ಸಾರಾಂಶ
ನನಗೂ ಫ್ರೀ, ನಿನಗೂ ಫ್ರೀ, ಕಾಕಾ ಪಾಟೀಲ್‌ಗೂ ಫ್ರೀ ಎಂದು ಹೇಳಿ ಟಕಾಟಕ್ ಗ್ಯಾಂಗ್ 6ನೇ ಗ್ಯಾರಂಟಿಯಾಗಿ ಬೆಲೆ ಏರಿಕೆ ಮಾಡಿದೆ.
ಶಿರಸಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ದರ ₹೩ ಹಾಗೂ ಡಿಸೇಲ್ ₹೩.೫ ಏರಿಕೆ ಮಾಡಿ, ಗ್ಯಾರಂಟಿಗೆ ಹಣ ಹೊಂದಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ದುರಂಹಕಾರದ ರೀತಿಯಲ್ಲಿ ವರ್ತಿಸಿ, ಅಗತ್ಯ ವಸ್ತುಗಳ ದರ ಏರಿಕೆ ಮಾಡಿ, ಜನಸಾಮಾನ್ಯರ ಮೇಲೆ ಬರೆ ಎಳೆದಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ವಾಗ್ದಾಳಿ ನಡೆಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನಗೂ ಫ್ರೀ, ನಿನಗೂ ಫ್ರೀ, ಕಾಕಾ ಪಾಟೀಲ್‌ಗೂ ಫ್ರೀ ಎಂದು ಹೇಳಿ ಟಕಾಟಕ್ ಗ್ಯಾಂಗ್ 6ನೇ ಗ್ಯಾರಂಟಿಯಾಗಿ ಬೆಲೆ ಏರಿಕೆ ಮಾಡಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಹಿಂತೆಗೆದುಕೊಳ್ಳುವವರೆಗೂ ವಿವಿಧ ಹಂತದಲ್ಲಿ ಹೋರಾಟ, ಪ್ರತಿಭಟನೆ ನಡೆಸಲು ಬಿಜೆಪಿಯಿಂದ ತೀರ್ಮಾನಿಸಲಾಗಿದೆ.
ಮೊದಲ ಹಂತದಲ್ಲಿ ಶಿರಸಿ ನಗರದ ಹಳೆ ಬಸ್ ನಿಲ್ದಾಣದ ಸರ್ಕಲ್ ನಲ್ಲಿ ಜೂ. ೧೭ರಂದು ಬೆಳಗ್ಗೆ ೧೦.೩೦ ಗಂಟೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಶಾಸಕರು, ಮಾಜಿ ಶಾಸಕರು, ಪಕ್ಷದ ಮುಖಂಡರು, ಮೋರ್ಚಾ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಆಟೋ, ಟ್ಯಾಕ್ಸಿ ಚಾಲಕ, ಮಾಲೀಕರ ಸಂಘವು ಬೆಂಬಲ ನೀಡಿದೆ ಎಂದರು.ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ತೈಲ ಬೆಲೆ ಏರಿಕೆಯಿಂದ ಸಾರಿಗೆ, ಸರಕು ಸಾಗಾಟ ದುಬಾರಿಯಾಗಿರುವುದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವುದು ಸಹಜ. ಜನಪರ ಆಡಳಿತ ನೀಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ತೈಲ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿದರು.ನಗರ ಮಂಡಲಾಧ್ಯಕ್ಷ ಆನಂದ ಸಾಲೇರ ಮಾತನಾಡಿ, ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರಾಗಿ ಸಂದರ್ಭದಲ್ಲಿ ತಂದ ಯೋಜನೆ ಮತ್ತು ಕಾಮಗಾರಿಯನ್ನು ಇಂದಿನ ಶಾಸಕರು ನಾನು ತಂದ ಯೋಜನೆ, ನನ್ನ ಅವಧಿಯಲ್ಲಿ ನಡೆದ ಕಾಮಗಾರಿ ಎಂದು ಬಿಂಬಿಸಲು ಹೊರಟಿದ್ದಾರೆ. ಹಳೆ ಬಸ್ ನಿಲ್ದಾಣದ ನೂತನ ಕಟ್ಟಡ ಕಾಮಗಾರಿಯು ವಿಶ್ವೇಶ್ವರ ಹೆಗಡೆ ಅವಧಿಯಲ್ಲಿ ಆಗಿರುವ ಕಾಮಗಾರಿಯಾಗಿದೆ. ತಮ್ಮ ಸರ್ಕಾರ ಮಂಜೂರಿ ಮಾಡಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಹಿಂದೆ ಅಡಿಗಲ್ಲು ಹಾಕಿರುವ ಜಾಗ ಅಲ್ಪಸಂಖ್ಯಾತರು ನಮ್ಮದು ಎಂದು ಹೇಳಿರುವ ಕಾರಣಕ್ಕೆ ಅಲ್ಪಸಂಖ್ಯಾತರ ಓಲೈಕೆಗಾಗಿ ಜಾಗ ಬದಲಾವಣೆ ಮಾಡಿ, ರಾಯಪ್ಪ ಶಾಲೆಯ ಜಾಗದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಇಂದಿನ ಕಾಂಗ್ರೆಸ್ ಸರ್ಕಾರ ಯಾವ ಮಟ್ಟಕ್ಕಾದರೂ ಇಳಿಯುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ ಕುಮಟಾ, ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ರವಿಚಂದ್ರ ಶೆಟ್ಟಿ, ಪ್ರಮುಖರಾದ ಆನಂದ ಗಾಂವ್ಕರ, ಸಂಜಯ ಸಜ್ಜನ ಮತ್ತಿತರರು ಇದ್ದರು.