ಸಾರಾಂಶ
ಕಾಂಗ್ರೆಸ್ ಭ್ರಷ್ಟಾಚಾರದ ಸರಮಾಲೆ ದಕ್ಷಿಣ ಕನ್ನಡ ಜಿಲ್ಲೆಯನ್ನೂ ಬಿಟ್ಟಿಲ್ಲ. ಜಿಲ್ಲೆಯ ಪ್ರಮುಖ ವೆನ್ಲಾಕ್ ಆಸ್ಪತ್ರೆಯಲ್ಲಿ ಬಡ ರೋಗಿಗಳ ಔಷಧ ಖರೀದಿ ಪ್ರಕ್ರಿಯೆಯಲ್ಲಿ ಕೆಟಿಪಿಪಿ ನಿಯಮ ಉಲ್ಲಂಘಿಸಿ ಲಕ್ಷಾಂತರ ರು. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು,
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯವನ್ನು ಲೂಟಿ ಹೊಡೆಯಲೆಂದೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಹಗರಣಗಳ ಸರಮಾಲೆಯಲ್ಲಿ ಸುತ್ತಿಕೊಂಡಿದೆ. ದಿನ ಬೆಳಗಾದರೆ ಸರ್ಕಾರದ ಹೊಸ ಹಗರಣ ಬೆಳಕಿಗೆ ಬರುತ್ತಿದೆ. ಶಾಸಕರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಅಧಿಕಾರಿಗಳು, ಇದರಿಂದಾಗಿ ರಾಜ್ಯ ಕಂಡು ಕೇಳರಿಯದ ಪರಿಸ್ಥಿತಿಗೆ ತಲುಪಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.ನಗರದ ಅಟಲ್ ಸೇವಾ ಕೇಂದ್ರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮ ಹಗರಣ ಸಂಬಂಧಿಸಿ ಪ್ರಾಮಾಣಿಕ ಅಧಿಕಾರಿಯೋರ್ವರ ಆತ್ಮಹತ್ಯೆಯಿಂದ ಬುಡಕಟ್ಟು ಸಮುದಾಯದ ಬಡವರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ 187 ಕೋಟಿ ರು. ಸರ್ಕಾರವೇ ಲೂಟಿ ಹೊಡೆಯಲು ನಿಂತಿದ್ದ ಪ್ರಕರಣ ಬೆಳಕಿಗೆ ಬಂತು. ಸುಮಾರು 4,000 ಕೋಟಿ ರು.ಗಳ ಮೈಸೂರು ಮುಡಾ ಸೈಟ್ ಹಗರಣದಲ್ಲಿ ಸ್ವತಃ ರಾಜ್ಯದ ಮುಖ್ಯಮಂತ್ರಿಗಳ ಹೆಸರು ಕೇಳಿ ಬಂದಿದ್ದು, ಮೈಸೂರಿನಲ್ಲಿ ತಮ್ಮ ಈ ಹಿಂದಿನ ಆಸ್ತಿಯ ಬದಲಿಗೆ, ನಾಲ್ಕೈದು ಪಟ್ಟಿಗೂ ಅಧಿಕ ಮೌಲ್ಯದ 14 ನಿವೇಶನಗಳನ್ನು ಅಕ್ರಮವಾಗಿ ಪಡೆಯಲಾಗಿದೆ. ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕು ಎಂದು ಆಗ್ರಹಿಸಿದರು.ವೆನ್ಲಾಕ್‌ನಲ್ಲೂ ಭ್ರಷ್ಟಾಚಾರ:
ಕಾಂಗ್ರೆಸ್ ಭ್ರಷ್ಟಾಚಾರದ ಸರಮಾಲೆ ದಕ್ಷಿಣ ಕನ್ನಡ ಜಿಲ್ಲೆಯನ್ನೂ ಬಿಟ್ಟಿಲ್ಲ. ಜಿಲ್ಲೆಯ ಪ್ರಮುಖ ವೆನ್ಲಾಕ್ ಆಸ್ಪತ್ರೆಯಲ್ಲಿ ಬಡ ರೋಗಿಗಳ ಔಷಧ ಖರೀದಿ ಪ್ರಕ್ರಿಯೆಯಲ್ಲಿ ಕೆಟಿಪಿಪಿ ನಿಯಮ ಉಲ್ಲಂಘಿಸಿ ಲಕ್ಷಾಂತರ ರು. ಅವ್ಯವಹಾರ ನಡೆದಿದೆ. ಪ್ರಕರಣ ಸಂಬಂಧಿಸಿ ಕೇವಲ ಕಚೇರಿ ಅಧೀಕ್ಷಕರೊಬ್ಬರನ್ನು ಮಾತ್ರ ಅಮಾನತುಗೊಳಿಸಿ ಹಗರಣವನ್ನೇ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರು, ನಿತಿನ್ ಕುಮಾರ್, ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್ ಇದ್ದರು.