ಸಾರಾಂಶ
ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ನೀಡಿದ್ದ ಭರವಸೆಯನ್ನು ಅಧಿಕಾರಕ್ಕೆ ಬಂದ ಮೇಲೆ ಈಡೇರಿಸಿಲ್ಲ.
ಕನ್ನಡಪ್ರಭ ವಾರ್ತೆ ಕೊಪ್ಪಳ
ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ನೀಡಿದ್ದ ಭರವಸೆಯನ್ನು ಅಧಿಕಾರಕ್ಕೆ ಬಂದ ಮೇಲೆ ಈಡೇರಿಸಿಲ್ಲ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದರು.ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಡೆಸುತ್ತಿರುವ ಸಾಮಾಜಿಕ ನ್ಯಾಯಕ್ಕಾಗಿ ಬೆಳಗಾವಿ ಚಲೋ ಅಂಬೇಡ್ಕರ್ ಜಾಥಾ- 2 ಶನಿವಾರ ಕೊಪ್ಪಳಕ್ಕೆ ಆಗಮಿಸಿದ್ದ ವೇಳೆ ಅಶೋಕ ವೃತ್ತದಲ್ಲಿ ಬಹಿರಂಗ ಭಾಷಣ ಮಾಡಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳ ವಿರುದ್ಧ ಈಗ ನಡೆದುಕೊಳ್ಳುತ್ತಿದೆ. ಇದು ಯೂ ಟರ್ನ್, ಮೋಸ ಹಾಗೂ ಸುಳ್ಳು ಹೇಳುವ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.ರಾಜ್ಯದಲ್ಲಿ 136 ಸೀಟು ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶೇ. 92ರಷ್ಟು ಮುಸ್ಲಿಮರು, ಶೇ. 67ರಷ್ಟು ದಲಿತರು ಶೇ. 60ರಷ್ಟು ಎಸ್ಟಿ ಸಮುದಾಯ, ಶೇ. 90ರಷ್ಟು ಕುರುಬರು ಹಾಗೂ ಇತರೆ ಹಿಂದುಳಿದ ಸಮುದಾಯಗಳು ಸಂಪೂರ್ಣ ಬೆಂಬಲ ನೀಡಿವೆ. ಆದರೆ ತನಗೆ ಓಟು ಕೊಟ್ಟವರ ಹಿತಾಸಕ್ತಿಯನ್ನು ಈ ಸರ್ಕಾರ ಮರೆತಿದೆ ಎಂದು ದೂರಿದರು.
ರಾಜ್ಯದಲ್ಲಿ ಪರಿಶಿಷ್ಟರು ಒಳಮೀಸಲಾತಿಗಾಗಿ 30 ವರ್ಷದಿಂದ ಹೋರಾಡಿದ್ದಾರೆ. ಒಳಮೀಸಲಾತಿಯನ್ನು ರಾಜ್ಯ ಸರ್ಕಾರಗಳು ಜಾರಿಗೊಳಿಸಬಹುದು ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಆದರೂ ಒಳಮೀಸಲಾತಿ ಜಾರಿಗೊಳಿಸದೆ ಕಾಲಹರಣ ಮಾಡುತ್ತಿದೆ.ಜಾಥಾ ಸಂಚಾಲಕ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಮಾತನಾಡಿ, ನಮ್ಮ ಜಾಥಾದ ಬೆಳಗಾವಿ ಪ್ರವೇಶಕ್ಕೆ ಸರ್ಕಾರ ತಡೆಯೊಡ್ಡಲು ಯತ್ನಿಸಿದರೆ ನಾವು ಕಲ್ಲು ಹೊಡೆಯುವುದಿಲ್ಲ, ಹಿಂಸೆ ಮಾಡಲ್ಲ. ನಮಗೆ ನಾವೇ ಹಿಂಸೆ ಪಟ್ಟುಕೊಂಡು ಅದನ್ನು ಸರ್ವಾಧಿಕಾರದ ವಿರುದ್ಧದ ಧಿಕ್ಕಾರ ಎಂದು ತೋರಿಸುತ್ತೇವೆ ಎಂದರು.
ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಹುಜೂರ ಅಹಮದ್, ಜಿಲ್ಲಾ ಕಾರ್ಯದರ್ಶಿ ಯುಸೂಫ್ ಮೋದಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಲೀಂ ಖಾದ್ರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ ಕೊಡ್ಲಿಪೇಟೆ, ಮುಖಂಡರಾದ ಚಂದ್ರು ಅಂಗಡಿ, ರಿಯಾಜ್ ಕಡಂಬು ಇತರರಿದ್ದರು.