ಸಾರಾಂಶ
ಆಪ್ ಯೋಜನೆಗಳ ಕಾಂಗ್ರೆಸ್‌ನಿಂದ ನಕಲು: ಜಿಲ್ಲಾಧ್ಯಕ್ಷ ಶಿವಕುಮಾರ್ ಟೀಕೆ
ಕನ್ನಡ ಪ್ರಭ ವಾರ್ತೆ ಹೊನ್ನಾಳಿಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ (ಆಪ್) ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದೆ ಎಂದು ಆಪ್ ಜಿಲ್ಲಾಧ್ಯಕ್ಷ ಶಿವಕುಮಾರ್ ಹೇಳಿದರು.
ಭಾನುವಾರ ಪಟ್ಟಣದಲ್ಲಿ ತಾಲೂಕು ಆಪ್ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿ, ದಿಲ್ಲಿಯಲ್ಲಿ ಎರಡು ಬಾರಿ ಅಧಿಕಾರಕ್ಕೆ ಬಂದಿರುವ ಆಪ್ ಇದೇ ಮೊದಲ ಬಾರಿಗೆ ಪಂಜಾಬ್‍ನಲ್ಲಿ ಅಧಿಕಾರಕ್ಕೆ ಬಂದಿದೆ. ದೆಹಲಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಿ ಅಭಿವೃದ್ಧಿ ಕಾರ್ಯ ಮಾಡಿದ್ದರಿಂದ ಪಂಜಾಬ್‍ನಲ್ಲೂ ಜನತೆ ನಮಗೆ ಅಧಿಕಾರ ನೀಡಿದ್ದಾರೆ ಎಂದರು.ಪಕ್ಷದ ಉಚಿತ ಯೋಜನೆಗಳ ನಕಲು ಮಾಡಿರುವ ಕಾಂಗ್ರೆಸ್ ಸರ್ಕಾರ ಅವುಗಳ ಹೇಗೆ ಅನುಷ್ಠಾನಕ್ಕೆ ತರಬೇಕು ಎಂದು ಗೊತ್ತಿಲ್ಲದೆ ರಾಜ್ಯದ ಜನತೆಯ ವಂಚಿಸುತ್ತಿದೆ. ಉಚಿತ ಯೋಜನೆಗಳ ಭರವಸೆ ನೀಡಿ ಮತ ಪಡೆದ ಕಾಂಗ್ರೆಸ್ ಈಗ ಯೋಜನೆ ಅರ್ಹ ಫಲಾನುಭವಿಗಳಿಗೆ ವಿತರಿಸುವಲ್ಲಿ ವಿಫಲವಾಗಿದೆ ಎಂದು ಆಪಾದಿಸಿದರು.
ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳಿಂದ ಒಬ್ಬರಿಗೆ ಒಳ್ಳೆಯದಾದರೆ ನೂರು ಜನಕ್ಕೆ ತೊಂದರೆಯಾಗುತ್ತಿದೆ. ತೀವ್ರ ಬರಗಾಲದಿಂದ ರೈತರು ಆತಂಕದಲ್ಲಿದ್ದು ರೈತರ ಸಂಪೂರ್ಣ ಸಾಲಮನ್ನಾ ಮಾಡದೆ ಚೆಲ್ಲಾಟವಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾನ ವೇಳೆ 500 ಹಾಗೂ 1000 ರು.ಗೆ ಮತ ಮಾರುಕೊಳ್ಳದೆ ಅಭಿವೃದ್ಧಿ ಕೆಲಸ ಮಾಡುವ ಆಪ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ವಿನಂತಿಸಿದರು. ಪ್ರತಿ ತಾಲೂಕಿನಲ್ಲಿಯೂ ಕಾರ್ಯಕರ್ತರ ಸಭೆ ಕರೆದು ಪಕ್ಷ ಸಂಘಟನೆ ಬಗ್ಗೆ ಚರ್ಚಿಸುತ್ತಿದ್ದೇವೆ. ಸಂಘಟನೆ ಮಾಡುವ ಕಾರ್ಯಕರ್ತರಿಗೆ ಈ ಬಾರಿ ಹೆಚ್ಚಿನ ಜವಾಬ್ದಾರಿ ನೀಡಿದ್ದೇವೆ ಎಂದರು.
ತಾಲೂಕು ಆಪ್ ಅಧ್ಯಕ್ಷ ಲಕ್ಷ್ಮೀಕಾಂತ್ ಮಾತನಾಡಿ, ತಾಲೂಕಿನಾದ್ಯಂತ ಪಕ್ಷವನ್ನು ಸಂಘಟಿಸಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಹೆಚ್ಚಿನ ಮತಗಳು ಲಭಿಸುವಂತೆ ಶ್ರಮಿಸಲಾಗುವುದು ಎಂದರು.ಪದಾಧಿಕಾರಿಗಳು :
ತಾಲೂಕು ಎಎಪಿ ಅಧ್ಯಕ್ಷರಾಗಿ ಲಕ್ಷ್ಮೀಕಾಂತ್, ಉಪಾಧ್ಯಕ್ಷರಾಗಿ ಬಸುವರಾಜಪ್ಪ, ಪ್ರಧಾನಕಾರ್ಯದರ್ಶಿಯಾಗಿ ನರಸಿಂಹಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ್ ನೆಲಹೊನ್ನೆ, ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಜಾವಿದ್‍ಖಾನ್, ಎಸ್ಸಿ ಮತ್ತು ಎಸ್ಟಿ ಘಟಕದ ಅಧ್ಯಕ್ಷರಾಗಿ ಹಳದಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆದಿಲ್‍ಖಾನ್, ಜಿಲ್ಲಾ ಕಾರ್ಯದರ್ಶಿ ರವಿಂದ್ರ ಕೆ., ಹರಿಹರ ಘಟಕದ ತಾಲೂಕು ಅಧ್ಯಕ್ಷ ಬಸವರಾಜ್ ಹಾಗೂ ಇತರರಿದ್ದರು.