ನೆಹರು ಕಾಲದಿಂದಲೂ ಕಾಂಗ್ರೆಸ್ ‘ಕುಟುಂಬ’ದ ಹಿಡಿತದಲ್ಲಿದೆ: ಜೆಡಿಎಸ್ ಮುಖಂಡರ ಆಕ್ರೋಶ

| Published : Jul 06 2025, 11:48 PM IST

ನೆಹರು ಕಾಲದಿಂದಲೂ ಕಾಂಗ್ರೆಸ್ ‘ಕುಟುಂಬ’ದ ಹಿಡಿತದಲ್ಲಿದೆ: ಜೆಡಿಎಸ್ ಮುಖಂಡರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ರೈತರ ಹಿತದೃಷ್ಟಿಯಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಜೆಡಿಎಸ್ ಪಕ್ಷ ಕಟ್ಟಿ ಹೋರಾಟ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ನೆಹರು ಕಾಲದಿಂದ ಇಂದಿನವರೆಗೂ ಕುಟುಂಬದ ಹಿಡಿತದಲ್ಲಿದೆ ಎನ್ನುವುದನ್ನು ಮರೆತಂತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಜನತಾ ಪರಿವಾರದಿಂದ ಬೆಳೆದು ನಾಯಕರಾಗಿ ಜೆಡಿಎಸ್‌ಗೆ ದ್ರೋಹ ಮಾಡಿ ಹೋದವರ ಬಲದಿಂದಲೇ ಕಾಂಗ್ರೆಸ್ ಇಂದು ರಾಜ್ಯದಲ್ಲಿ ಅಧಿಕಾರದಲ್ಲಿಯೇ ಹೊರತು ಮೂಲ ಕಾಂಗ್ರೆಸ್ಸಿಗರ ಶಕ್ತಿಯಿಂದಲ್ಲ ಎಂದು ತಾಲೂಕು ಜೆಡಿಎಸ್ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ತಾಲೂಕು ರೈತ ಮೋರ್ಚಾ ಘಟಕದ ಅಧ್ಯಕ್ಷ ಬೂಕನಕೆರೆ ಹುಲ್ಲೇಗೌಡ ನೇತೃತ್ವದಲ್ಲಿ ಸುದ್ದಿಗಾರರೊಂದಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಾಲೂಕಿನ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ತಿರುಗೇಟು ನೀಡಿದರು.

ಹುಲ್ಲೇಗೌಡ ಮಾತನಾಡಿ, ರಾಜ್ಯದ ರೈತರ ಹಿತದೃಷ್ಟಿಯಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಜೆಡಿಎಸ್ ಪಕ್ಷ ಕಟ್ಟಿ ಹೋರಾಟ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ನೆಹರು ಕಾಲದಿಂದ ಇಂದಿನವರೆಗೂ ಕುಟುಂಬದ ಹಿಡಿತದಲ್ಲಿದೆ ಎನ್ನುವುದನ್ನು ಮರೆತಂತಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲೂ ಸಿಎಂ ಸಿದ್ದರಾಮಯ್ಯ ಮತ್ತು ಮಕ್ಕಳು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪುತ್ರ ಸೇರಿದಂತೆ ಎಲ್ಲಾ ಕಾಂಗ್ರಸ್ಸಿಗರ ಕುಟುಂಬ ರಾಜಕಾರಣದಲ್ಲಿದ್ದಾರೆ ಎಂಬ ಅರಿವು ಸಿ.ಡಿ.ಗಂಗಾಧರ್‌ಗೆ ಇಲ್ಲ ಎಂದು ಟೀಕಿಸಿದರು.

ಅಧಿಕಾರಕ್ಕಾಗಿ ದೇವೇಗೌಡರಾಗಲೀ ಅಥವಾ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಾಗಲೀ ಎಂದೂ ಕಾಂಗ್ರೆಸ್ಸಿಗರ ಮನೆ ಬಾಗಿಲಿಗೆ ಹೋಗಿಲ್ಲ. ಸ್ವತಃ ಕಾಂಗ್ರೆಸ್ಸಿಗರೇ ದಂಬಾಲು ಬಿದ್ದು ನಮ್ಮ ನಾಯಕರ ಮನೆ ಬಾಗಿಲಿಗೆ ಬಂದು ಅಧಿಕಾರ ನೀಡಿದ ನಂತರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಕುಮಾರಣ್ಣ ಅಧಿಕಾರದಲ್ಲಿದ್ದಾಗ ಗ್ರಾಮ ವಾಸ್ತ್ಯವ್ಯ, ರೈತರ ಸಾಲಮನ್ನಾ, ಲಾಟರಿ ನಿಷೇಧದಂತಹ ಹಲವು ಕಾರ್ಯಕ್ರಮ ನೀಡಿದರು. ಮಂಡ್ಯಕ್ಕೆ ಮೆಡಿಕಲ್ ಕಾಲೇಜು, ಮೈಷುಗರ್ ಪುನಶ್ಚೇತನಕ್ಕೆ ಹಣ ಕೊಟ್ಟಿದ್ದಾರೆ. ಜಿಲ್ಲೆಗೆ ಜೆಡಿಎಸ್ ಕೊಡುಗೆ ಏನು? ಎನ್ನುವವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಜೆಡಿಎಸ್ ಕಥೆ ಮುಗಿದು ಹೋಗಿದೆ ಎನ್ನುವವರಿಗೆ ಲೋಕಸಭೆ ಚುನಾವಣೆಯಲ್ಲಿ ಕುಮಾರಣ್ಣರಿಗೆ ಮತ ಹಾಕಿರುವುದೇ ಸಾಕ್ಷಿ. ಆದರೆ, ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿಯೇ ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡಿರುನ್ನು ತೋರಿಸಿದೆ ತಿರುಗೇಟು ನೀಡಿದರು.

ಮನ್ಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರ ಕುಟೀಲತೆಯಿಂದ ಶಾಸಕ ಎಚ್.ಟಿ.ಮಂಜು ಅವರಿಗೆ ಸೋಲಾಗಿದೆ. ಇದನ್ನೇ ಸಾಧನೆ ಎನ್ನುತ್ತಿದ್ದಾರೆ. ನಾವು ಕೆ.ಆರ್ ಪೇಟೆ ಜೆಡಿಎಸ್ ಶಾಸಕರಿಂದ ನಾವು ರಾಜೀನಾಮೆ ಕೊಡಿಸುತ್ತೇವೆ. ಗೆಲ್ಲುವ ತಾಕತ್ತಿದ್ದರೆ ಜಿಲ್ಲೆಯ ಇತರ ಕಾಂಗ್ರೆಸ್ ಶಾಸಕರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲಿ ಎಂದು ಮುಖಂಡರು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಎಚ್.ಟಿ.ಲೋಕೇಶ್, ತಾಪಂ ಮಾಜಿ ಅಧ್ಯಕ್ಷ ವಳಗೆರೆಮೆಣಸ ಮಹದೇವೇಗೌಡ, ಮಲ್ಲೇನಹಳ್ಳಿ ಮೋಹನ್, ಟಿಎಪಿಸಿಎಂಎಸ್ ನಿರ್ದೇಶಕ ತೆರ್ನೇನಹಳ್ಳಿ ಬಲದೇವ್, ಪುರಸಭಾ ಸದಸ್ಯ ಎಚ್‌.ಡಿ.ಅಶೋಕ್, ಅಕ್ಕಿಹೆಬ್ಬಾಳು ಹೋಬಳಿ ಅಧ್ಯಕ್ಷ ಬಸವಲಿಂಗಪ್ಪ, ಸಂತೆಬಾಚಹಳ್ಳಿ ರವಿಕುಮಾರ್, ಚಟ್ಟೇನಹಳ್ಳಿ ನಾಗರಾಜು, ಬೋರ್‌ವೆಲ್ ಮಹೇಶ್, ಯುವ ಘಟಕ ಅಧ್ಯಕ್ಷ ಮಹದೇವೇಗೌಡ, ವಿಶ್ವನಾಥ್, ಬಲ್ಲೇನಹಳ್ಳಿ ನಂದೀಶ್, ಅಲೋಕ್‌ಕುಮಾರ್, ಶಾಸಕ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಹಲವರು ಇದ್ದರು.