ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪ
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿರುವ ಭರವಸೆಗಳನ್ನು ಚಾಚೂ ತಪ್ಪದಂತೆ ಪಾಲಿಸಿದ್ದು, ಕಾಂಗ್ರೆಸ್ ಸರ್ಕಾರ ಜನಪರ ಸರ್ಕಾರ ಎನ್ನುವುದನ್ನು ಪಂಚಗ್ಯಾರಂಟಿಗಳ ಮೂಲಕ ಸಾಬೀತು ಪಡಿಸಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಮಂಗಳವಾರ ಬಾಳಗಡಿಯ ತಾಪಂ ಆವರಣದಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಸಮಿತಿಯ ಕೊಪ್ಪ ತಾಲೂಕು ಸಮಿತಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಸಮಯದಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದ ಜನಸಾಮಾನ್ಯರು ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಆದ್ದರಿಂದ ಜನಸಾಮಾನ್ಯರಿಗೆ ಆರ್ಥಿಕವಾಗಿ ಶಕ್ತಿ ನೀಡಲು ಕಾಂಗ್ರೆಸ್ ಸರ್ಕಾರ ಮುಂದೆ ಬಂದು ಪಂಚ ಗ್ಯಾರಂಟಿಗಳನ್ನು ನೀಡಿದೆ ಎಂದರು.ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸಂಕಷ್ಟ ಸ್ಥಿತಿಗೆ ತಲುಪಲಿದೆ ಎಂದು ವಿಪಕ್ಷಗಳು ಅಪಪ್ರಚಾರದಲ್ಲಿ ತೊಡಗಿದೆ. ಗ್ಯಾರಂಟಿಗಳ ನಡುವೆಯೂ ಶೃಂಗೇರಿ ಕ್ಷೇತ್ರದ ಅಭಿವೃದ್ಧಿಗೆ 100 ಕೋಟಿ ಅನುದಾನ ಮಂಜೂರು ಮಾಡಿ ಕಾಮಗಾರಿ ಆರಂಭವಾಗುವ ಹಂತದಲ್ಲಿವೆ.
ರಸ್ತೆ ಗುಂಡಿಗಳನ್ನು ಮುಚ್ಚಲು ಸಂಪೂರ್ಣ ಮಳೆ ನಿಂತಿಲ್ಲ, ಮಳೆ ಕಡಿಮೆಯಾದ ಮೇಲೆ ಉತ್ತಮ ದರ್ಜೆಯ ಕಾಮಗಾರಿ ನೆರವೇರಿಸಲಾಗುವುದು. ವಿಪಕ್ಷಗಳಿಗೆ ಪ್ರಚಾರಕ್ಕೆ ವಿಚಾರಗಳೇ ಇಲ್ಲದೆ ಇದ್ದಾಗ ಅಪಪ್ರಚಾರದಲ್ಲಿ ತೊಡಗಿಕೊಳ್ಳುವುದು ಸಹಜ ಎಂದು ಹೇಳಿದರು.ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಶಿವಾನಂದ ಸ್ವಾಮಿ ಮಾತನಾಡಿ, ಸರ್ಕಾರ ನೀಡಿದ ಗ್ಯಾರಂಟಿಗಳು ಜನಸಾಮನ್ಯರಿಗೆ ತಲುಪುತ್ತಿರುವ ಕುರಿತು ಪರಿಶೀಲಿಸಲು ಸರ್ಕಾರ ಅನುಷ್ಠಾನ ಸಮಿತಿ ಜಾರಿಗೊಳಿಸಿದೆ.
ಕೊಪ್ಪ ತಾಲೂಕಿನಲ್ಲಿಯೂ ಅನುಷ್ಠಾನ ಸಮಿತಿ ಅಸ್ತಿತ್ವದಲ್ಲಿದ್ದು ಶಶಿಕುಮಾರ್ ಅವರು ಅಧ್ಯಕ್ಷರಾಗಿ, ತಾಪಂ ಒಒ ನವೀನ್ ಕುಮಾರ್ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದು, 14 ಜನ ಸದಸ್ಯರ ತಂಡವನ್ನು ಸಮಿತಿ ಹೊಂದಿದೆ.ಕೊಪ್ಪ ತಾಲೂಕಿನಲ್ಲಿ ಪಂಚ ಗ್ಯಾರಂಟಿಗಳ ಬಗ್ಗೆ ಮಾಹಿತಿ ಪಡೆಯಲು ತಾಪಂ ಕಾರ್ಯ ನಿರ್ವಹಣಾಧಿಕಾರಿ ಅಥವಾ ತಾಲೂಕು ಸಮಿತಿಯ ಅಧ್ಯಕ್ಷ ಶಶಿಕುಮಾರ್‌ಅವರ ದೂ.ಸಂ: 9448530455 ಗೆ ಸಂಪರ್ಕಿಸಬಹುದು ಎಂದು ಶಿವಾನಂದ ಸ್ವಾಮಿ ತಿಳಿಸಿದ್ದಾರೆ. ಈ ವೇಳೆ ತಾಲೂಕು ಸಮಿತಿಯ ಸದಸ್ಯರು, ಕೆಡಿಪಿ ಸದಸ್ಯರು ಮತ್ತು ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು ಇದ್ದರು.