9 ವಿ.ವಿ.ಗಳ ಮುಚ್ಚುವ ಕಾಂಗ್ರೆಸ್ ಸರ್ಕಾರ ತೀರ್ಮಾನ ಖಂಡನೀಯ

| Published : Feb 17 2025, 12:32 AM IST

ಸಾರಾಂಶ

ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಸಚಿವ ಸಂಪುಟದ ಉಪ ಸಮಿತಿ ನಿರ್ಧಾರ ಪ್ರಕಟಿಸಿದೆ. ಇದನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಖಂಡಿಸುತ್ತದೆ ಎಂದು ಸಂಘಟನೆ ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ಎಸ್.ಸುಮನ್ ತಿಳಿಸಿದ್ದಾರೆ.

- ಎಐಡಿಎಸ್‌ಒ ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ಎಸ್.ಸುಮನ್ ಹೇಳಿಕೆ- - - ದಾವಣಗೆರೆ: ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಸಚಿವ ಸಂಪುಟದ ಉಪ ಸಮಿತಿ ನಿರ್ಧಾರ ಪ್ರಕಟಿಸಿದೆ. ಇದನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಖಂಡಿಸುತ್ತದೆ ಎಂದು ಸಂಘಟನೆ ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ಎಸ್.ಸುಮನ್ ತಿಳಿಸಿದ್ದಾರೆ.

ವಿಶ್ವವಿದ್ಯಾಲಯಗಳು ಜ್ಞಾನವೃದ್ಧಿಯ ಪೀಠಗಳು. ಈ ಮೂಲ ಪರಿಕಲ್ಪನೆಯನ್ನೇ ಗಾಳಿಗೆ ತೂರಿ ಹಿಂದಿನ ಬಿಜೆಪಿ ಸರ್ಕಾರವು ಜಿಲ್ಲೆಗೊಂದು ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಿತು. ಯಾವುದೇ ಶಿಕ್ಷಣ ತಜ್ಞರ ಅಭಿಪ್ರಾಯಗಳನ್ನು ಕೇಳದೇ, ಅಪ್ರಜಾತಾಂತ್ರಿಕವಾಗಿ ಈ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಲಾಯಿತು. ನೃಪತುಂಗ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಎಂಬ ಪಟ್ಟ ಕಟ್ಟಿ, ಇವುಗಳನ್ನು ಸ್ವಹಣಕಾಸು ಸಂಸ್ಥೆಗಳನ್ನಾಗಿ ಮಾಡಿ, 3 ಪಟ್ಟು ಶುಲ್ಕ ಹೆಚ್ಚಿಸಲಾಗಿತ್ತು. ಈ ಕುರಿತಾಗಿಯೂ ಎಐಡಿಎಸ್‌ಒ ಅನೇಕ ಬಾರಿ ಪ್ರತಿರೋಧ ವ್ಯಕ್ತಪಡಿಸಿತ್ತು. ಒಂದು ವಿಶ್ವವಿದ್ಯಾಲಯಕ್ಕೆ ತಲಾ ₹2 ಕೋಟಿ ಅನುದಾನವನ್ನು ಮಾತ್ರ ನಿಗದಿಪಡಿಸಲಾಯಿತು ಎಂದಿದ್ದಾರೆ.

ಸರ್ಕಾರದ ಈ ಅವೈಜ್ಞಾನಿಕ ನಡೆಯನ್ನು ಎಐಡಿಎಸ್‌ಓ ಪ್ರಶ್ನಿಸಿತ್ತು. ಹಿಂದಿನ ಬಿಜೆಪಿ ಸರ್ಕಾರದ ರೀತಿಯಲ್ಲೇ ಕಾಂಗ್ರೆಸ್ ಸರ್ಕಾರವು ಎಲ್ಲ ಪ್ರಜಾತಾಂತ್ರಿಕ ಪ್ರಕ್ರಿಯೆಗಳನ್ನು ಗಾಳಿಗೆ ತೂರಿ ಕೇವಲ ತನ್ನ ಸಂಪುಟ ಸಭೆಯ ಉಪಸಮಿತಿಯ ಮೂಲಕ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರವನ್ನು ಕೈಗೊಂಡಿದೆ. ಸರ್ಕಾರದ ಈ ನಡೆಯನ್ನು ಎಐಡಿಎಸ್‌ಒ ಉಗ್ರವಾಗಿ ಖಂಡಿಸುತ್ತದೆ.

ಬಾಗಿಲು ಮುಚ್ಚಲಿರುವ 9 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಬೋಧಕರು ಹಾಗೂ ಇತರೆ ಸಿಬ್ಬಂದಿ ಇದರ ಹೊಣೆ ಯಾರದ್ದೆಂಬ ಪ್ರಶ್ನೆ ಸರ್ಕಾರದ ಮುಂದಿಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಯಾವುದೇ ನಿರ್ಧಾರ ಏಕಪಕ್ಷೀಯವಾಗಿ ಕೈಗೊಳ್ಳದೇ, ಬೋಧಕರು, ಪಾಲಕರು, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರನ್ನೊಳಗೊಂಡ ಪ್ರಜಾತಾಂತ್ರಿಕ ಪ್ರಕ್ರಿಯೆ ಅನುಸರಿಸಬೇಕು ಎಂದು ಸರ್ಕಾರವನ್ನು ಎಐಡಿಎಸ್‌ಒ ಆಗ್ರಹಿಸಿದೆ.