ಆಡಳಿತ ಪಕ್ಷವು ಅಧಿಕಾರಿಗಳ ಮೇಲೆ ಹಿಡಿತವನ್ನು ಕಳೆದುಕೊಂಡಿದೆ. ಇದರ ಪರಿಣಾಮ ಅಧಿಕಾರಿಗಳು ಹೇಳುವ ಮಾತನ್ನೇ ಸತ್ಯವೆಂದು ನಂಬುತ್ತಿರುವುದರಿಂದ ಎಲ್ಲ ಯೋಜನೆಗಳಿಗೆ ಗ್ರಹಣ ಹಿಡಿದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಮತದಾರರ ಬೇಕು- ಬೇಡಗಳಿಗೆ ಧ್ವನಿಯಾಗಬೇಕು.
ಹಳಿಯಾಳ: ನೀರಾವರಿ ಯೋಜನೆಗಳು ಸೇರಿದಂತೆ ಕುಡಿಯುವ ನೀರಿನ ಯೋಜನೆಗಳು ಕಾರ್ಯಾರಂಭಿಸದೇ ಇರುವುದರಿಂದ ಮತದಾರರು ಕಾಂಗ್ರೆಸ್ಸಿನ ಜನವಿರೋಧಿ ಆಡಳಿತದಲ್ಲಿ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಅತ್ತ ಈ ಯೋಜನೆಗಳ ಬಗ್ಗೆ ಕಾಂಗ್ರೆಸ್‌ನವರಿಗೆ ನಿತ್ಯವೂ ಸುಳ್ಳು ಹೇಳುವ ರೂಢಿ ಬೆಳೆದಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ, ಮಾಜಿ ಶಾಸಕ ಸುನೀಲ ಹೆಗಡೆ ವಾಗ್ದಾಳಿ ಮಾಡಿದರು.
ಸೋಮವಾರ ಪಟ್ಟಣದಲ್ಲಿ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಬಿಜೆಪಿ ಹಳಿಯಾಳ ಮಂಡಲದ ಮಾಸಿಕ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷವು ಅಧಿಕಾರಿಗಳ ಮೇಲೆ ಹಿಡಿತವನ್ನು ಕಳೆದುಕೊಂಡಿದೆ. ಇದರ ಪರಿಣಾಮ ಅಧಿಕಾರಿಗಳು ಹೇಳುವ ಮಾತನ್ನೇ ಸತ್ಯವೆಂದು ನಂಬುತ್ತಿರುವುದರಿಂದ ಎಲ್ಲ ಯೋಜನೆಗಳಿಗೆ ಗ್ರಹಣ ಹಿಡಿದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಮತದಾರರ ಬೇಕು- ಬೇಡಗಳಿಗೆ ಧ್ವನಿಯಾಗಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.ಬೂತ್ ಮಟ್ಟದಿಂದ ಹಿಡಿದು ತಾಲೂಕು ಮಟ್ಟದ ಪದಾಧಿಕಾರಿಗಳು ಕಾರ್ಯಕರ್ತರು ಕ್ರಿಯಾಶೀಲರಾಗಿ ಪಕ್ಷದ ಸಂಘಟನೆಯನ್ನು ಮಾಡುತ್ತಾ ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕೆಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆ ಅ. 7ರಂದು ಕಾರವಾರದಲ್ಲಿ ‘ಸೇವಾ ಜ್ಯೋತಿ’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಂದು ಕಾರವಾರ ನಗರದ ಪ್ರಮುಖ ರಸ್ತೆಗಳಲ್ಲಿ ‘ಸೇವಾ ಜ್ಯೋತಿ’ ಕಾರ್ಯಕ್ರಮದ ಮೆರವಣಿಗೆ ನಡೆಯಲಿದೆ. ನಂತರ 11.30ಕ್ಕೆ ಮಾಲಾದೇವಿ ಮೈದಾನದಲ್ಲಿ ಪ್ರಧಾನಮಂತ್ರಿಯವರು ನೇರವಾಗಿ ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮದ ನೇರ ಪ್ರಸಾರ ಆಯೋಜಿಸಲಾಗಿದೆ ಎಂದರು.ಚುನಾವಣೆಗೆ ಸಿದ್ಧತೆ:ಅ. 23ರಂದು ನಡೆಯಲಿರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರ ಪರವಾಗಿ ಪಕ್ಷದ ಪದಾಧಿಕಾರಿಗಳು, ಶಕ್ತಿ ಕೇಂದ್ರ ಪ್ರಮುಖರು ಹಾಗೂ ನಾಯಕರು ಮತದಾರರನ್ನು ಸಂಪರ್ಕಿಸಿ, ಅಭ್ಯರ್ಥಿಯ ಪರವಾಗಿ ಹೆಚ್ಚಿನ ಮತಗಳನ್ನು ದೊರಕಿಸುವ ನಿಟ್ಟಿನಲ್ಲಿ ಸಂಘಟಿತವಾಗಿ ಕಾರ್ಯನಿರ್ವಹಿಸಲು ಚರ್ಚಿಸಲಾಯಿತು.
ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಹಾಗೂ ಸಂಘಟಿತವಾಗಿ ಯಶಸ್ವಿಗೊಳಿಸುವಂತೆ, ಎಸ್ಐಆರ್ ಸೇರಿದಂತೆ ಪಕ್ಷದ ಸಂಘಟನೆ, ಬೂತ್ ಮಟ್ಟದ ಚಟುವಟಿಕೆಗಳು ಹಾಗೂ ಮುಂಬರುವ ಕಾರ್ಯಕ್ರಮಗಳ ಕುರಿತು ಹಲವು ಪ್ರಮುಖ ವಿಷಯಗಳ ಕುರಿತು ಮಾಜಿ ಶಾಸಕರು ಮಾರ್ಗದರ್ಶನ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷ ವಿಠ್ಠಲ್ ಸಿದ್ದಣ್ಣನವರ ವಹಿಸಿದ್ದರು. ಮಹೇಶ ಮೇಘಾನಿ, ಸಂಗೀತಾ ಜಾವಳೆಕರ, ಗಣಪತಿ ಕಾರಂಜೆಕರ, ಶಿವಾಜಿ ಪಾಟೀಲ, ಮೋಹನಗೌಡ ಪಾಟೀಲ, ಚೂಡಪ್ಪ ಬೂಬಾಟಿ, ತಾನಾಜಿ ಪಟ್ಟೆಕರ, ಶಾಂತಾ ಹೀರೆಕರ್, ಬಾಬುನಿ ಗೌಡ, ನಾರಾಯಣ ಕೆಸರೆಕರ, ಶಕ್ತಿ ಕೇಂದ್ರದ ಪ್ರಮುಖರು, ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳು ಸೇರಿದಂತೆ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬ್ಳೆ ಹಾಗೂ ಯಲ್ಲಪ್ಪ ಹೊನ್ನೋಜಿ ಕಾರ್ಯಕ್ರಮ ನಿರ್ವಹಿಸಿದರು.