ಸಾರಾಂಶ
ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಬುಧವಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಜಿಲ್ಲಾ ಹಾಗೂ ಎಲ್ಲ ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರ ಜತೆಗೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಕೊಟ್ಟ ಗ್ಯಾರಂಟಿಗಳನ್ನು ಯಾವ ರೀತಿ ಅನುಷ್ಠಾನಗೊಳಿಸಿದೆಯೋ ಅದೇ ರೀತಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ತಾವೆಲ್ಲರೂ ಶ್ರಮವಹಿಸಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳೇ ನನ್ನ ಗೆಲುವಿಗೆ ಶ್ರೀರಕ್ಷೆ. ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿಯಿಂದ ಬದುಕುವಂತಾಗಿದೆ ಎಂದರು.
ಕೇಂದ್ರ ಕಾಂಗ್ರೆಸ್ ಸುಮಾರು 25 ಗ್ಯಾರಂಟಿ ನೀಡಿದೆ, ಕೇಂದ್ರ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳು ಜನರಿಗೆ ತಲುಪಬೇಕೆಂದು ಮನವಿ ಮಾಡಿದರು.ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಪ್ರತಿ ಮನೆಯಲ್ಲೂ ಇದ್ದಾರೆ ಎಂದರು.
ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಎಸ್.ಆರ್. ಪಾಟೀಲ, ಎಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.ಅಲ್ಪಸಂಖ್ಯಾತ ಮುಖಂಡರ ಸಭೆ:ಧಾರವಾಡ ಲೋಕಸಭಾ ವ್ಯಾಪ್ತಿಯ ಧಾರವಾಡ ಗ್ರಾಮೀಣ ಹಾಗೂ ನಗರದ ಅಲ್ಪಸಂಖ್ಯಾತ ಮುಖಂಡರ ಜತೆಗೆ ನವಲೂರಿನ ಹೋಟೆಲ್‌ನಲ್ಲಿ ಸಭೆ ನಡೆಸಲಾಯಿತು. ಈ ವೇಳೆ ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ವಿವಿಧತೆಯಲ್ಲಿ ಏಕತೆ ಎಂಬ ಸಿದ್ಧಾಂತದಲ್ಲಿ ನಂಬಿಕೆ ಇರಿಸಿರುವ ಪಕ್ಷ ಕಾಂಗ್ರೆಸ್. ಅದೇ ರೀತಿ ಎಲ್ಲ ಸಮುದಾಯದ ಹಾಗೂ ಪಂಥಗಳ ಅಭಿವೃದ್ಧಿಯ ಸಲುವಾಗಿ ಕಾಂಗ್ರೆಸ್ ಪಕ್ಷ ಸಿದ್ಧ. ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲಿರುಳು ದುಡಿಬೇಕೆಂದು ನಾಯಕರಲ್ಲಿ ವಿನಂತಿ ಮಾಡಿಕೊಂಡರು.