ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಜನವಿರೋಧಿ ಮತ್ತು ಸಮಾಜವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ಕಳೆದ ಮೂರೂವರೆ ವರ್ಷದಿಂದ ಯುವಕರಿಗೆ ಉದ್ಯೋಗ ಕಲ್ಪಿಸುವುದಾಗಿ ಹೇಳುತ್ತಲೇ ಬಂದಿದ್ದರೂ, ಅವರ ಸಬಲೀಕರಣಕ್ಕೆ ಪೂರಕವಾದ ಕೆಲಸಗಳನ್ನು ಮಾಡಿಲ್ಲ ಎಂದು ಟೀಕಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಯುವಕರಿಗೆ ಉದ್ಯೋಗ ನೀಡುವುದಾಗಿ ಭರವಸೆಗಳ ಮೇಲೆ ಭರವಸೆ ನೀಡುತ್ತಿರುವ ಕಾಂಗ್ರೆಸ್ ಸರ್ಕಾರ, ಅವರ ಸಬಲೀಕರಣಕ್ಕೆ ಅಗತ್ಯವಾದ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಯುವಕರ ಭವಿಷ್ಯಕ್ಕೆ ಮಾರಕವಾಗಿರುವ ಆಡಳಿತವನ್ನು ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಆರೋಪಿಸಿದರು.

ನಗರದ ನಾರಾಯಣಿ ಕನ್ವನ್ಷನ್ ಹಾಲ್‌ನಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಕೆ.ಎಂ.ಸುರೇಶ್ ಪರವಾಗಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರದ ಆಡಳಿತ ವೈಖರಿ, ಉದ್ಯೋಗ ನೇಮಕಾತಿ ಪ್ರಕ್ರಿಯೆ ಹಾಗೂ ಯುವಕರ ಭವಿಷ್ಯದ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಜನವಿರೋಧಿ ಮತ್ತು ಸಮಾಜವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ಕಳೆದ ಮೂರೂವರೆ ವರ್ಷದಿಂದ ಯುವಕರಿಗೆ ಉದ್ಯೋಗ ಕಲ್ಪಿಸುವುದಾಗಿ ಹೇಳುತ್ತಲೇ ಬಂದಿದ್ದರೂ, ಅವರ ಸಬಲೀಕರಣಕ್ಕೆ ಪೂರಕವಾದ ಕೆಲಸಗಳನ್ನು ಮಾಡಿಲ್ಲ ಎಂದು ಟೀಕಿಸಿದರು.

ಪ್ರತಿಯೊಬ್ಬ ಯುವಕನಿಗೂ ಉತ್ತಮ ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳುವ ಅಥವಾ ಸ್ವಂತ ಉದ್ಯಮ ಆರಂಭಿಸಿ ಉದ್ಯೋಗದಾತನಾಗುವ ಅವಕಾಶ ದೊರೆಯಬೇಕು. ಆದರೆ, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಯುವಕರಿಗೆ ಕೇವಲ ಭರವಸೆಗಳನ್ನು ನೀಡುವುದರಿಂದ ಅವರ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂದು ಹೇಳಿದರು.

ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ ಇದೆ ಎಂದು ಆರೋಪಿಸಿದ ಅವರು, ವಿವಿಧ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಅಕ್ರಮಗಳ ಆರೋಪಗಳು ಯುವಕರಲ್ಲಿ ಆತಂಕ ಮೂಡಿಸಿವೆ ಎಂದರು.

ಅರ್ಹತೆ ಮತ್ತು ಪ್ರತಿಭೆಯ ಆಧಾರದ ಮೇಲೆ ಉದ್ಯೋಗ ಪಡೆಯಲು ಯುವಕರಿಗೆ ನ್ಯಾಯಯುತ ಅವಕಾಶ ದೊರೆಯಬೇಕು. ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡದಿರುವುದು ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಯುವಕರು, ರೈತರು ಮತ್ತು ದಲಿತರ ಸಮಸ್ಯೆಗಳಿಗೆ ಆದ್ಯತೆ ನೀಡುವ ಬದಲು ಕಾಂಗ್ರೆಸ್ ಸರ್ಕಾರ ರಾಜಕೀಯ ವಿವಾದಗಳಲ್ಲಿ ತೊಡಗಿದೆ, ಸರ್ಕಾರದ ವಿರುದ್ಧ ಭ್ರಷ್ಟಾಚಾರ ಮತ್ತು ವಿವಿಧ ಹಗರಣಗಳ ಆರೋಪಗಳು ಕೇಳಿಬರುತ್ತಿವೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಸರ್ಕಾರದ ಆದ್ಯತೆಯಾಗಬೇಕು ಎಂದು ತಿಳಿಸಿದರು.

ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ರೈತರ ಸಂಕಷ್ಟಗಳಿಗೆ ಸ್ಪಂದಿಸುವುದು ಹಾಗೂ ದಲಿತರ ಹಿತಾಸಕ್ತಿಗಳನ್ನು ರಕ್ಷಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರ ಈ ವಿಚಾರಗಳಲ್ಲಿ ನಿರೀಕ್ಷಿತ ರೀತಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಟೀಕಿಸಿದರು.

ಇಂತಹ ಪರಿಸ್ಥಿತಿಯಲ್ಲಿ ಯುವಜನರ ಭವಿಷ್ಯ, ಉದ್ಯೋಗಾವಕಾಶಗಳು ಮತ್ತು ಪದವೀಧರರ ಸಮಸ್ಯೆಗಳಿಗೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವಾಗ ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.