ಕಾಂಗ್ರೆಸ್‌ ಸರ್ಕಾರದಿಂದ ರಾಜ್ಯದ ಜನತೆಗೆ ಖಾಲಿ ಚಿಪ್ಪು : ಎನ್.ರವಿಕುಮಾರ

| Published : Apr 22 2024, 02:01 AM IST / Updated: Apr 22 2024, 01:16 PM IST

ಕಾಂಗ್ರೆಸ್‌ ಸರ್ಕಾರದಿಂದ ರಾಜ್ಯದ ಜನತೆಗೆ ಖಾಲಿ ಚಿಪ್ಪು : ಎನ್.ರವಿಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಖಾಲಿ ಚಿಪ್ಪು ನೀಡಿದೆ ಎಂದು ವಿಧಾನ ಪರಿಷತ್ತು ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ ಖಾಲಿ ಚಿಪ್ಪುಗಳನ್ನು ಪ್ರದರ್ಶಿಸುವ ಮೂಲಕ ದಾವಣಗೆರೆಯಲ್ಲಿ ವಾಗ್ದಾಳಿ ನಡೆಸಿದರು.

  ದಾವಣಗೆರೆ :  ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಖಾಲಿ ಚಿಪ್ಪು ನೀಡಿದೆ ಎಂದು ವಿಧಾನ ಪರಿಷತ್ತು ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ ಖಾಲಿ ಚಿಪ್ಪುಗಳನ್ನು ಪ್ರದರ್ಶಿಸುವ ಮೂಲಕ ವಾಗ್ದಾಳಿ ನಡೆಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತರಿಗೆ ನೀಡುತ್ತಿದ್ದ ₹4 ಸಾವಿರ ರದ್ದುಪಡಿಸಿದ್ದು ಕಾಂಗ್ರೆಸ್ ಸರ್ಕಾರ. ಹಾಲು ಉತ್ಪಾದಕರಿಗೂ ಈ ಸರ್ಕಾರ ಚಿಪ್ಪು ನೀಡಿದೆ. ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ರದ್ದುಪಡಿಸಿದ್ದು ಕಾಂಗ್ರೆಸ್ ಸರ್ಕಾರ. ನಾಡಿನ ಜನತೆ ಚಿಪ್ಪು ಕೊಟ್ಟಿರುವ ಕಾಂಗ್ರೆಸ್‌ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ, ತಕ್ಕ ಪಾಠ ಕಲಿಸಬೇಕು ಎಂದರು.

ದಾವಣಗೆರೆ ಮಹಾನಗರ ಇಂದು ಸ್ಮಾರ್ಟ್‌ ಸಿಟಿಯಾಗಿ ಕಂಗೊಳಿಸುತ್ತಿರುವುದಕ್ಕೆ ಕೇಂದ್ರ ಸರ್ಕಾರ ಹಾಗೂ ಜನಪರ ಸಂಸದ ಜಿ.ಎಂ.ಸಿದ್ದೇಶ್ವರ ಕಾರಣ‍. ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನರ ಪಾತ್ರವೇನೂ ಇಲ್ಲ. ಸ್ಮಾರ್ಟ್ ಸಿಟಿ ತಮ್ಮ ಸಾಧನೆಯೆಂದು ಮಲ್ಲಿಕಾರ್ಜುನ ಹೇಳುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ಎಸ್‌.ಎಸ್. ಮಲ್ಲಿಕಾರ್ಜುನ ಮಂತ್ರಿಯಾಗಿ ಜಿಲ್ಲೆಗೆ ನೀಡಿದ ಕೊಡುಗೆ ಏನು? ನಿಮ್ಮ ಈಗಿನ ಸರ್ಕಾರದಲ್ಲಿ ಒಂದೇ ಒಂದು ಕೊಡುಗೆಯನ್ನು ತಿಳಿಸಿ ನೋಡೋಣ. ದಾವಣಗೆರೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸಂಸದ ಸಿದ್ದೇಶ್ವರ ಪ್ರಯತ್ನಿಸಿದರೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ತಮ್ಮ ವೈದ್ಯಕೀಯ ಕಾಲೇಜುಗಳಿಗೆ ಅಡ್ಡಿಯಾಗುತ್ತದೆಂಬ ಕಾರಣಕ್ಕೆ ತಡೆಯುವ ಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಉಸ್ತುವಾರಿ ಸಚಿವರ ಕೊಡುಗೆ ಏನು?:

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕಳೆದ 10 ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ದಾವಣಗೆರೆ ಜಿಲ್ಲೆಗೆ ನೀಡಿದ ಕೊಡುಗೆ ಏನು? ಕುಂದುವಾಡ ಕೆರೆಯನ್ನು ಅರ್ಧಂಬರ್ಧ ಅಭಿವೃದ್ಧಿಪಡಿಸಿ, ಅದಕ್ಕೆ ಮಲ್ಲಿಕಾರ್ಜುನ ಸಾಗರ ಅಂತಾ ಹೆಸರಿಟ್ಟುಕೊಂಡವರು ಕಾಂಗ್ರೆಸ್ಸಿನವರು. ನಾನು ಭ್ರಷ್ಟಾಚಾರ ಮಾಡಿರುವುದಾಗಿ ಆರೋಪ ಮಾಡಿದ ಎಸ್‌.ಎಸ್‌. ಮಲ್ಲಿಕಾರ್ಜುನ, ಅದನ್ನು ಸಾಬೀತುಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುವೆ. ಇಂತಹ ಸಚಿವರು ಗ್ರಾಪಂ ಸದಸ್ಯರಾಗಲೂ ಲಾಯಕ್ಕಿಲ್ಲ ಎಂದು ಹರಿಹಾಯ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳು, ಅನಿಲ್ ಕುಮಾರ ನಾಯ್ಕ, ಮಾಜಿ ಮೇಯರ್ ಎಸ್.ಟಿ.ವೀರೇಶ, ಜಿಲ್ಲಾ ವಕ್ತಾರ ಬಿ.ಎಂ.ಸತೀಶ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಎಚ್.ಪಿ.ವಿಶ್ವಾಸ ಇತರರು ಇದ್ದರು.

ಇದೇ ವೇಳೆ ಬಿಜೆಪಿ ಮುಖಂಡರು ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಾಲಿ ಚಿಪ್ಪು ಪ್ರದರ್ಶಿಸುವ ಮೂಲಕ ವ್ಯಂಗ್ಯವಾಡಿದರು.

 , ದಾವಣಗೆರೆ :  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಳಿ ತಪ್ಪಿದ್ದು, ಮಹಿಳೆಯರು, ಯುವತಿಯರಿಗೆ ರಕ್ಷಣೆಯೇ ಇಲ್ಲವೆಂಬುದಕ್ಕೆ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆಯೇ ಸಾಕ್ಷಿಯಾಗಿದೆ ಎಂದು ವಿಪ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ ಆರೋಪಿಸಿದರು.

ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರೀತಿಗೆ ಒಪ್ಪಲಿಲ್ಲವೆಂದು ಹುಬ್ಬಳ್ಳಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಫಯಾಜ್ ಎಂಬಾತ ನೇಹಾ ಹಿರೇಮಠ ಅವರಿಗೆ ಬರ್ಬರವಾಗಿ ಚುಚ್ಚಿ ಚುಚ್ಚಿ ಕೊಂದಿದ್ದಾನೆ. ಇಂಥ ಕೃತ್ಯ ಕುರಿತು ಕಾಂಗ್ರೆಸ್ ಸರ್ಕಾರ ವೈಯಕ್ತಿಕ ವಿಚಾರವೆಂಬ ಹೇಳಿಕೆ ನೀಡುತ್ತಿರುವುದು ದುರಂತ ಎಂದರು.

ಬೆಳಗಾವಿಯ ವಂಟಿಮುರಿ ಮಹಿಳೆಯನ್ನು ವಿವಸ್ತ್ರಗೊಳಿಸಲಾಗಿದೆ. ಚನ್ನಗಿರಿ ತಾಲೂಕು ನಲ್ಲೂರಿನಲ್ಲಿ ಶ್ರೀರಾಮ ಜಯಂತಿ ದಿನದಂದು ಮೂವರ ಮೇಲೆ ಗಂಭೀರವಾಗಿ ಹಲ್ಲೆ ಮಾಡಲಾಗಿದೆ. ಬೆಂಗಳೂರಿನ ನಗರ್ತ ಪೇಟೆಯಲ್ಲಿ ಹನುಮಾನ್ ಚಾಲೀಸಾ ಪಠಣ ಪ್ರಕರಣ ಸೇರಿದಂತೆ ಸಾಲು ಸಾಲು ಪ್ರಕರಣಗಳಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆದರೂ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತರ ಮೇಲೆ ಕೇಸ್ ದಾಖಲಿಸುತ್ತಿಲ್ಲ. ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಅವರು ಕಿಡಿಕಾರಿದರು.

ಮೈ ಬ್ರದರ್ ಪಾಲಿಸಿ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರವು ಇಂತಹ ಘಟನೆ, ಕೃತ್ಯದ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದೆ. ಎಸ್‌ಡಿಪಿಐ, ಕೆಎಫ್‌ಐ ಮೇಲಿದ್ದ 160 ಪ್ರಕರಣ ರದ್ದುಪಡಿಸಿ, 1600 ಜನರನ್ನು ಬಿಡುಗಡೆ ಮಾಡಿದೆ. ಶೇ.40 ಸೈಬರ್ ಅಪರಾಧ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್‌ ಎಂಬ ಘೋಷಣೆ ಕೂಗಲಾಗಿದೆ. ನಾಸಿರ್ ಹುಸೇನ್ ಬಳ್ಳಾರಿಗೆ ಬಂದಾಗ ಅದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಗಿದೆ ಎಂದು ಅವರು ದೂರಿದರು.