ಸಾರಾಂಶ
ಕಾಂಗ್ರೆಸ್, ಸರ್ಕಾರದ ದಬ್ಬಾಳಿಕೆಗೆ ಬಿಜೆಪಿ ಶಾಸಕರು ಹೆದರುವುದಿಲ್ಲ. ಅಲ್ಲದೆ ಹಿಂದು ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ, ಗಡಿಪಾರು, ಕಿರುಕುಳ ನೀಡುವುದನ್ನು ಪೊಲೀಸ್ ಇಲಾಖೆ ಮೂಲಕ ಸರ್ಕಾರ ಮಾಡಿಸುತ್ತಿದೆ. ಈ ಜಿಲ್ಲೆಯಲ್ಲಿ ಬಿಜೆಪಿಯ ಏಳು ಶಾಸಕರಿದ್ದು, ಹಿಂದೆ ಬಿಜೆಪಿ ಆಡಳಿತದ ಅವಧಿಯಲ್ಲಿ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ ಎಂದು ದ.ಕ. ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದಲ್ಲಿ ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಸರ್ಕಾರ ನಿರಂತರ ದಬ್ಬಾಳಿಕೆ ನಡೆಸುತ್ತಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದಾರೆ.ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಸರ್ಕಾರದ ದಬ್ಬಾಳಿಕೆಗೆ ಬಿಜೆಪಿ ಶಾಸಕರು ಹೆದರುವುದಿಲ್ಲ. ಅಲ್ಲದೆ ಹಿಂದು ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ, ಗಡಿಪಾರು, ಕಿರುಕುಳ ನೀಡುವುದನ್ನು ಪೊಲೀಸ್ ಇಲಾಖೆ ಮೂಲಕ ಸರ್ಕಾರ ಮಾಡಿಸುತ್ತಿದೆ. ಈ ಜಿಲ್ಲೆಯಲ್ಲಿ ಬಿಜೆಪಿಯ ಏಳು ಶಾಸಕರಿದ್ದು, ಹಿಂದೆ ಬಿಜೆಪಿ ಆಡಳಿತದ ಅವಧಿಯಲ್ಲಿ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ ಎಂದರು.
ಶಾಲಾ ಸಮವಸ್ತ್ರ ವಿಚಾರದಲ್ಲಿ ಪೋಷಕರ ಪರವಾಗಿ ಮಾತನಾಡಿದ ಕಾರಣಕ್ಕೆ ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ ವಿರುದ್ಧ ಕೇಸು ದಾಖಲಿಸಲಾಯಿತು. ಈಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೂ ವಿನಾ ಕಾರಣ ಕೇಸು ದಾಖಲಿಸಲಾಗಿದೆ. ಕಾನೂನು ಪ್ರಕಾರ ಹರೀಶ್ ಪೂಂಜಾಗೆ ನೋಟಿಸ್ ನೀಡಿ ತನಿಖೆ ಬರುವಂತೆ ಕರೆಯಬೇಕಿತ್ತು. ಅದು ಬಿಟ್ಟು ಅವರ ಮನೆಗೆ ಬಂಧಿಸಲು ಆಗಮಿಸಿದ್ದಲ್ಲದೆ, ಹೊರಗೆ ಅಪಾರ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸುವ ಮೂಲಕ ಅವರೊಬ್ಬ ಜನಪ್ರತಿನಿಧಿ ಎಂಬುದನ್ನು ಮರೆತಂತೆ ವರ್ತಿಸಲಾಗಿದೆ ಎಂದರು.ಶಾಸಕ ಹರೀಶ್ ಪೂಂಜಾ ಅವರಿಗೆ ಪಕ್ಷದ ಪೂರ್ಣ ಬೆಂಬಲ ಇದೆ. ಅವರ ವಿರುದ್ಧ ಈಗಾಗಲೇ ಕೇಸು ನ್ಯಾಯಾಲಯದಲ್ಲಿ ಇರುವುದರಿಂದ ಅವರ ವರ್ತನೆ ಕುರಿತು ಪ್ರತಿಕ್ರಿಯಿಸುವುದು ಸರಿಯಲ್ಲ. ಕಾನೂನು ಪ್ರಕಾರವೇ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.
ಮುಖಂಡರಾದ ಪೂಜಾ ಪೈ, ನಿತಿನ್ ಕುಮಾರ್, ಸಂಜಯ ಪ್ರಭು, ವಿಕಾಸ್ ಪಿ., ಸತೀಶ್ ಅರುವಾರ್, ಪ್ರಶಾಂತ್ ಇದ್ದರು.