ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಶೀಘ್ರ ಪತನ: ಸಂಸದ ಬಿ.ವೈ.ರಾಘವೇಂದ್ರ

| Published : Feb 12 2024, 01:33 AM IST

ಸಾರಾಂಶ

ಭದ್ರಾವತಿ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮಂಡಲದ ನೂತನ ಜವಾಬ್ದಾರಿ ಘೋಷಣೆ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಪಕ್ಷದ ಜವಾಬ್ದಾರಿಯನ್ನು ಸ್ವೀಕರಿಸಿದವರು ಪಕ್ಷದ ಸಿದ್ಧಾಂತಗಳನ್ನು ಸಾರ್ವಜನಿಕರಿಗೆ ತಿಳಿಸಿ, ಜನರನ್ನು ರಾಷ್ಟ್ರೀಯ ವಿಚಾರದೆಡೆಗೆ ಕೊಂಡೊಯ್ಯಬೇಕು. ರಾಜಕೀಯ ಎಂಬುದು ವೈಯಕ್ತಿಕ ಇಚ್ಛೆಯ ವಿಚಾರವಾಗಿದೆ. ಅದನ್ನು ಸಮರ್ಥವಾಗಿ ಎದುರಿಸಲು ಕಾರ್ಯಕರ್ತರ ಪ್ರಯತ್ನ ಅಗತ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮಂಡಲದ ನೂತನ ಜವಾಬ್ದಾರಿ ಘೋಷಣೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದಿನ ಅನೇಕರ ಪರಿಶ್ರಮದ ಪ್ರತಿಫಲವಾಗಿ ನಾವು ಅಧಿಕಾರ ಪಡೆದಿದ್ದೇವೆ. ನಾವು ಮುಂದಿನ ಪೀಳಿಗೆಗಾಗಿ ಶ್ರಮಿಸಬೇಕು ಎಂದರು.

ಮುಂಬರುವ ಲೋಕಸಭಾ ಚುನಾವಣೆಯ ಮೊದಲು ಅಥವಾ ನಂತರ ರಾಜ್ಯದ ಕಾಂಗ್ರೆಸ್ ಸರ್ಕಾರವು ಪತನ ಆಗುವುದು ನಿಶ್ಚಿತ. ಈ ಕಾರ್ಯವನ್ನು ಅವರ ಪಕ್ಷದ ಶಾಸಕರೇ ಮಾಡುತ್ತಾರೆ. ಅವರು ನೀಡಿದ ಉಚಿತ ಭಾಗ್ಯಗಳ ಗ್ಯಾರಂಟಿಗಳೇ ಅವರ ಸರ್ಕಾರದ ಪತನದ ಭಾಗ್ಯವನ್ನೂ ನೀಡುತ್ತವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಯಡಿಯೂರಪ್ಪ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ವಿಐಎಸ್‌ಎಲ್ ಕಾರ್ಖಾನೆಯ ಅಭಿವೃದ್ಧಿ ಮತ್ತು ಪುನರಾರಂಭದ ಬಗ್ಗೆ ಪತ್ರ ಬರೆದಿದ್ದರು. ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದನೆ ದೊರೆತಿದೆ ಎಂದು ಪತ್ರದ ಪ್ರತಿಯನ್ನು ಸಭೆಗೆ ಪ್ರದರ್ಶಿಸಿದರು.

ಎಂಎಲ್‌ಸಿ ಎಸ್.ರುದ್ರೇಗೌಡ ಮಾತನಾಡಿ, ಬಿ.ವೈ.ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾದ ಮೇಲೆ ರಾಜ್ಯದ ರಾಜಕಾರಣದಲ್ಲಿ ಮಿಂಚಿನ ಸಂಚಾರ ಉಂಟಾಗಿದೆ ಎಂದ ಅವರು, ವ್ಯಕ್ತಿ ರಾಜಕೀಯ ಎಂಬುದು ವೈಯಕ್ತಿಕ ಇಚ್ಛೆಯ ವಿಚಾರವಾಗಿದೆ. ಅದನ್ನು ಸಮರ್ಥವಾಗಿ ಎದುರಿಸಿ ಎಂದು ತಿಳಿಸಿದರು.

ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ ಮಾತನಾಡಿ, ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಿದೆ. ಅದರ ಫಲವಾಗಿ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತಾಗಿದೆ. ಇಂತಹ ಮಹಿಳೆಯರ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಪಕ್ಷಕ್ಕೆ ಅವರ ಮತಗಳ ಪ್ರಮಾಣವೂ ಹೆಚ್ಚಾಗಬೇಕು ಎಂದು ಹೇಳಿದರು.

ಮುಖಂಡ ಎಸ್.ದತ್ತಾತ್ರಿ ಮಾತನಾಡಿ, ಜನಸಂಘದ ಕಾಲದಿಂದ ಇಂದಿನ ಬಿಜೆಪಿವರೆಗೆ ರಾಷ್ಟ್ರೀಯಮಟ್ಟದ ಅಧ್ಯಕ್ಷರಾಗಿ ಸುಮಾರು 50-60 ಜನರನ್ನು ಕಾಣಬಹುದು. ಆದರೆ ಶತಮಾನದ ಇತಿಹಾಸ ಇರುವ ಕಾಂಗ್ರೆಸ್‌ನಲ್ಲಿ ಇಂತಹ ರಾಷ್ಟ್ರೀಯ ಮಟ್ಟದ ಎಷ್ಟು ಜನ ಅಧ್ಯಕ್ಷರನ್ನು ಕಾಣಲು ಸಾಧ್ಯ? ಅವರ ಹೆಸರುಗಳನ್ನು ಹೆಸರಿಸಲಿ ಎಂದು ಪ್ರಶ್ನಿಸಿದರು.

ಮುಖಂಡರಾದ ಕೂಡ್ಲಿಗೆರೆ ಹಾಲೇಶ್, ಸಿಮೆಂಟ್ ಮಂಜುನಾಥ್, ಎಸ್.ಎನ್. ಬಾಲಕೃಷ್ಣ, ಹರಿಕೃಷ್ಣ, ಜಿ.ಆನಂದ್, ನಗರಸಭಾ ಸದಸ್ಯರಾದ ವಿ.ಕದಿರೇಶ್, ಅನುಪಮ, ಶಶಿಕಲಾ, ಅನಿತಾ ಇತರರು ಉಪಸ್ಥಿತರಿದ್ದರು.

ಮಂಗೋಟೆ ರುದ್ರೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿ.ಧರ್ಮ ಪ್ರಸಾದ್ ಅಧ್ಯಕ್ಷತೆ ವಹಿಸಿ ಪಕ್ಷದ ವಿವಿಧ ಮೋರ್ಚಾಗಳ ನೂತನ ಪದಾಧಿಕಾರಿಗಳ ನೇಮಕವನ್ನು ಸಭೆಗೆ ತಿಳಿಸಿ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಗಾಯತ್ರಿ ಪ್ರಾರ್ಥನೆ ಮಾಡಿದರು. ಅಣ್ಣಪ್ಪ ಸ್ವಾಗತಿಸಿದರು. ಚನ್ನೇಶ್ ಕಾರ್ಯಕ್ರಮ ನಿರೂಪಿಸಿದರು.