ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ವಿರೋಧಿ: ಡಿ.ಎಸ್‌.ಅರುಣ್‌

| Published : Mar 23 2024, 01:01 AM IST

ಸಾರಾಂಶ

ದೇವಸ್ಥಾನಗಳ ಸಂಗ್ರಹದ ಹಣವನ್ನು ಸರ್ಕಾರಕ್ಕೆ ಮೊದಲೇ ಶೇ.10ರಷ್ಟು ಕೊಡಬೇಕು ಎಂಬ ನಿಯಮ ಈಗಿನ ಸರ್ಕಾರ ಜಾರಿಗೆ ತಂದಿದೆ. ಇದು ಸರಿಯಲ್ಲ. ನಮ್ಮ ಸರ್ಕಾರ ಇದ್ದಾಗ ದೇವಸ್ಥಾನಗಳು ತನ್ನೆಲ್ಲ ಕೆಲಸಗಳ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸಿ ಉಳಿದ ಹಣದಲ್ಲಿ ಶೇ.10ರಷ್ಟು ನೀಡಬೇಕು ಎಂದು ಆದೇಶ ತಂದಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಸರ್ಕಾರ ನಿಯಮ ರೂಪಿಸಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 11 ತಿಂಗಳು ಕಳೆದರೂ ಕಾಂಗ್ರೆಸ್‌ ಸರ್ಕಾರದ ಅಭಿವೃದ್ಧಿ ಮಾತ್ರ ಶೂನ್ಯ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದರೂ ನೀರಾವರಿ ಯೋಜನೆಗಳು ನನೆಗುದ್ದಿಗೆ ಬಿದ್ದಿವೆ. ಒಂದು ಕಿ.ಮೀ.ರಸ್ತೆಯೂ ಮಾಡಲಿಲ್ಲ. ಬರೀ ಗ್ಯಾರಂಟಿಗಳ ಅಲೆಗಳಲ್ಲಿ ತೇಲಾಡುತ್ತಿದೆ ಎಂದು ದೂರಿದರು. ಕಾಂಗ್ರೆಸ್ ಸರ್ಕಾರ ಕೇವಲ ಅಭಿವೃದ್ಧಿ ವಿರೋಧಿ ಮಾತ್ರವಲ್ಲ, ಅದು ರೈತ, ದಲಿತ, ಹಿಂದು ವಿರೋಧಿ ಸರ್ಕಾರವಾಗಿದೆ. ರಾಮಮಂದಿರ ನಿರ್ಮಾಣ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹೇಳಿದ ಹೇಳಿಕೆಗಳು ವಿಚಿತ್ರವಾಗಿದ್ದವು. ಹನುಮಧ್ವಜ ವಿಚಾರ, ದೇವಸ್ಥಾನಗಳ ದತ್ತಿ ಹಣದ ವಿಷಯ, ಕುಕ್ಕರ್ ಬಾಂಬ್ ಸ್ಫೋಟ ವಿಷಯ ಮುಂತಾದವರು ಹಿಂದು ವಿರೋಧದ ನೆಲೆಗಟ್ಟಿನಲ್ಲಿಯೇ ಇವೆ ಎಂದರು.

ದೇವಸ್ಥಾನಗಳ ಸಂಗ್ರಹದ ಹಣವನ್ನು ಸರ್ಕಾರಕ್ಕೆ ಮೊದಲೇ ಶೇ.10ರಷ್ಟು ಕೊಡಬೇಕು ಎಂಬ ನಿಯಮ ಈಗಿನ ಸರ್ಕಾರ ಜಾರಿಗೆ ತಂದಿದೆ. ಇದು ಸರಿಯಲ್ಲ. ನಮ್ಮ ಸರ್ಕಾರ ಇದ್ದಾಗ ದೇವಸ್ಥಾನಗಳು ತನ್ನೆಲ್ಲ ಕೆಲಸಗಳ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸಿ ಉಳಿದ ಹಣದಲ್ಲಿ ಶೇ.10ರಷ್ಟು ನೀಡಬೇಕು ಎಂದು ಆದೇಶ ತಂದಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಸರ್ಕಾರ ನಿಯಮ ರೂಪಿಸಿದೆ ಎಂದರು.

ಇದು ರೈತ ವಿರೋಧಿ ಸರ್ಕಾರವು ಹೌದು, ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಜಾರಿಯಲ್ಲಿತ್ತು. ಕೇಂದ್ರ ಸರ್ಕಾರದ ₹6ಸಾವಿರದ ಜೊತೆಗೆ ಬಿಜೆಪಿ ಸರ್ಕಾರ ಇದ್ದಾಗ, ₹4 ಸಾವಿರ ಸೇರಿಸಿ ₹10 ಸಾವಿರ ನೀಡುತ್ತಿದ್ದೆವು. ಈಗ ರಾಜ್ಯ ಸರ್ಕಾರ ತನ್ನ ಪಾಲಿನ ₹4 ಸಾವಿರ ನಿಲ್ಲಿಸಿ ದ್ವೇಷದ ರಾಜಕಾರಣ ಮಾಡುತ್ತಿದೆ. ಜೊತೆಗೆ ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ನಿಲ್ಲಿಸಿದೆ ಎಂದರು.

ನಾವು ಕಾಂಗ್ರೆಸ್ ಸರ್ಕಾರ ವೈಫಲ್ಯತೆ ಮತ್ತು ನಮ್ಮ ಹಿಂದಿನ ರಾಜ್ಯ ಸರ್ಕಾರದ ಸಾಧನೆ, ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು, ನರೇಂದ್ರ ಮೋದಿಯವರ ರಾಷ್ಟ್ರ ಪ್ರೇಮ ಇವೆಲ್ಲ ಮುಂದಿಟ್ಟು ಈ ಬಾರಿ ಲೋಕಸಭಾ ಚುನಾವಣೆ ಎದುರಿಸುತ್ತೇವೆ. ಶಿವಮೊಗ್ಗ ಕ್ಷೇತ್ರ ಸೇರಿ ರಾಜ್ಯದಲ್ಲಿ ಅತಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಡಿ.ಮೇಘರಾಜ್, ಎಸ್.ದತ್ತಾತ್ರಿ, ಚಂದ್ರಶೇಖರ್, ಅಣ್ಣಪ್ಪ ಇದ್ದರು.

ಕಾಂಗ್ರೆಸ್ ಪಟ್ಟಿಯಲ್ಲಿ ಕುಟುಂಬಗಳಿಗೇ ಟಿಕೆಟ್‌

ಕಾಂಗ್ರೆಸ್ ಪಕ್ಷ ತನ್ನ ಎರಡನೇಯ ಪಟ್ಟಿ ಬಿಡುಗಡೆ ಮಾಡಿದೆ. ಆ ಎರಡನೇ ಪಟ್ಟಿ ಸೂಕ್ಷ್ಮವಾಗಿ ಗಮನಿಸಿದರೆ ಕುಟುಂಬ ರಾಜಕಾರಣವೇ ಎದ್ದು ಕಾಣುತ್ತಿದೆ. ಇದನ್ನು ನೋಡಿಯೋ ಕಾರ್ಯಕರ್ತರು ಸುಮ್ಮನಿದ್ದಾರೆ. ಇದು ಕಾರ್ಯಕರ್ತರ ಸಂಯಮ. ಬಿಜೆಪಿಯಲ್ಲಿ ಕೆಳಹಂತದಿಂದ ಕೆಲಸ ಮಾಡಿದವರಿಗೆ ಟಿಕೆಟ್‌ ನೀಡಿದೆ. ಆದರೆ, ಯಾವ ಕೆಲಸವನ್ನು ಮಾಡದವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್‌ ನೀಡಿದೆ ಎಂದು ಪ್ರಶ್ನೆಯೊಂದಕ್ಕೆ ಡಿ.ಎಸ್.ಅರುಣ್ ಉ್ತತರಿಸಿದರು.