ಯೂರಿಯಾ ಕಾಳಸಂತೆ ಮಾರಾಟಕ್ಕೆ ಕಾಂಗ್ರೆಸ್‌ ಸರ್ಕಾರ ಅನುವು

| Published : Jul 30 2025, 12:45 AM IST

ಯೂರಿಯಾ ಕಾಳಸಂತೆ ಮಾರಾಟಕ್ಕೆ ಕಾಂಗ್ರೆಸ್‌ ಸರ್ಕಾರ ಅನುವು
Share this Article
  • FB
  • TW
  • Linkdin
  • Email

ಸಾರಾಂಶ

ಮುಂಗಾರು ಹಂಗಾಮಿಗೆ ರಾಜ್ಯಕ್ಕೆ 6.30 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿದ್ದರೂ, 8.73 ಲಕ್ಷ ಮೆಟ್ರಿಕ್‌ ಟನ್‌ ಗೊಬ್ಬರವನ್ನು ಕೇಂದ್ರ ಸರ್ಕಾರ ಪೂರೈಸಿದ್ದರೂ, ಕೃತಕ ಅಭಾವ ಸೃಷ್ಟಿಸಿರುವ ಕಾಳಸಂತೆಕೋರರ ಕಾಂಗ್ರೆಸ್ ಸರ್ಕಾರ ಗೊಬ್ಬರವನ್ನು ₹500 ದರದಲ್ಲಿ ಮಾರಿಕೊಳ್ಳಲು ಅನುವು ಮಾಡಿಕೊಟ್ಟಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ.

- ₹235 ಬೆಲೆ ರಸಗೊಬ್ಬರ ₹500 ದರದಂತೆ ಮಾರುತ್ತಿದ್ದಾರೆ: ರೇಣುಕಾಚಾರ್ಯ ಆರೋಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಂಗಾರು ಹಂಗಾಮಿಗೆ ರಾಜ್ಯಕ್ಕೆ 6.30 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿದ್ದರೂ, 8.73 ಲಕ್ಷ ಮೆಟ್ರಿಕ್‌ ಟನ್‌ ಗೊಬ್ಬರವನ್ನು ಕೇಂದ್ರ ಸರ್ಕಾರ ಪೂರೈಸಿದ್ದರೂ, ಕೃತಕ ಅಭಾವ ಸೃಷ್ಟಿಸಿರುವ ಕಾಳಸಂತೆಕೋರರ ಕಾಂಗ್ರೆಸ್ ಸರ್ಕಾರ ಗೊಬ್ಬರವನ್ನು ₹500 ದರದಲ್ಲಿ ಮಾರಿಕೊಳ್ಳಲು ಅನುವು ಮಾಡಿಕೊಟ್ಟಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸಗೊಬ್ಬರದ ಬೆಲೆ ₹265 ಇದೆ. ಅದಕ್ಕೆ 235 ಹೆಚ್ಚಿಗೆ ಸೇರಿಸಿ, ₹500 ದರದಂತೆ ಕಾಳಸಂತೆಯಲ್ಲಿ ಮಾರುತ್ತಿದ್ದಾರೆ. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದೇ ಕಣ್ಣು ಮುಚ್ಚಿ ಕುಳಿತಿದೆ ಎಂದರು.

15 ದಿನಗಳ ಹಿಂದೆ ಕೃಷಿ ಸಚಿವರು ರಾಜ್ಯದಲ್ಲಿ ಯೂರಿಯಾ ಸ್ಟಾಕ್ ಇದೆ. ರೈತರಿಗೆ ಆತಂಕ ಬೇಡ ಎಂದು ಭರವಸೆ ನೀಡಿದ್ದರು. ಸೋಮವಾರ ದಿಢೀರನೇ ಕೇಂದ್ರ ಸರ್ಕಾರ ಕೇಳಿದಷ್ಟು ಯೂರಿಯೂ ನೀಡಿಲ್ಲ ಎನ್ನುತ್ತಿದ್ದಾರೆ. ಹೊನ್ನಾಳಿಯಲ್ಲಿ ಬಿಜೆಪಿ ಹೋರಾಟ ಶುರು ಮಾಡಿದ ನಂತರ ಇಡೀ ರಾಜ್ಯವ್ಯಾಪಿ ಯೂರಿಯಾ ಹೋರಾಟ ಶುರುವಾಗಿದೆ. ಸಿಎಂ ಕುಂಭಕರ್ಣ ನಿದ್ರೆಯಲ್ಲಿದ್ದರಾ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಜೆ.ಪಿ.ನಡ್ಡಾ ನೇತೃತ್ವದಲ್ಲಿ ಕೇಂದ್ರದ ಮಟ್ಟದಲ್ಲಿ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಸಲು ಮುಂದಾಗಿದೆ. ತಕ್ಷಣಕ್ಕೆ 16 ಸಾವಿರ ಮೆಟ್ರಿಕ್ ಟನ್ ನೀಡಲಿದೆ. ಎಂಆರ್‌ಪಿಗಿಂತ ನಯಾ ಪೈಸೆ ಹೆಚ್ಚಿಗೆ ಇಲ್ಲದಂತೆ ಯೂರಿಯಾ ಪೂರೈಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ರಸಗೊಬ್ಬರಕ್ಕಾಗಿ ಮತ್ತೆ ಬಂದ್ ನಡೆಸಬೇಕಾದೀತು ಎಂದು ರೇಣುಕಾಚಾರ್ಯ ಎಚ್ಚರಿಸಿದರು.

ಜಿಲ್ಲೆಗೆ 33 ಸಾವಿರ ಮೆಟ್ರಿಕ್‌ ಟನ್‌ ಯೂರಿಯಾ ಬೇಕಿತ್ತು. 36 ಸಾವಿರ ಮೆಟ್ರಿಕ್ ಟನ್ ಪೂರೈಕೆಯಾಗಿತ್ತು. ಆದರೂ, ನಕಲಿ ಅಭಾವ ಸೃಷ್ಟಿಸಲಾಗಿದೆ. ಹೆಚ್ಚುವರಿ 3 ಸಾವಿರ ಮೆಟ್ರಿಕ್ ಟನ್ ಯೂರಿಯಾ ಎಲ್ಲಿ ಹೋಯಿತು? ದಾವಣಗೆರೆಯ ಯೂರಿಯಾ ಶಿವಮೊಗ್ಗಕ್ಕೆ ಹೇಗೆ ಹೋಯಿತು? ಈ ಬಗ್ಗೆ ತನಿಖೆ ಮಾಡಿ, ಕ್ರಮ ಕೈಗೊಳ್ಳಬೇಕು. ಯೂರಿಯಾಗೆ ಲಿಂಕ್ ಆಗಿ ಅನವಶ್ಯಕ ಔಷಧಿ, ಕ್ರಿಮಿನಾಶಕ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಬಿ.ಜಿ.ಅಜಯಕುಮಾರ, ರಾಜು ವೀರಣ್ಣ, ಪ್ರವೀಣ ಜಾಧವ್, ಚೇತನ್, ಪಂಜು, ರವಿಗೌಡ, ಅಜಯಕುಮಾರ ಇತರರು ಇದ್ದರು.

- - -

(ಟಾಪ್‌ ಕೋಟ್) ಧರ್ಮಸ್ಥಳ ಹಿಂದೂಗಳ ಪವಿತ್ರ ಕ್ಷೇತ್ರವಾಗಿದೆ. ಧರ್ಮಾಧಿಕಾರಿ ಅವರಿಗೆ, ಶ್ರೀಕ್ಷೇತ್ರಕ್ಕೆ ಕೆಟ್ಟ ಹೆಸರು ತರಲು ಹೀಗೆಲ್ಲಾ ಮಾಡುತ್ತಿದ್ದಾರೆ. ಅಕ್ರಮವಾಗಿ ಹೂತಿಟ್ಟ ಶವಗಳ ಬಗ್ಗೆ ಮಾಹಿತಿ ಇದೆಯೆಂದು ಬಂದ ವ್ಯಕ್ತಿ ಮುಖ ಮುಚ್ಚಿಕೊಳ್ಳುವಂಥದ್ದು ಏನಿತ್ತು? ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಕುರ್ಚಿ ಕದನದಲ್ಲಿ ರೈತರನ್ನು ಬೀದಿಪಾಲು ಮಾಡಬಾರದು. ನ್ಯಾನೊ ಗೊಬ್ಬರ ಕೇಂದ್ರ ಸರ್ಕಾರವೂ ಶಿಫಾರಸು ಮಾಡಿದೆ. ರೈತರು ಯೂರಿಯಾದಂತೆ ನ್ಯಾನೊ ಗೊಬ್ಬರ ಬಳಕೆಗೂ ಗಮನ ಹರಿಸಬೇಕು.

- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

- - -

-29ಕೆಡಿವಿಜಿ1: ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.