ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ರಾಜ್ಯ ಕಾಂಗ್ರೆಸ್ ಸರ್ಕಾರ ನಾನಾ ಯೋಜನೆ, ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರು, ಬಡವರು, ಮಹಿಳೆಯರ ಬ್ಯಾಂಕ್ ಖಾತೆಗಳನ್ನು ತುಂಬಿಸುತ್ತಿದ್ದರೆ, ಕೇಂದ್ರದ ಬಿಜೆಪಿ ಸರ್ಕಾರ ಖಾಲಿ ಮಾಡುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹರಿಹಾಯ್ದರು.ತಾಲೂಕಿನ ಶಿರಗೋಡ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನರೇಂದ್ರ ಮೋದಿ ಅವರು ಹೇಳಿದಂತೆ ೧೦ ವರ್ಷಗಳು ಕಳೆದರೂ ಬಡವರ ಬ್ಯಾಂಕ್ ಖಾತೆಗಳಿಗೆ ₹೧೫ ಲಕ್ಷ ಬರಲೇ ಇಲ್ಲ, ಅಚ್ಛೆ ದಿನ ನೋಡಲೇ ಇಲ್ಲ. ಮೋದಿ ಯಾವ ಮೋಡಿಯನ್ನೂ ಮಾಡಲೇ ಇಲ್ಲ. ಬಡವರ ವಿರೋಧಿ, ಜನವಿರೋಧಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿ ಮುಂದುವರೆಯಬೇಕಾ ಎಂದು ಪ್ರಶ್ನಿಸಿದರು.
ಕಳೆದ ೧೦ ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಇಳಿಸಿ ಜನಸಾಮಾನ್ಯರ ನೆರವಿಗೆ ಧಾವಿಸಲಿಲ್ಲ, ಬೆಳೆಗಳಿಗೆ ಉತ್ತಮ ಬೆಲೆ ನೀಡುವ ಮೂಲಕ ರೈತ ಸಮೂಹದ ಕಣ್ಣೀರು ಒರೆಸಲಿಲ್ಲ. ಬದಲಿಗೆ ನ್ಯಾಯ ಕೇಳಿ ಪ್ರತಿಭಟನೆ ನಡೆಸಿದ ರೈತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸಿದೆ. ವಿರೋಧ ಪಕ್ಷದ ನಾಯಕರಿಗೆ ಕಿರುಕುಳ ನೀಡುತ್ತಿದೆ. ಭ್ರಷ್ಟರನ್ನು ರಕ್ಷಿಸಿ ಪಕ್ಷಕ್ಕೆ ಸೇರಿಸಿಕೊಳ್ಳಲು ರತ್ನಗಂಬಳಿ ಹಾಸುತ್ತಿದೆ. ಈ ಬಾರಿ ಬಿಜೆಪಿ ಮೋಡಿ ಮಾಡುವುದಿಲ್ಲ, ಯಾವ ನಾಟಕವೂ ನಡೆಯುವುದಿಲ್ಲ ಎಂದು ಹೇಳಿದ ಅವರು ಒಳ್ಳೆಯ ಕುಟುಂಬದ ಹಿನ್ನೆಲೆ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಈ ಬಾರಿ ಕಾಂಗ್ರೆಸ್ ಸ್ಪರ್ಧೆಗೆ ಅವಕಾಶ ಕಲ್ಪಿಸಿದೆ. ನಿಮ್ಮೆಲ್ಲರ ಧ್ವನಿಯಾಗಲು ಅವರನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಕೆಪಿಸಿಸಿ ಸದಸ್ಯರಾದ ಖ್ವಾಜಾಮೊಹಿದ್ದೀನ್ ಜಮಾದಾರ, ಟಾಕನಗೌಡ ಪಾಟೀಲ, ಮುಖಂಡರಾದ ಸಂದೀಪ ಪಾಟೀಲ, ಗೌಸುಸಾಬ ಸುಲ್ತಾನಪೂರ, ಇಕ್ಬಾಲ್‌ಸಾಬ ಮುಲ್ಲಾ, ಗುಲಾಬಭಾಷಾ ಅಕ್ಕಿಆಲೂರು, ಮಾರ್ಕಂಡೆಪ್ಪ ಮಣ್ಣಮ್ಮನವರ, ಮಂಜನಗೌಡ ಪಾಟೀಲ, ಲಕ್ಷö್ಮಣ ಉಪ್ಪುಣಸಿ, ಹನುಮಜ್ಜ ಮರಡಿಯವರ, ಬಷೀರಅಹ್ಮದ್ ನಾಲಬಂದ, ಕುಮಾರ ಲಮಾಣಿ, ಜಯರಾಮ ಲಮಾಣಿ, ರಾಮಣ್ಣ ಲಮಾಣಿ, ಪ್ರಭು ಬಿದರಕೊಪ್ಪ, ಸಂದೀಪ ತಳವಾರ, ಪರಸಪ್ಪ ಮಡಿವಾಳರ ಈ ಸಂದರ್ಭದಲ್ಲಿದ್ದರು.