ಕಾಂಗ್ರೆಸ್‌ ಗ್ಯಾರಂಟಿಗಳು ಜಗತ್ತಿಗೇ ಮಾದರಿ: ಈಶ್ವರ ಖಂಡ್ರೆ

| Published : May 16 2025, 01:52 AM IST

ಸಾರಾಂಶ

ಕಾಂಗ್ರೆಸ್ ಸರ್ಕಾರದ ಐದೂ ಗ್ಯಾರಂಟಿ ಯೋಜನೆ ಪರಿಣಾಮ ಅಂಕಿ ಅಂಶಗಳ ಪ್ರಕಾರವೇ ಸುಮಾರು 1 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಷ್ಟ್ರಕ್ಕಷ್ಟೇ ಅಲ್ಲ, ಜಗತ್ತಿಗೇ ಮಾದರಿಯಾಗಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.

- ಕಾಂಗ್ರೆಸ್ ಉತ್ತರ- ದಕ್ಷಿಣ ಕ್ಷೇತ್ರಗಳ ಕಾರ್ಯಕರ್ತರ ಸಭೆ । 20ರಂದು ಹೊಸಪೇಟೆಯಲ್ಲಿ ರಾಜ್ಯ ಸರ್ಕಾರದ 2 ವರ್ಷದ ಸಾಧನಾ ಸಮಾವೇಶ

- - - ಕನ್ನಡಪ್ರಭ ವಾರ್ತೆ ದಾವಣಗೆರೆ ಕಾಂಗ್ರೆಸ್ ಸರ್ಕಾರದ ಐದೂ ಗ್ಯಾರಂಟಿ ಯೋಜನೆ ಪರಿಣಾಮ ಅಂಕಿ ಅಂಶಗಳ ಪ್ರಕಾರವೇ ಸುಮಾರು 1 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಷ್ಟ್ರಕ್ಕಷ್ಟೇ ಅಲ್ಲ, ಜಗತ್ತಿಗೇ ಮಾದರಿಯಾಗಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಗುರುವಾರ ಉತ್ತರ- ದಕ್ಷಿಣ ಕ್ಷೇತ್ರಗಳ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳನ್ನು ನಾವು ಜಾರಿ ಮಾಡಿದಾಗ ಕರ್ನಾಟಕ ದಿವಾಳಿ ಆಗುತ್ತದೆಂದು ಪ್ರಧಾನಿಯೇ ಹೇಳಿದ್ದರು. ಪ್ರಧಾನಿ ಹೇಳಿದಂತೆ ದಿವಾಳಿ ಆಯಿತಾ ಎಂದು ಪ್ರಶ್ನಿಸಿದರು.

ಶಕ್ತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಮುಂತಾದ ಐದೂ ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿ ವರ್ಷ ₹52 ಸಾವಿರ ಕೋಟಿ ಮೀಸಲಿಡುತ್ತಿದ್ದೇವೆ. ಯಥಾವತ್ ಅವುಗಳನ್ನು ನಮ್ಮ ಸರ್ಕಾರ ಜಾರಿಗೂ ತರುತ್ತಿದೆ. ಗೃಹಲಕ್ಷ್ಮಿಯಡಿ ಪ್ರತಿ ತಿಂಗಳು ಮಹಿಳೆಯರಿಗೆ ₹2 ಸಾವಿರ ನೀಡಲಾಗುತ್ತಿದೆ. ಮಕ್ಕಳ ಶಿಕ್ಷಣ, ಇತರೆಗೆ ಫಲಾನುಭವಿಗಳು ಹಣ ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ, ನಮ್ಮ ಯೋಜನೆಗಳಿಂದ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುತ್ತಿದೆ ಎಂದರು.

ಗ್ಯಾರಂಟಿಗಳ ಜೊತೆಗೆ ಇತರೆ ಅಭಿವೃದ್ಧಿ ಕಾರ್ಯವನ್ನೂ ಕೈಗೊಳ್ಳಲಾಗುತ್ತಿದೆ. ಪರಿಶಿಷ್ಟರು, ಹಿಂದುಳಿದವರ ಅಭಿವೃದ್ಧಿಗೆ ಜನಪರ, ಜೀವಪರ ಯೋಜನೆ ಜಾರಿ ಮೂಲಕ ರಾಜ್ಯವನ್ನು ಪ್ರಗತಿ ಪಥದತ್ತ ಕೊಂಡೊಯ್ಯುತ್ತಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾಗುತ್ತಿರುವ ಹಿನ್ನೆಲೆ ಮೇ 20ರಂದು ವಿಜಯ ನಗರ (ಹೊಸಪೇಟೆ)ದಲ್ಲಿ ಸಾಧನಾ ಸಮಾವೇಶ‍ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ, ಸಚಿವ ಸಂಪುಟದ ಎಲ್ಲ ಸದಸ್ಯರು, ನಾಯಕರು, ಶಾಸಕರು ಭಾಗವಹಿಸುವರು. ಸುಮಾರು 3 ಲಕ್ಷಕ್ಕೂ ಅಧಿಕ ಜನರು ವಿಜಯನಗರ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ದಾವಣಗೆರ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಬೇಕು ಎಂದು ತಿಳಿಸಿದರು.

ಸಮಾವೇಶದಲ್ಲಿ 1 ಲಕ್ಷ ಡಿಜಿಟಲ್ ಹಕ್ಕುಪತ್ರ ನೀಡಲಿದ್ದು, 2013-18ನೇ ಸಾಲಿನ ಗ್ರಾಮಗಳ ಹೊರ ಭಾಗದಲ್ಲಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು, 50, 100, 200 ಜನ ಇರುವಂತಹ ಪ್ರದೇಶವನ್ನು ಕಂದಾಯ ಗ್ರಾಮವಾಗಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೂ ವಿದ್ಯುತ್, ನೀರು ಸೌಲಭ್ಯ ನೀಡಲಾಗುತ್ತಿರಲಿಲ್ಲ. ಒಟ್ಟಾರೆ, ಸರ್ಕಾರದ ಯಾವುದೇ ಸೌಲಭ್ಯ ಪಡೆಯಲಾಗದಿರುವುದನ್ನು ಗಮನಿಸಿ, ಡಿಜಿಟಲ್ ಹಕ್ಕುಪತ್ರ ನೀಡುವ ಕಾರ್ಯವನ್ನು ದೇಶದಲ್ಲೇ ಮೊದಲ ಬಾರಿಗೆ ನಮ್ಮ ಸರ್ಕಾರ ಕೈಗೊಂಡಿದೆ ಎಂದು ಸಚಿವರು ಹೇಳಿದರು.

ಸಮಾವೇಶ ಸರ್ಕಾರಿ ಕಾರ್ಯಕ್ರಮವಾಗಿದೆ. ಜಿಲ್ಲಾಡಳಿತ, ಎಲ್ಲ ಇಲಾಖೆಗಳು ಸಮಾವೇಶದ ಸಿದ್ಧತೆ ಮಾಡಲಿವೆ. ಡಿಜಿಟಲ್ ಹಕ್ಕುಪತ್ರದ ಜೊತೆಗೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿ, ಇ-ಖಾತೆ ಸಹ ನೀಡಲಾಗುತ್ತದೆ. ಮುಂದೆ ಯಾರೂ ಅಂತಹವರನ್ನು ಒಕ್ಕಲೆಬ್ಬಿಸದಂತೆ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಹೊಸಪೇಟೆಯಲ್ಲಿ ಮೇ 20ರಂದು ಸಾಧನಾ ಸಮಾವೇಶಕ್ಕೆ ದಾವಣಗೆರೆ ಜಿಲ್ಲೆಯಿಂದ ಸುಮಾರು 5-10 ಸಾವಿರ ಜನರು ಪಾಲ್ಗೊಳ್ಳುತ್ತೇವೆ. ಈ ಮೂಲಕ ಸರ್ಕಾರಕ್ಕೆ ಶಕ್ತಿ ತುಂಬುತ್ತೇವೆ. ಸಮಾವೇಶದ ಹಿನ್ನೆಲೆ ಜಗಳೂರಿಗೆ ಶ್ರೀನಿವಾಸ, ಹರಿಹರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್, ಮಾಯಕೊಂಡಕ್ಕೆ ಶಿವಲಿಂಗೇಗೌಡ, ಹೊನ್ನಾಳಿ- ನ್ಯಾಮತಿಗೆ ಡಾ.ಸುಧಾಕರ್ ಉಸ್ತುವಾರಿಗಳಾಗಿದ್ದಾರೆ ಎಂದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಮಹಿಳಾ ಜಿಲ್ಲಾಧ್ಯಕ್ಷೆ, ಮಾಜಿ ಮೇಯರ್ ಅನಿತಾ ಬಾಯಿ ಮಾಲತೇಶ ಜಾಧವ್‌, ಎಸ್.ಮಲ್ಲಿಕಾರ್ಜುನ, ಕೆ.ಜಿ.ಶಿವಕುಮಾರ, ಅಯೂಬ್ ಪೈಲ್ವಾನ್, ವರುಣ್ ತಿಪ್ಪೇಸ್ವಾಮಿ ಇತರರು ಇದ್ದರು.

- - -

-15ಕೆಡಿವಿಜಿ7:

ದಾವಣಗೆರೆ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಗುರುವಾರ ಉತ್ತರ- ದಕ್ಷಿಣ ಕ್ಷೇತ್ರಗಳ ಕಾರ್ಯಕರ್ತರ ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು.