ಸಾರಾಂಶ
ಸವದತ್ತಿ : ಐದು ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಾರ್ಟಿ ಇಂದು ಗ್ಯಾರಂಟಿಗಳನ್ನು ನೀಡುವಲ್ಲಿ ವಿಫಲವಾಗಿ ರಾಜ್ಯದ ಜನರ ಕನಸಿಗೆ ಮತ್ತು ಅವರ ಭರವಸೆಗಳಿಗೆ ಕೊಳ್ಳಿ ಇಟ್ಟಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಜನಾಂಗಕ್ಕೆ ಮೀಸಲಾಗಿಟ್ಟಿರುವ ಹಣವನ್ನು ಸಹಿತ ಇಂದು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿ ಅವರಿಗೂ ಮೋಸ ಮಾಡಲಾಗುತ್ತಿದೆ. ಯಾವುದೇ ಆರ್ಥಿಕ ಶಕ್ತಿ ಸರ್ಕಾರಕ್ಕೆ ಇಲ್ಲದಾಗಿರುವುದರಿಂದ ಅಭಿವೃದ್ಧಿ ಕುಂಠಿತಗೊಂಡು ಶಾಸಕರು ತಲೆಮರೆಸಿಕೊಂಡು ಹೋಗುವಂತ ಸಂದರ್ಭ ಬಂದೊದಗಿದೆ ಎಂದು ಲೇವಡಿ ಮಾಡಿದರು.
ಸ್ಪಷ್ಟ ಬಹುಮತವಿದ್ದರೂ ಕೂಡಾ ಪಕ್ಷದೊಳಗಿನ ಆಂತರಿಕ ಕಚ್ಚಾಟ, ಮುಖ್ಯಮಂತ್ರಿ ಗಾದಿಗಾಗಿ ನಡೆಯುತ್ತಿರುವ ಅಂತರಯುದ್ಧ, ಗುಂಪುಗಾರಿಕೆ ಕಾರಣದಿಂದ ಇಡೀ ಸರ್ಕಾರದ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ರಾಜ್ಯ ಅರಾಜಕತೆಯತ್ತ ಸಾಗುತ್ತಿದೆಂಬಂತೆ ಭಾಸವಾಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಬೆಲೆ ಏರಿಕೆಯಾಗಿದ್ದು, ಕೇಂದ್ರ ಸರ್ಕಾರದ ಜಲಜೀವನ ಮಷಿನ್ ಯೋಜನೆಯನ್ನು ರಾಜ್ಯದಲ್ಲಿ ಅಳವಡಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ.
ದಿವಾಳಿಯಾಗಿರುವ ರಾಜ್ಯ ಸರ್ಕಾರವನ್ನು ಎಚ್ಚರಿಸಲು ಸದ್ಯದಲ್ಲಿ ಜನಾಂದಲೋನ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದರು. ಬೇರೆ ರಾಜ್ಯಗಳಲ್ಲಿ ಕೇವಲ ₹900 ಗಳಿಗೆ ಸಿಗುವಂತ ಸ್ಮಾಟ್ ಮೀಟರ್‌ಗಳಿಗೆ ಕರ್ನಾಟಕದಲ್ಲಿ ₹8510 ಗಳನ್ನು ನಿಗದಿ ಮಾಡಿ ಸುಲಿಗೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ನೆರವಿನ ಯೋಜನೆಗಳನ್ನು ಬಳಸಿಕೊಳ್ಳುವಲ್ಲಿ ಸರ್ಕಾರ ಸಂಪೂರ್ಣ ವೈಪಲ್ಯವಾಗಿದ್ದು, ಮಾತೃವಂದನ ಮತ್ತು ಇಂದ್ರಧನುಷ್ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಸಾಧ್ಯವಾಗದೇ ರಾಜ್ಯದಲ್ಲಿ 736ಕ್ಕೂ ಹೆಚ್ಚು ಬಾಣಂತಿಯರ ಸಾವು1100 ಕ್ಕೂ ಹೆಚ್ಚು ನವಜಾತ ಶಿಶುಗಳು ಸಾವಿಗೆ ಕಾರಣವಾದ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್‌ನ ಹಿರಿಯ ಸಚಿವರೇ ವಿಧಾನಸಭೆಯಲ್ಲಿ ಸ್ವತಹ ನನ್ನ ಮೇಲೆಯೂ ಕೂಡಾ ಹನಿಟ್ರ‍್ಯಾಪ್ ಮಾಡಲಾಗಿದೆ ಮತ್ತು ೪೮ ನಾಯಕರ ಮೇಲೆ ಹನಿಟ್ರ‍್ಯಾಪ್ ಮಾಡಲಾಗಿದೆಂದು ಗಂಭೀರ ಆರೋಪ ಮಾಡಿದರೂ ಸರ್ಕಾರ ಸ್ವಯಂ ಪ್ರೇರಿತ ಕೇಸು ದಾಖಲಿಸಿಲ್ಲ. ಆರೋಪ ಮಾಡಿದವರು ಅಧಿಕೃತವಾಗಿ ಕೇಸು ದಾಖಲಿಸುತ್ತಿಲ್ಲ ಮತ್ತು ತನಿಖೆ ಮಾಡಿ ಎಂದು ಮುಖ್ಯಮಂತ್ರಿಗಳು ಹೇಳುತ್ತಿಲ್ಲ. ರಾಜ್ಯ ಸರ್ಕಾರದ ಸಚಿವರಿಗೆ ರಕ್ಷಣೆ ಇಲ್ಲವೆಂದರೇ ಸಾಮಾನ್ಯ ಜನರಿಗೆ ರಕ್ಷಣೆ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ವಿಧಾನಸೌಧದಲ್ಲಿ ಈ ಎಲ್ಲ ವಿಷಯವನ್ನು ಚರ್ಚೆ ಮಾಡಲು ಪ್ರತಿಭಟಿಸುತ್ತಿದ್ದ ಶಾಸಕರಿಗೆ ಅವಕಾಶ ನೀಡದೇ ಇರುವುದು ವಿಷಾದನೀಯ.
ಇದರ ವಿರುದ್ಧ ಮಾತನಾಡಲು ಪ್ರಯತ್ನಿಸಿದಾಗ ಬಿಜೆಪಿಯ ೧೮ ಮಂದಿ ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿರುವುದು ಇದು ಅಕ್ಷಮ್ಯ ಅಪರಾಧವಾಗಿದೆ ಎಂದು ದೂರಿದರು.
ಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ವಿರುಪಾಕ್ಷ ಮಾಮನಿ, ರತ್ನಕ್ಕ ಆನಂದ ಮಾಮನಿ, ಡಾ.ನಯನಾ ಭಸ್ಮೆ, ಜಗದೀಶ ಕೌಜಗೇರಿ, ಡಾ.ಎನ್.ಸಿ.ಬೆಂಡಿಗೇರಿ, ಜಗದೀಶ ಶಿಂತ್ರಿ, ಬಿ.ವಿ.ಮಲಗೌಡರ ಉಪಸ್ಥಿತರಿದ್ದರು.
ಕಾಟಾಚಾರಕ್ಕೆ ಒಂದು ದಿನದ ಆರೋಗ್ಯ ಮೇಳ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲದಾಗಿದ್ದು, ಮೇಳ ಮಾಡಿ ನೆಗಡಿ, ಜ್ವರಕ್ಕೆ ಮಾತ್ರೆ ಕೊಟ್ಟರೇ ಅದು ಆರೋಗ್ಯ ಮೇಳವಾಗಲು ಸಾಧ್ಯವಿಲ್ಲ. ಪ್ರತಿಯೊಂದು ಸಾರ್ವಜನಿಕ ಆಸ್ಪತ್ರೆಯ ಸ್ಥಿತಿಗತಿಯನ್ನು ಪರಿಶೀಲಿಸಬೇಕು. ಅವಶ್ಯವಾಗಿರುವ ಆಸ್ಪತ್ರೆಗಳಲ್ಲಿ ವೈದ್ಯರನ್ನು ತಂದು ಜನರ ಆರೋಗ್ಯದ ಕಡೆಗೆ ಗಮನ ಹರಿಸಬೇಕು.
-ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯರು.