ಕನ್ನಡಪ್ರಭ ವಾರ್ತೆ ಬೈಲಹೊಂಗಲಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸೇರ್ಪಡೆಯಾಗಿರುವ ಮತದಾರರ ಮತಗಳಿಂದ ಗೆಲುವು ಸಾಧಿಸಿದ ಕಾಂಗ್ರೆಸ್ ಸರ್ಕಾರ, ಮುಂದಿನ ಚುನಾವಣೆಗಳಲ್ಲೂ ಇದೇ ತಂತ್ರ ಅನುಸರಿಸಲು ಮುಂದಾಗಿದೆ ಎಂದು ಮಾಜಿ ಶಾಸಕ ಡಾ. ವಿ.ಐ. ಪಾಟೀಲ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸೇರ್ಪಡೆಯಾಗಿರುವ ಮತದಾರರ ಮತಗಳಿಂದ ಗೆಲುವು ಸಾಧಿಸಿದ ಕಾಂಗ್ರೆಸ್ ಸರ್ಕಾರ, ಮುಂದಿನ ಚುನಾವಣೆಗಳಲ್ಲೂ ಇದೇ ತಂತ್ರ ಅನುಸರಿಸಲು ಮುಂದಾಗಿದೆ ಎಂದು ಮಾಜಿ ಶಾಸಕ ಡಾ. ವಿ.ಐ. ಪಾಟೀಲ ಆರೋಪಿಸಿದರು.ನಗರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಎಲ್ಲವೂ ಕಾನೂನು ಪ್ರಕಾರವೇ ನಡೆಯಬೇಕು ಎಂದು ಚುನಾವಣಾ ಆಯೋಗವನ್ನು ಬಿಜೆಪಿ ಈಗಾಗಲೇ ಆಗ್ರಹಿಸಿದೆ. ಈ ವಿಚಾರದಲ್ಲಿ ಪಕ್ಷ ಕಾನೂನುಬದ್ಧ ಹೋರಾಟ ನಡೆಸಲಿದೆ ಎಂದರು.
ಸಾಂವಿಧಾನಿಕ ಹುದ್ದೆ ಹೊಂದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸಂಪುಟದೊಂದಿಗೆ ಚುನಾವಣಾ ಆಯೋಗದ ಮುಂದೆ ಧರಣಿ ನಡೆಸಿರುವುದು ಸರಿಯಲ್ಲ. ಮತದಾರರ ಪಟ್ಟಿಯಲ್ಲಿರುವ ಅನರ್ಹರನ್ನು ತೆಗೆದುಹಾಕುವ ಪ್ರಕ್ರಿಯೆಗೆ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.ಮರಣ ಹೊಂದಿದವರು, ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ಹಾಗೂ ದಾಖಲೆಗಳಿಲ್ಲದ ಮತದಾರರನ್ನು ಗುರುತಿಸಿ ಪಟ್ಟಿಯಿಂದ ತೆಗೆದುಹಾಕುವ ಕಾರ್ಯ ನಡೆಯುತ್ತಿದೆ. ಆದರೆ ಇಂತಹ ಮತಗಳನ್ನು ಕಳೆದುಕೊಳ್ಳುವ ಆತಂಕದಿಂದಲೇ ಕಾಂಗ್ರೆಸ್ ಸರ್ಕಾರ ಹಾಗೂ ಅದರ ಕಾರ್ಯಕರ್ತರು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಟೀಕಿಸಿದರು.
ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆ ನಡೆದರೆ ಅನರ್ಹ ಮತದಾರರು ಪತ್ತೆಯಾಗಲಿದ್ದಾರೆ. ದಾಖಲೆಗಳ ಪರಿಶೀಲನೆ ಬಳಿಕ ಯಾರು ಕಾನೂನುಬದ್ಧ ಮತದಾರರು ಎಂಬುದು ಸ್ಪಷ್ಟವಾಗಲಿದೆ. ದೇಶಾದ್ಯಂತ ಚುನಾವಣಾ ಆಯೋಗ ಕಾನೂನುಬದ್ಧವಾಗಿ ಎಸ್‌ಐಆರ್ ನಡೆಸುತ್ತಿದೆ. ದಾಖಲೆಗಳ ಕುರಿತು ಸ್ಪಷ್ಟನೆ ಅಗತ್ಯವಿರುವ ಮತದಾರರಿಗೆ ನೋಟಿಸ್ ನೀಡಲಾಗಿದೆ. ಅವರು ಅರ್ಹ ಮತದಾರರಾಗಿದ್ದರೆ ಸೂಕ್ತ ದಾಖಲೆಗಳನ್ನು ಸಲ್ಲಿಸಲಿ. ಅರ್ಹ ಮತದಾರರ ಮತದಾನದ ಹಕ್ಕನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.ಕಾನೂನು ಪ್ರಕಾರ ಫಾರಂ-7 ಅನ್ನು ಯಾರು ಬೇಕಾದರೂ ಸಲ್ಲಿಸಬಹುದು. ಆದರೆ ಈವರೆಗೆ ಚುನಾವಣಾ ಆಯೋಗವೇ ಯಾವುದೇ ವ್ಯಕ್ತಿಯ ಹೆಸರನ್ನು ಏಕಪಕ್ಷೀಯವಾಗಿ ತೆಗೆದುಹಾಕಿಲ್ಲ ಎಂದು ಸ್ಪಷ್ಟಪಡಿಸಿದೆ. ನೋಟಿಸ್ ಪಡೆದವರ ಆಕ್ಷೇಪಣೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ, ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬೇಕು ಎಂದರು.
ಅಧಿಕಾರದ ದುರುಪಯೋಗ ಮಾಡಿಕೊಂಡು ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬೆದರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಇಂತಹ ಬೆದರಿಕೆಗಳಿಗೆ ಬಿಜೆಪಿ ಕಾರ್ಯಕರ್ತರು ಜಗ್ಗುವುದಿಲ್ಲ ಎಂದರು.ಪಾರದರ್ಶಕ ಚುನಾವಣೆ ನಡೆಯಬೇಕು. ದೇಶದ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ತನ್ನ ಸರ್ಕಾರವನ್ನು ಆಯ್ಕೆ ಮಾಡುವ ಮತದಾನದ ಹಕ್ಕು ದೊರೆಯಬೇಕು ಎಂಬುದೇ ಬಿಜೆಪಿಯ ಧ್ಯೇಯ ಎಂದು ಹೇಳಿದರು.
ಎಸ್‌ಐಆರ್ ಸಂಬಂಧ ಅಧಿಕಾರಿಗಳಿಗೆ ಎಷ್ಟು ದೂರುಗಳು ಬಂದಿವೆ ಎಂಬುದನ್ನು ಬಹಿರಂಗಪಡಿಸಬೇಕು. ಕಾಂಗ್ರೆಸ್ ಕಾರ್ಯಕರ್ತರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸುವುದು ಎಷ್ಟು ಸಮಂಜಸ ಎಂಬುದನ್ನು ಪರಿಶೀಲಿಸಬೇಕು. ಖಾಸಗಿ ದೂರುಗಳನ್ನು ಆಧರಿಸಿ ಕ್ರಮ ಕೈಗೊಳ್ಳುವ ಬದಲು ಎಲ್ಲವೂ ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಯಬೇಕು ಎಂದು ಚುನಾವಣಾ ಆಯೋಗವನ್ನು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ ಎಂದರು.ರಾಜ್ಯದಲ್ಲಿ ಬರಗಾಲದ ಸಂದರ್ಭದಲ್ಲಿ ರೈತರಿಗೆ ಪರಿಹಾರ ನೀಡಲು ಹಣದ ಕೊರತೆ ಎದುರಿಸುತ್ತಿರುವ ಸರ್ಕಾರ, ತನ್ನ ವೈಫಲ್ಯಗಳನ್ನು ಮರೆಮಾಚಲು ಎಸ್‌ಐಆರ್ ವಿಚಾರವನ್ನು ಮುಂದಿಟ್ಟುಕೊಂಡು ಕುಂಟು ನೆಪ ಹುಡುಕುವುದನ್ನು ನಿಲ್ಲಿಸಬೇಕು ಎಂದು ಡಾ.ವಿ.ಐ.ಪಾಟೀಲ ಆಗ್ರಹಿಸಿದರು.