ಸಾರಾಂಶ
ಮೋದಿಜಿ ಸಾಧನೆ, ರಾಜ್ಯ ಸರ್ಕಾರದ ವೈಫಲ್ಯದ ಪರಿಣಾಮ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೊಸ ದಾಖಲೆ ಸೃಷ್ಟಿ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಹಾವೇರಿ
ದೇಶಾದ್ಯಂತ ನರೇಂದ್ರ ಮೋದಿಯವರ ಪರ ಅಲೆ ಇದ್ದು, ನರೇಂದ್ರ ಮೋದೀಜಿಯವರ ಗ್ಯಾರಂಟಿ ಮುಂದೆ ಕಾಂಗ್ರೆಸ್ಸಿನ ತಾತ್ಕಾಲಿಕ ಗ್ಯಾರಂಟಿ ಬಗ್ಗೆ ಜನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ನಗರದಲ್ಲಿ ಬುಧವಾರ ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪರ ಪ್ರಚಾರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯಾದ್ಯಂತ ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ಪ್ರವಾಸ ಮಾಡುತ್ತಿದ್ದೇನೆ. ಎಲ್ಲ ಕಡೆ ನರೇಂದ್ರ ಮೋದಿಯವರ ಪರ ಅಲೆ ಇದೆ. ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವ ಹಂಬಲ ಜನರಲ್ಲಿ ಕಂಡು ಬರುತ್ತಿದ್ದು, ನನಗಂತೂ ವಿಶ್ವಾಸ ಇದೆ. ಮೋದಿಜಿ ಸಾಧನೆ, ರಾಜ್ಯ ಸರ್ಕಾರದ ವೈಫಲ್ಯದ ಪರಿಣಾಮ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೊಸ ದಾಖಲೆ ಸೃಷ್ಟಿ ಮಾಡುತ್ತೇವೆ. ನನಗಿಂತ ನಮ್ಮ ಕಾರ್ಯಕರ್ತರು ವಿಶ್ವಾಸದಲ್ಲಿದ್ದಾರೆ ಎಂದರು. ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ವಿಚಾರ, ನಾನು ಭವಿಷ್ಯ ನುಡಿಯಲು ಇಚ್ಛೆ ಪಡುವುದಿಲ್ಲ. ಲೋಕಸಭಾ ಚುನಾವಣೆ ಆದ ಬಳಿಕ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರೋದನ್ನ ನೋಡಿಕೊಂಡು ಕೂರ್ತಾರೆ ಅಂತ ನನಗಂತೂ ವಿಶ್ವಾಸ ಇಲ್ಲ ಎಂದು ಕುಟುಕಿದರು.ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ವಿಚಾರ, ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಅವರ ಮನವೊಲಿಕೆ ಬಗ್ಗೆ ನಾನೇ ಸ್ವತಃ ಅವರ ಬಳಿ ಮಾತಾಡಿದ್ದೇನೆ. ಯಡಿಯೂರಪ್ಪನವರೂ ದಿಂಗಾಲೇಶ್ವರ ಶ್ರೀಗಳ ಬಳಿ ಮಾತನಾಡಿದ್ದಾರೆ. ಇನ್ನೂ ಸಮಯ ಇದೆ ಮಾತಾಡುತ್ತೇನೆ ಎಂದರು.
ಎಚ್.ಡಿ.ಕೆ. ತೋಟದ ಮನೆಯಲ್ಲಿ ಔತಣಕೂಟ ರದ್ದಾದ ವಿಚಾರ, ಡಿಕೆಶಿ ಬಹಳ ಉತ್ಸಾಹದಲ್ಲಿದಾರೆ, ಆ ಉತ್ಸಾಹ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಕರಗುತ್ತೆ. ಇವರು ಗ್ಯಾರಂಟಿ ಒಂದು ಕೈಲಿ ಕೊಟ್ಟು ಇನ್ನೊಂದು ಕೈಲಿ ಕಿತ್ಕೊತಿದ್ದಾರೆ. ಇದನ್ನ ನಾವು ಜನರ ಮುಂದೆ ಇಡುತ್ತೇವೆ ಎಂದರು.