ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರುಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳು ಶಾಶ್ವತ ಅಲ್ಲ. ಲೋಕಸಭಾ ಚುನಾವಣೆ ನಂತರ ಇದರ ನಿಜ ಬಣ್ಣ ಬಯಲಾಗುತ್ತದೆ ಎಂದು ಎಸ್.ಸಿ.ಮೋರ್ಚಾ ಮುಖಂಡರು ಬುಧವಾರ ಲೇವಡಿ ಮಾಡಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಎಸ್ಸಿ ಮೋರ್ಚಾ ಆಯೋಜಿಸಿದ್ದ ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಬಲವರ್ಧನೆಗಾಗಿ ಭೀಮ ಸಮಾವೇಶ ಉದ್ಘಾಟಿಸಿ ಮುಖಂಡರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿದರು.ಕಳೆದ ಚುನಾವಣೆಯಲ್ಲಿ ಜನರನ್ನು ಯಾಮಾರಿಸಿ ಮತ ಪಡೆಯಲು ಕಾಂಗ್ರೆಸ್ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದು. ಅದನ್ನು ಪರಿಪೂರ್ಣವಾಗಿ ಜಾರಿಗೆ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.
ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಮುಂದುವರಿಸುವ ಬಗ್ಗೆ ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎನ್.ಮಹೇಶ್ ಹೇಳಿದರು.ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಆಶಯದಂತೆ ಬಿಜೆಪಿ ದಲಿತ ಸಮುದಾಯದ ಅಭಿವೃದ್ಧಿ ಚಿಂತನೆಯನ್ನು ಸಾಕಾರ ಗೊಳಿಸಲು ಬದ್ಧವಾಗಿದೆ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ನೆಹರು ಮತ್ತು ರಾಜೀವ್ ಗಾಂಧಿ ಸಮಾಧಿಗೆ ದೆಹಲಿಯಲ್ಲಿ ಜಾಗ ನೀಡಿದ ಕಾಂಗ್ರೆಸ್ ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಸಮಾಧಿಗೆ ಜಾಗ ನೀಡಲಿಲ್ಲ. ಇದು ಕಾಂಗ್ರೆಸ್ ಸಂಸ್ಕೃತಿ ಎಂದು ಆರೋಪಿಸಿದರು.
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕಳೆದ 10 ವರ್ಷಗಳ ಅವಧಿಯಲ್ಲಿ ದಲಿತ ಸಮುದಾಯ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅನೇಕ ಯೋಜನೆ ಅನುಷ್ಠಾನ ಮಾಡಿದ್ದಾರೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಮಾತನಾಡಿ, ಲೋಕಸಭಾ ಚುನಾವಣೆ ಕೆಲ ತಿಂಗಳು ಮಾತ್ರ ಬಾಕಿ ಇದೆ. ದೇಶದ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು. ಇದಕ್ಕಾಗಿ ರಾಜ್ಯದ ಮತ್ತು ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲು ಬಲಗೈ ಸಮುದಾಯ ದ ಕೊಡುಗೆ ಅಗತ್ಯವಾಗಿದೆ ಎಂದರು.
ಸಮಾವೇಶದಲ್ಲಿ ರಾಜ್ಯ ಎಸ್ಸಿ ಮೋರ್ಚಾದ ಕಾರ್ಯದರ್ಶಿ ಹನುಮಂತು ಕೋಲಾರ್, ಮಾಜಿ ಶಾಸಕ ಬಾಲರಾಜು, ಜಿಲ್ಲಾ ಎಸ್ ಸಿ ಮೋರ್ಚಾ ನಿತ್ಯಾನಂದ, ಮಾಜಿ ಅಧ್ಯಕ್ಷ ಕೆಂಪಬೋರಯ್ಯ, ಉಪಾಧ್ಯಕ್ಷ ಮಧು ಗಂಗಾಧರ್, ಮಂಡಲ ಉಪಾಧ್ಯಕ್ಷ ಶಶಿಕುಮಾರ್, ರಾಜ್ಯ ಕಾರ್ಯದರ್ಶಿ ಎಂ.ಎಸ್. ಪರಮಾನಂದ, ಮದ್ದೂರು ಕ್ಷೇತ್ರದ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ಅಶೋಕ್ ಜಯರಾಮ್. ಬಿಜೆಪಿ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷ ಲಲಿತಮ್ಮ, ಮಂಡಲ ಅಧ್ಯಕ್ಷ ಶಿವ ದಾಸ್ ಸತೀಶ್, ನಗರ ಘಟಕದ ಅಧ್ಯಕ್ಷ ಮಧುಕುಮಾರ್, ಎಂ.ಸಿ.ಸಿದ್ದು, ರುಕ್ಮಿಣಿ, ರಂಜಿತಾ ಇತರರು ಭಾಗವಹಿಸಿದ್ದರು.