ಕಾಂಗ್ರೆಸ್‌ನದು ಯಾವಾಗಲೂ ಹೊಡಿ- ಬಡಿ ಸಂಸ್ಕೃತಿ

| Published : Mar 27 2024, 01:06 AM IST

ಸಾರಾಂಶ

ಹಿಂದೆ ಸಿದ್ದರಾಮಯ್ಯ ಕೂಡ ಇದೇ ರೀತಿ ಏಕವಚನದಲ್ಲಿ ಮಾತನಾಡಿದ್ದರು. ಇದೀಗ ತಂಗಡಗಿ ಮಾತನಾಡುತ್ತಿದ್ದಾರೆ. ಮೋದಿ ಮೋದಿ ಎನ್ನುವವರಿಗೆ ಕಪಾಳಕ್ಕೆ ಹೊಡೆಯಿರಿ ಎಂದರೆ ಏನರ್ಥ.

ಹುಬ್ಬಳ್ಳಿ:

ಕಾಂಗ್ರೆಸ್ಸಿಗರದು ಯಾವಾಗಲೂ ಹೊಡಿ- ಬಡಿ ಸಂಸ್ಕೃತಿಯೇ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ ಶಿವರಾಜ ತಂಗಡಗಿ ಹೀಗೆ ಹೊಡಿ ಬಡಿಯುವ ರೀತಿ ಪ್ರಚೋದನೆ ನೀಡುವುದು ಅವರ ವ್ಯಕ್ತಿತ್ವ ಮತ್ತು ಹುದ್ದೆಗೆ ಘನತೆ, ಗೌರವ ತರುವಂಥದ್ದಲ್ಲ ಎಂದು ಖಂಡಿಸಿದರು.

ಹಿಂದೆ ಸಿದ್ದರಾಮಯ್ಯ ಕೂಡ ಇದೇ ರೀತಿ ಏಕವಚನದಲ್ಲಿ ಮಾತನಾಡಿದ್ದರು. ಇದೀಗ ತಂಗಡಗಿ ಮಾತನಾಡುತ್ತಿದ್ದಾರೆ. ಮೋದಿ ಮೋದಿ ಎನ್ನುವವರಿಗೆ ಕಪಾಳಕ್ಕೆ ಹೊಡೆಯಿರಿ ಎಂದರೆ ಏನರ್ಥ ಎಂದರು. ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಇದು ಸಂಸ್ಕೃತಿಗೆ ಧಕ್ಕೆ ತರುವಂತಹದ್ದು ಎಂದರು.

ಮೋದಿ ಬಗ್ಗೆ ದ್ವೇಷ ಕಾರುವುದೇಕೆ?:

ಕಾಂಗ್ರೆಸ್ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ದ್ವೇಷ ಕಾರುವ ಮನೋಭಾವವಿದೆ. ಇದಕ್ಕೆಲ್ಲ ಜನರೇ ಉತ್ತರ ಕೊಡುತ್ತಾರೆ ಎಂದು ಎಚ್ಚರಿಸಿದರು.

ಪ್ರಧಾನಿ ಮೋದಿ ಅವರನ್ನು ಹಳಿದರೆ ವರ್ಚಸ್ಸು ಕುಗ್ಗುವಂತೆ ಮಾಡಬಹುದು ಎಂದು ಭಾವಿಸಿದ್ದರೆ ಅದು ನಿಮ್ಮ ಭ್ರಮೆ. ನೀವೆಷ್ಟು ಮೋದಿ ಅವರನ್ನು ದ್ವೇಷಿಸುತ್ತೀರಿ ಮತ್ತು ಸೇಡಿನ ಭಾವನೆಯಿಂದ ವರ್ತಿಸುತ್ತಿರೋ? ಅಷ್ಟೇ ಪ್ರೀತಿಯಿಂದ ಜನ ಮೋದಿ ಅವರನ್ನು ಕಾಣುತ್ತಾರೆ ಎಂದರು.

ಪ್ರಧಾನಿ ಮೋದಿ ಅವರನ್ನು ದ್ವೇಷಿಸುತ್ತಲೇ ಇದ್ದೀರಿ. ನಿಮ್ಮ ಕೈಯಲ್ಲಿ ಅದೆಷ್ಟು ಶಕ್ತಿ ಇದೆ? ತೋರಿಸಿಬಿಡಿ ಒಂದ್ಸಾರಿ ನೋಡೋಣ ಎಂದು ಸವಾಲೆಸೆದ ಜೋಶಿ, ಶೇ.70-80ರಷ್ಟು ಯುವಕರು ಮೋದಿ ಮೋದಿ ಎಂದು ಕೂಗುತ್ತಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲೂ ಸ್ವಯಂ ಪ್ರೇರಣೆಯಿಂದ ಮೋದಿ ಮೋದಿ ಎಂದು ಘೋಷಣೆ ಹಾಕುತ್ತಾರೆ. ಕಾಂಗ್ರೆಸ್ಸಿಗರಿಗೆ ದೇಶದ ಜನರೇ ಬುದ್ಧಿ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಬಾಕಿ ಇಲ್ಲ:ಕರ್ನಾಟಕಕ್ಕೆ ಯಾವುದೇ ಜಿಎಸ್ಟಿ ತೆರಿಗೆ ಹಂಚಿಕೆ ಬಾಕಿ ಉಳಿದಿಲ್ಲ. ಸಿಎಂ ಸಿದ್ದರಾಮಯ್ಯ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವುದು. ಒಂದು ರಾಜಕೀಯ ನಡೆಗಾಗಿ ಎಂದು ಕಿಡಿಕಾರಿದ ಅವರು, ಜಿಎಸ್‌ಟಿ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವು ಆಗಿಲ್ಲ, ಬಾಕಿಯೂ ಉಳಿದಿಲ್ಲ ಎಂದು ಸ್ಪಷ್ಟಪಡಿಸಿದರು.

ಬರ ಪರಿಹಾರ ಹಾಗೂ ಅನುದಾನ ಹಂಚಿಕೆಯಲ್ಲಿ ಕೇಂದ್ರದಿಂದ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯ ವ್ಯವಸ್ಥಿತವಾಗಿ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಅಷ್ಟೇ ಎಂದ ಅವರು, ದೆಹಲಿಯಲ್ಲಿ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿದಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದಾಖಲೆ ಸಮೇತ ಉತ್ತರ ಕೊಟ್ಟಿದ್ದಾರೆ ಎಂದರು.ಕರ್ನಾಟಕಕ್ಕೆ ವಿಶೇಷ ಅನುದಾನಕ್ಕಾಗಿ ಹಣಕಾಸು ಆಯೋಗದಿಂದ ಯಾವುದೇ ಶಿಫಾರಸು ಇಲ್ಲ. ಕೇಂದ್ರ ಸರ್ಕಾರದಿಂದ ಹಣಕಾಸು ಆಯೋಗದ ಶಿಫಾರಸು ಉಲ್ಲಂಘನೆಯೂ ಆಗಿಲ್ಲ ಎಂದು ಹೇಳಿದರು.