ರಾಜ್ಯದಲ್ಲಿ ಬಾಣಂತಿಯರ ಸಾವಿಗೆ ಕಾಂಗ್ರೆಸ್ ಸರ್ಕಾರವೇ ಹೊಣೆ : ರೂಪಾಲಿ ಎಸ್. ನಾಯ್ಕ

| Published : Dec 17 2024, 01:00 AM IST / Updated: Dec 17 2024, 12:30 PM IST

ರಾಜ್ಯದಲ್ಲಿ ಬಾಣಂತಿಯರ ಸಾವಿಗೆ ಕಾಂಗ್ರೆಸ್ ಸರ್ಕಾರವೇ ಹೊಣೆ : ರೂಪಾಲಿ ಎಸ್. ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಮಹಿಳೆಯರ ಜೀವಕ್ಕೆ ಬೆಲೆ ಇಲ್ಲವಾಗಿದೆ. ಬಾಣಂತಿಯರ ಸಾವಿನ ಸರಣಿಯಲ್ಲಿ ಹಸುಗೂಸುಗಳು ಅನಾಥವಾಗುತ್ತಿವೆ. ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ, ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಲೇ ಇದ್ದರೂ ಕಾಂಗ್ರೆಸ್ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದರು.

ಕಾರವಾರ: ರಾಜ್ಯದಲ್ಲಿ ಬಾಣಂತಿಯರು ಹಾಗೂ ಹಸುಗೂಸುಗಳ ಸಾವಿನ ಸರಣಿಗೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದ್ದು, ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಕಿಡಿಕಾರಿದರು.

ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸೋಮವಾರ ಬಿಜೆಪಿ ಮಹಿಳಾ ಮೋರ್ಚಾದಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಸಿ. ಮಂಜುಳಾ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪಕ್ಷದ ಹಿರಿಯ ನಾಯಕರೊಂದಿಗೆ ಪಾಲ್ಗೊಂಡು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಮಹಿಳೆಯರ ಜೀವಕ್ಕೆ ಬೆಲೆ ಇಲ್ಲವಾಗಿದೆ. ಬಾಣಂತಿಯರ ಸಾವಿನ ಸರಣಿಯಲ್ಲಿ ಹಸುಗೂಸುಗಳು ಅನಾಥವಾಗುತ್ತಿವೆ. ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ, ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಲೇ ಇದ್ದರೂ ಕಾಂಗ್ರೆಸ್ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಮೇಲಿಂದ ಮೇಲೆ ಹಗರಣಗಳು ಹೊರಬೀಳುತ್ತಿದ್ದರೂ ಕಾಂಗ್ರೆಸ್ ಸರ್ಕಾರ ದುರಾಡಳಿತ ಮುಂದುವರಿಸಿದೆ. ಜನಕಂಟಕವಾದ ಈ ಸರ್ಕಾರ ತೊಲಗಲಿ ಎಂದು ರೂಪಾಲಿ ಎಸ್. ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ, ಸಿ.ಟಿ. ರವಿ, ಚಲವಾದಿ ನಾರಾಯಣಸ್ವಾಮಿ, ಶಶಿಕಲಾ ಜೊಲ್ಲೆ, ಎಸ್.ಆರ್. ವಿಶ್ವನಾಥ, ಡಾ. ಭರತ ಶೆಟ್ಟಿ, ಭಾಗೀರಥಿ ಮರುಳ್ಯ, ಮಂಗಳಾ ಅಂಗಡಿ, ರವಿ ಕುಮಾರ್, ಭಾರತಿಶೆಟ್ಟಿ, ಹೇಮಲತಾ ನಾಯ್ಕ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸಿ. ಮಂಜುಳಾ, ಬೆಳಗಾವಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಗೀತಾ ಸುತಾರಾ ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 

ಹೋರಾಟಗಾರರ ಬಂಧಿಸಿ ಬಿಡುಗಡೆ

ಪ್ರತಿಭಟನೆಯ ಬಳಿಕ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ರೂಪಾಲಿ ಎಸ್. ನಾಯ್ಕ ಸೇರಿದಂತೆ ಪ್ರತಿಭಟನಾಕಾರರನ್ನು ಬಂಧಿಸಿ, ಪೊಲೀಸ್ ಠಾಣೆಗೆ ಕರೆದೊಯ್ದು ನಂತರ ಬಿಡುಗಡೆಗೊಳಿಸಿದರು.

ತುಳಸಿ ಗೌಡ ನಿಧನಕ್ಕೆ ರೂಪಾಲಿ ಸಂತಾಪ

ಕಾರವಾರ: ವೃಕ್ಷಮಾತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿ ಗೌಡ ಅಗಲಿಕೆ ತೀವ್ರ ನೋವು, ಆಘಾತವನ್ನು ಉಂಟುಮಾಡಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ತುಳಸಿ ಗೌಡ ಅವರನ್ನು ತಾವು ಭಾನುವಾರ ಸಂಜೆ ಭೇಟಿ ಮಾಡಿ ಕೆಲ ಸಮಯ ಅವರೊಂದಿಗಿದ್ದು, ಅವರ ಕುಟುಂಬದವರೊಂದಿಗೆ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದೆ. ಕುಟುಂಬದವರೊಂದಿಗೆ ನಾನಿರುವುದಾಗಿ ಧೈರ್ಯ ತುಂಬಿದ್ದೆ. ಶೀಘ್ರದಲ್ಲಿ ಚೇತರಿಸಿಕೊಳ್ಳುವಂತಾಗಲಿ ಎಂದು ಪ್ರಾರ್ಥಿಸಿದ್ದೆ. ಸೋಮವಾರ ಅವರ ನಿಧನರಾದ ಸುದ್ದಿ ತಿಳಿದು ತೀವ್ರ ನೋವು ಉಂಟಾಯಿತು.ಹಾಲಕ್ಕಿ ಸಮಾಜದ ನಮ್ಮೆಲ್ಲರ ಹೆಮ್ಮೆಯ ತುಳಸಿ ಗೌಡ ನಮ್ಮ ಕ್ಷೇತ್ರ, ರಾಜ್ಯ ಹಾಗೂ ರಾಷ್ಟ್ರದ ಅನರ್ಘ್ಯ ರತ್ನ. ಬಡತನದ ಬದುಕಿನಲ್ಲೂ ವೃಕ್ಷಪ್ರೇಮ ಮೆರೆದು ಪರಿಸರವನ್ನು ಶ್ರೀಮಂತಗೊಳಿಸಿದ ಅವರ ನಿಧನದಿಂದ ನಮ್ಮೆಲ್ಲರಿಗೆ, ಪರಿಸರಕ್ಕೆ, ಈ ನಾಡಿಗೆ ತುಂಬಲಾರದ ಹಾನಿ ಉಂಟಾದಂತಾಗಿದೆ.

ಅವರ ಆತ್ಮಕ್ಕೆ ಶಾಂತಿ ದೊರೆಯಲಿ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.