ಸಾರಾಂಶ
ಶಿರಹಟ್ಟಿ: ಸರ್ಕಾರದ ಜಾಹೀರಾತುಗಳಲ್ಲಿ ಕೇವಲ ಗ್ಯಾರಂಟಿ ಯೋಜನೆಗಳನ್ನು ಪ್ರಚಾರ ಮಾಡಲಾಗುತ್ತಿದೆ. ಇದರ ಹೊರತಾಗಿ ಸರ್ಕಾರದಿಂದ ಯಾವುದೇ ಜನಪರವಾದ ಕಾರ್ಯಕ್ರಮಗಳು ಆಗಿಲ್ಲ ಎಂದು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.
ಮಂಗಳವಾರ ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಸರ್ಕಾರದ ಜಾಹೀರಾತುಗಳಲ್ಲಿ ಕೇವಲ ಗ್ಯಾರಂಟಿ ಯೋಜನೆಗಳನ್ನು ಪ್ರಚಾರ ಮಾಡಲಾಗುತ್ತಿದೆ. ಇದರ ಹೊರತಾಗಿ ಸರ್ಕಾರದಿಂದ ಯಾವುದೇ ಜನಪರವಾದ ಕಾರ್ಯಕ್ರಮಗಳು ಆಗಿಲ್ಲ ಎಂದು ದೂರಿದರು.ಎರಡು ವರ್ಷ ಸರ್ಕಾರ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾರದ ವೈಫಲ್ಯಗಳನ್ನು ರಾಜ್ಯದ ಜನರ ಮುಂದಿಡಬೇಕು ಎಂದು ಒತ್ತಾಯಿಸಿದರು. ಎರಡು ವರ್ಷಗಳಿಂದ ಬರೀ ಹಗರಣದಲ್ಲಿ ಮುಳುಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಚುನಾವಣೆ ಪೂರ್ವದಲ್ಲಿ ಕೊಟ್ಟ ಭರವಸೆ ಈಡೇರಿಸದೆ ವಿಫಲವಾಗಿದೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಭ್ರಷ್ಟಾಚಾರ, ಗಲಭೆಗಳು, ಅಧಿಕಾರಿಗಳ ಮೇಲೆ ದಬ್ಬಾಳಿಕೆ ಜೋರಾಗಿವೆ. ಅಲ್ಲಲ್ಲಿ ಕೋಮು ಗಲಭೆಗಳು, ಕೊಲೆ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿವೆ. ಸರ್ಕಾರ ಯಾವುದನ್ನೂ ಗಂಭೀರವಾಗಿ ಪರಿಗಣಿಸದೆ ಭ್ರಷ್ಟಾಚಾರದಲ್ಲಿ ತೊಡಗಿದೆ. ಸರ್ಕಾರ ಕಣ್ಣಿದ್ದು ಕುರುಡಾಗಿದೆ. ಕಿವಿಯಿದ್ದು ಕಿವುಡಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಸರ್ಕಾರ ಅದ್ಯಾವ ಮುಖವನ್ನು ಇಟ್ಟುಕೊಂಡು ಹೊಸಪೇಟೆಯಲ್ಲಿ ಸಾಧನಾ ಸಮಾವೇಶವನ್ನು ಏರ್ಪಡಿಸಿದೆ ಏನೋ ಗೊತ್ತಿಲ್ಲ. ಅಲ್ಲಿ ಅದು ಸಾಧನೆಗಳ ಬದಲಿಗೆ ವೈಫಲ್ಯಗಳನ್ನೇ ಹೇಳಬೇಕಾದ ಸ್ಥಿತಿಯಲ್ಲಿದೆ. ಸರ್ಕಾರದ ದುರಾಡಳಿತದಿಂದ ರಾಜ್ಯ ಆರ್ಥಿಕ ದಿವಾಳಿಯ ಅಂಚಿನಲ್ಲಿದೆ.ಹಣಕಾಸು ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಅಭಿವೃದ್ದಿಗೆ ಹಣವಿಲ್ಲ ಈ ಮಾತನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಇಂತಹ ಜನವಿರೋಧಿ ನೀತಿಯಿಂದ ಅಗತ್ಯ ವಸ್ತುಗಳ ಬೆಲೆ ಮುಗಿಲು ಮುಟ್ಟಿದೆ. ಜನಸಾಮಾನ್ಯರ ಬದುಕು ಬರ್ಬರವಾಗಿದೆ ಎಂದು ಆರೋಪಿಸಿದರು. ಶಿರಹಟ್ಟಿ ವಿಧಾನ ಸಭಾ ಮತಕ್ಷೇತ್ರದಲ್ಲಿ ಎಲ್ಲ ರಸ್ತೆಗಳು ಹಾಳಾಗಿ ಹೋಗಿವೆ. ಈ ಕುರಿತಂತೆ ಅದಿವೇಶನದಲ್ಲಿಯೂ ಪ್ರಸ್ತಾಪಿಸಿದ್ದು, ನಯಾಪೈಸೆ ಅನುದಾನವನ್ನು ಸರ್ಕಾರ ನೀಡಿಲ್ಲ. ಪುರಸಭೆ, ಪಟ್ಟಣ ಪಂಚಾಯತಿಗಳಿಗೂ ಅನುದಾನ ನೀಡದೇ ಬೇಜವಾಬ್ದಾರಿ ತೋರಿದ ಸರ್ಕಾರ ಎಂದು ದೂರಿದರು.ತಹಸೀಲ್ದಾರರಿಂದಲೇ ಭ್ರಷ್ಟಾಚಾರ: ರಾಜ್ಯದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರಕ್ಕೆ ಶಿರಹಟ್ಟಿ ಮತಕ್ಷೇತ್ರವೂ ಹೊರತಾಗಿಲ್ಲ. ತಹಸೀಲ್ದಾರ್ ಅನಿಲ ಬಡಿಗೇರ ಅವರು ಲಂಚದ ಹಣಕ್ಕೆ ಜೋತುಬಿದ್ದು ತಾಲೂಕಿನ ತೆಗ್ಗಿನ ಭಾವನೂರ ಗ್ರಾಮದ ಶೃಂಗೇರಿ ಕೂಡ್ಲಮಠದ ಶ್ರೀಗಳ ಹೆಸರಿನಲ್ಲಿದ್ದ ೨೨ ಎಕರೆ ಜಮೀನನ್ನು ಪ್ರಭಾವಿಗಳಿಂದ ಹಣ ಪಡೆದು ಸಂಬಂಧಿಸಿದವರಿಗೆ ಯಾವುದೇ ನೋಟಿಸ್ ಕೂಡ ನೀಡದೆ ಹಕ್ಕು ಬದಲಾವಣೆ ಮಾಡಿಕೊಟ್ಟಿದ್ದಾರೆ ಎಂದು ಗಂಬೀರ ಆರೋಪ ಮಾಡಿದರು. ಅಲ್ಲದೆ ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಾನು ಲಮಾಣಿ, ಸಂದೀಪ ಕಪ್ಪತ್ತನವರ, ನಂದಾ ಪಲ್ಲೇದ, ಬಸವರಜ ವಡವಿ, ಬಸವರಾಜ ನಾಯ್ಕರ, ಅಕಬರ ಯಾದಗೀರಿ ಸೇರಿ ಅನೇಕರು ಇದ್ದರು.