ತಮ್ಮ ತುಷ್ಟೀಕರಣದ ವಿರುದ್ಧ ತೀರ್ಪು ನೀಡಿದ್ದಾರೆ ಎಂಬ ಕಾರಣಕ್ಕೆ ನ್ಯಾಯಮೂರ್ತಿಗಳನ್ನು ಶಿಕ್ಷೆಗೆ ಒಳಪಡಿಸುವ ನಿರ್ಣಯ ಸಂವಿಧಾನ ವಿರೋಧಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಹುಬ್ಬಳ್ಳಿ: ತಮಿಳುನಾಡಿನ ತಿರುಪಕುಂದ್ರಂ ಬೆಟ್ಟದಲ್ಲಿರುವ ದೀಪಸ್ತಂಭದಲ್ಲಿ ದೀಪ ಹಚ್ಚುವ ಕುರಿತು ತೀರ್ಪು ನೀಡಿರುವ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಇಂಡಿ ಒಕ್ಕೂಟ ವಾಗ್ದಂಡನೆ ಮತ್ತು ಪದಚ್ಯುತಿಗೆ ನಿರ್ಣಯ ಕೈಗೊಂಡಿದೆ. ಇದು ಬ್ರಿಟಿಷರ ಮಾದರಿಯಲ್ಲಿ ಕೈಗೊಂಡ ದಮನಕಾರಿ ಪ್ರವೃತ್ತಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭ್ರಷ್ಟಾಚಾರ ಆರೋಪ, ಹುದ್ದೆಯ ದುರುಪಯೋಗ ಮಾಡಿಕೊಂಡರೆ ಮಾತ್ರ ನ್ಯಾಯಮೂರ್ತಿಗಳನ್ನು ವಾಗ್ದಂಡನೆ ಅಥವಾ ಪದಚ್ಯುತಿಗೊಳಿಸಬಹುದು. ಆದರೆ, ತಮ್ಮ ತುಷ್ಟೀಕರಣದ ವಿರುದ್ಧ ತೀರ್ಪು ನೀಡಿದ್ದಾರೆ ಎಂಬ ಕಾರಣಕ್ಕೆ ನ್ಯಾಯಮೂರ್ತಿಗಳನ್ನು ಶಿಕ್ಷೆಗೆ ಒಳಪಡಿಸುವ ನಿರ್ಣಯ ಸಂವಿಧಾನ ವಿರೋಧಿಯಾಗಿದೆ. ಇದು ದೇಶದ ಇತಿಹಾಸದಲ್ಲಿಯೇ ಮೊದಲನೆಯದಾಗಿದ್ದು, ಕಾಂಗ್ರೆಸ್‌ನ ಈ ನಡೆ ಖಂಡನೀಯ ಎಂದರು.ಕೈಯಲ್ಲಿ ಸಂವಿಧಾನ ಇಟ್ಟುಕೊಂಡು ಓಡಾಡುವವರು, ಅದರ ಮೂಲ ಉದ್ದೇಶವನ್ನೇ ಗಾಳಿಗೆ ತೂರುತ್ತಿದ್ದಾರೆ. ಈಗಾಗಲೇ ಜನರು ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿದ್ದಾರೆ. ಹೀಗಿದ್ದಾಗಲೂ ಅದು ತನ್ನ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳದಿರುವುದು ದುರ್ದೈವದ ಸಂಗತಿ. ತಾವು ಹೇಳಿದಂತೆ ಕೇಳುವ, ತುಷ್ಟೀಕರಣದ ಪರವಾಗಿ ತೀರ್ಪು ನೀಡುವ ನ್ಯಾಯಮೂರ್ತಿಗಳು ಅವರಿಗೆ ಬೇಕು. ತೀರ್ಪು ವ್ಯತಿರಿಕ್ತ ಎಂದೆನಿಸಿದರೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿ. ಅದನ್ನು ಬಿಟ್ಟು ದೇಶದಲ್ಲಿ ವಿಶ್ವಾಸ ಇಟ್ಟುಕೊಂಡಿರುವ ನ್ಯಾಯಾಂಗ ವ್ಯವಸ್ಥೆಯನ್ನು ಟೀಕಿಸುವುದು ಸರಿಯಲ್ಲ ಎಂದರು.
ಕಪಾಳಮೋಕ್ಷಕಾಂಗ್ರೆಸ್ ರಾಜ್ಯದಲ್ಲಿ ಆಡಳಿತಕ್ಕೆ ಬಂದು ಎರಡು ವರ್ಷ ಕಳೆದಿದ್ದು, ಸುಮಾರು 2.50 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಸರ್ಕಾರ ದಿವಾಳಿ ಎದ್ದಿರುವುದರಿಂದ ಖಜಾನೆ ಖಾಲಿಯಾಗಿದೆ. ಹೀಗಾಗಿ ಒಂದೇ ಒಂದು ಹುದ್ದೆ ಭರ್ತಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳವು ಆರೋಪದ ಪ್ರಕರಣದ ಕುರಿತು ಈಗಾಗಲೇ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ರಾಹುಲ್ ಗಾಂಧಿ ಅವರನ್ನು ಸಂತೃಪ್ತಿ ಪಡಿಸಲು ಕಾಂಗ್ರೆಸ್ ಮಾಡುತ್ತಿರುವ ಸಾಹಸ ಜನತೆಗೆ ಗೊತ್ತಿದೆ. ಉತ್ತಮ ಆಡಳಿತಕ್ಕೆ ಸಮರ್ಥ ವಿರೋಧ ಪಕ್ಷವೂ ಬೇಕಾಗುತ್ತದೆ. ಹೀಗಾಗಿ, ಮೊದಲು ಕಾಂಗ್ರೆಸ್‌ನಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಆಗಬೇಕು ಎಂದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎನ್ನುವ ಶಾಸಕ ರಾಜು ಕಾಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜೋಶಿ, ರಾಜ್ಯ ಇಬ್ಬಾಗವಾಗಬೇಕು ಎನ್ನುವುದು ಬಿಜೆಪಿಯ ನಿಲುವಲ್ಲ. ಆ ಕುರಿತು ನಮ್ಮಲ್ಲಿ ಯಾವ ಯೋಚನೆಯೂ ಇಲ್ಲ. ಆದರೆ, ಅಭಿವೃದ್ಧಿ ದೃಷ್ಟಿಯಲ್ಲಿ ಈ ಭಾಗಕ್ಕೆ ತೀರಾ ಅನ್ಯಾಯವಾಗಿದೆ ಎಂದ ಜೋಶಿ, ಜನೌಷಧಿ ಕೇಂದ್ರಗಳ ರದ್ದುಗೊಳಿಸಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ ಎಂದರು.