ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಹಳೇ ಪಿಂಚಣಿ ಜಾರಿಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದು ಭವಿಷ್ಯದಲ್ಲಿ ಜಾರಿಗೆ ತರಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಪ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಶ್ರೀನಿವಾಸ್ ಪರ ಪ್ರಚಾರ ಕೈಗೊಂಡಿದ್ದ ಅವರು, ಸೋಮವಾರ ಚಿತ್ರದುರ್ಗಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಇಲಾಖೆಯಲ್ಲಿ ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ. ವಿರೋಧ ಪಕ್ಷಗಳ ಟೀಕೆಗಳಿಗೆಲ್ಲಾ ತಲೆಕೆಡಿಸಿ ಕೊಳ್ಳುವುದಿಲ್ಲವೆಂದರು. ಮೂರು ಪದವೀಧರ ಹಾಗೂ ಮೂರು ಆಗ್ನೇಯ ಶಿಕ್ಷಕರುಗಳ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಶಿಕ್ಷಕರುಗಳಲ್ಲಿ ಮನವಿ ಮಾಡಿದರು.
ಪಾರ್ಲಿಮೆಂಟ್ ಚುನಾವಣೆಯಲ್ಲಿಯೂ ನಮ್ಮ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಶಿಕ್ಷಕರು, ಪದವೀಧರರಿಗೆ ಕಾಂಗ್ರೆಸ್ ಸರ್ಕಾರ ಯುವನಿಧಿ ಗ್ಯಾರೆಂಟಿಗಳನ್ನು ನೀಡಿದೆ. ಓಪಿಎಸ್ ನಮ್ಮ ಪ್ರಣಾಳಿಕೆಯಲ್ಲಿದೆ. ಕಳೆದ ಫೆಬ್ರವರಿ, ಮಾರ್ಚ್‍ನಲ್ಲಿ ಹನ್ನೆರಡು ಸಾವಿರ ಶಿಕ್ಷಕರುಗಳನ್ನು ನೇಮಕ ಮಾಡಿಕೊಂಡಿದ್ದೇವೆ. ಮೊದಲಿನಿಂದಲೂ ಶಿಕ್ಷಣಕ್ಕೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಸಹಕಾರ ಕೊಡುತ್ತಿದೆ. ಶಿಕ್ಷಕರುಗಳಿಗೆ ಗಂಭೀರವಾದ ಸಮಸ್ಯೆಗಳಿವೆ. ಹಂತ ಹಂತವಾಗಿ ಎಲ್ಲವನ್ನು ಪರಿಹರಿಸಲಾಗುವುದೆಂದು ಭರವಸೆ ನೀಡಿದರು.ಪಠ್ಯಪುಸ್ತಕ ಪರಿಷ್ಕರಣೆಯಾಗಿ ಶುದ್ಧವಾಗಿದೆ. ವಿರೋಧ ಪಕ್ಷದವರು ಬರೀ ಟೀಕೆ ಟಿಪ್ಪಣಿಗಳನ್ನು ಮಾಡಿಕೊಂಡು ಕಾಲ ಕಳೆಯುವುದರಲ್ಲಿ ಅರ್ಥವಿಲ್ಲ. ಅಭಿವೃದ್ಧಿಗಾಗಿ ಆಡಳಿತ ಪಕ್ಷದೊಂದಿಗೆ ಕೈಜೋಡಿಸುವುದನ್ನು ಕಲಿಯಬೇಕು. ಅನುದಾನಿತ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಹೇಳಿದರು.
ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಹನುಮಂತಪ್ಪ, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ವಿಜಯೇಂದ್ರ ಫ್ರೀ ಇದ್ರೆ ಬಂದು ಕಟಿಂಗ್ ಮಾಡ್ಲಿ: ಸಚಿವಚಿತ್ರದುರ್ಗ: ನನಗ ಕಟಿಂಗ್ ಮಾಡುವವರು ಬಿಜಿ ಇದ್ದಾರೆ. ಹಾಗಾಗಿ ವಿಜಯೇಂದ್ರ ಫ್ರೀಯಿದ್ದಲ್ಲಿ ಬಂದು ಕಟಿಂಗ್ ಮಾಡಲಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರಗೆ ಟಾಂಗ್ ನೀಡಿದರು. ನಮ್ ಅಪ್ಪ ಸಿಎಂ ಆಗಿದ್ದರೆಂಬ ಭ್ರಮೆಯಲ್ಲಿ ವಿಜಯೇಂದ್ರ ಇದ್ದು, ಅಲ್ಲಿಂದ ಹೊರ ಬರಬೇಕು. ಚಿತ್ರರಂಗದ ಬಗ್ಗೆ ಅವರು ಮಾತನಾಡುವ ಅಗತ್ಯವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಏನು ಮಾಡಬೇಕೆಂಬ ಬಗ್ಗೆ ಯೋಚಿಸಲಿ ಎಂದರು.ಜೂನ್ 4ಕ್ಕೆ ಅವರ ಹಣೆ ಬರಹ ಅವರು ನೋಡಿಕೊಳ್ಳಲಿ. ನನ್ನ ಹಣೆಬರಹ ನಾನು ನೋಡಿಕೊಳ್ಳುತ್ತೇನೆ, ತೊಂದರೆಯಿಲ್ಲ. ಇಷ್ಟು ವರ್ಷ ಬಿಜೆಪಿ ಮಾಡಿದ ಹೊಲಸನ್ನು ನಾವು ಸರಿ ಮಾಡುತ್ತಿದ್ದೇವೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ಪಠ್ಯ ಪರಿಷ್ಕರಣೆ ಮಾಡಿದ್ದೇವೆ. ಬಿಜೆಪಿ ಹಣ ಬರಹಕ್ಕೆ ಶಿಕ್ಷಕರ ನೇಮಕಾತಿ ಮಾಡಲಾಗಿಲ್ಲ, ನಾವು ಬಂದ ನಂತರ ನೇಮಕಾತಿ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಮಧು ಬಂಗಾರಪ್ಪ ಉತ್ತರಿಸಿದರು.