುಗಳನ್ನು ಕೊಡಿಸುತ್ತೇನೆ ಎಂದರೆ ಏನರ್ಥ? ಸಚಿವ ಜಮೀರ್‌ಗೆ ಏನಾದರೂ ಬುದ್ಧಿ ಇದೆಯಾ? ಎಂದು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಕಾಂಗ್ರೆಸ್‌ನ ಸಿಎಲ್‌ಪಿ ಮೀಟಿಂಗ್ ನಡಿದಿದೆ. ಇದಕ್ಕಾಗಿ ರಾಜ್ಯಕ್ಕೆ ಸುರ್ಜೇವಾಲ ಆಗಮಿಸಿದ್ದಾರೆ. 6 ತಿಂಗಳಿಗೊಮ್ಮೆ ಬಂದು ಏನು ಮಾಡುತ್ತಾರೆ? ಅವರದ್ದೂ ರೋಜಿ ರೋಟಿ ನಡೆಯಬೇಕಲ್ಲವೇ? ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಒಳಗೊಳಗೆ ಬೂದಿ ಮುಚ್ಚಿದ ಕೆಂಡದಂತಿತ್ತು. ಈಗ ದೊಡ್ಡ ಪ್ರಮಾಣದಲ್ಲಿ ಅತೃಪ್ತಿ ಏಳುತ್ತಿದೆ. ಮತ್ತೊಂದು ಕಡೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದರುಅಸ್ತಿತ್ವ ಕಳೆದುಕೊಳ್ಳುತ್ತಿದೆ:
ಕಂದಾಯ ಇಲಾಖೆ ಡಿಜಿಟಲೀಕರಣದಲ್ಲಿ ಹಸ್ತದ ಗುರುತು ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಭಸ್ಮಾಸುರನ ಹಸ್ತ. ಅದನ್ನು ರಾಜಕೀಯವಾಗಿ ವಿರೋಧ ಮಾಡಿಯೇ ಮಾಡುತ್ತೇವೆ. ಅದರಿಂದಾಗಿ ಏನು ಆಗುವುದಿಲ್ಲ. ಕಾಂಗ್ರೆಸ್ ಇಡೀ ದೇಶದಲ್ಲೇ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕದಲ್ಲೂ ಒಳಜಗಳ ಆರಂಭಗೊಂಡಿದೆ. ಹಾಗಾಗಿ ಕಾಂಗ್ರೆಸ್ ಎಲ್ಲರಿಗೂ ಭಾರವಾಗಿದೆ ಎಂದರು.ಇಂಡಿ ಒಕ್ಕೂಟದಿಂದ ಕಾಂಗ್ರೆಸ್ ಹೊರ ಬಂದಿಲ್ಲ, ಬದಲಾಗಿ ಕಾಂಗ್ರೆಸ್‌ನ್ನು ಅದೇ ಹೊರ ಹಾಕಿದೆ. ಉಳಿದ ಇಂಡಿಗಳು ಕೂಡಿ ಇವರ ಕೈಯಲ್ಲಿ ಗಿಂಡಿ ಕೊಟ್ಟು ಕಳಿಸಿವೆ ಎಂದು ವ್ಯಂಗ್ಯವಾಡಿದರು.