ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಒಂದಲ್ಲ ಒಂದು ರೀತಿಯ ದಿನಕ್ಕೊಂದು ಹಗರಣಗಳು ಬೆಳಕಿಗೆ ಬರುತ್ತಿವೆ. ಭ್ರಷ್ಟಾಚಾರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯದ ಕಾಂಗ್ರೆಸ್ ಸರ್ಕಾರ ಉತ್ತಮ, ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಆರೋಪಿಸಿದರು.ಪಟ್ಟಣದ ಸಂಗಮೇಶ ನಗರದಲ್ಲಿ ಮಂಗಳವಾರ ಬಿಜೆಪಿ ತಾಲೂಕು ಮಂಡಲದಿಂದ ನಡೆದ ಬಿಜೆಪಿ ನೂತನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಕೈಗೊಂಡಿರುವ ಸುಮಾರು ₹1500 ಕೋಟಿಗಳ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಂಡಿಲ್ಲ. ಅದನ್ನು ಹಣ ಬಿಡುಗಡೆ ಮಾಡಿಸಲು ಸ್ಥಳೀಯ ಶಾಸಕ ಸಿ.ಎಸ್.ನಾಡಗೌಡ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ತಮ್ಮದೆಯಾದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಕಳೆದ 18 ತಿಂಗಳಲ್ಲಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒಂದು ಕೋಟಿ ಹಣವನ್ನು ಕೂಡಾ ತಂದಿದ್ದರೇ ತಿಳಿಸಿ ಬಹಿರಂಗವಾಗಿ ಚರ್ಚೆಗೆ ನಾನು ಸದಾಸಿದ್ಧನಿದ್ದೇನೆ ಎಂದು ಸವಾಲ ಹಾಕಿದರು.ನಾನು ಅಧಿಕಾರದಲ್ಲಿದ್ದಾಗ ನನ್ನ ಬಗ್ಗೆ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ಜನರ ದಾರಿ ತಪ್ಪಿಸಿ ಈ ಬಾರಿ ಚುನಾವಣೆಯಲ್ಲಿ ಗೆದ್ದು ಬಂದಿದ್ದಿರಿ. ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಎರಡನ್ನು ಸಮಾನವಾಗಿ ಸ್ವೀಕರಿಸಿದ್ದೇನೆ. ಹಾಗಂತ ನಾನು ಸುಮ್ಮನೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ಈಗಾಗಲೇ ಮತಕ್ಷೇತ್ರದ ಜನ ನಿಮ್ಮ ಸರ್ಕಾರದ ಮತ್ತು ನಿಮ್ಮ ದುರಾಡಳಿತವನ್ನು ಪ್ರಶ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು. ನಿಮ್ಮ ಹಿಂಬಾಲಕರು ಕೆಬಿಜೆಎನ್‌ಎಲ್ ಇಲಾಖೆಯಲ್ಲಿ ಕಲೆಕ್ಷನ್ ಏಜೆಂಟರಾಗಿದ್ದಾರೆ. ಜತೆಗೆ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿಗಳಲ್ಲಿ ಬೋಗಸ್ ಬಿಲ್ ಎತ್ತುವ ಕಾರ್ಯ ಮಾಡುತ್ತಿರುವವರು ಯಾರು? ನಮ್ಮ ಅವಧಿಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ನಿರ್ಮಿಸಿದ ಗುತ್ತಿಗೆದಾರರಿಗೆ ಬಿಲ್ ಮಂಜೂರಿ ಮಾಡಬಾರದೆಂದು ಅಧಿಕಾರಿಗಳಿಗೆ ತಾಕಿತು ಮಾಡುತ್ತಾರೆ. ಜತೆಗೆ ವಿವಿಧ ಕಾಮಗಾರಿಗಳನ್ನು ನಿಲ್ಲಿಸುವಂತೆ ನಿಮ್ಮ ಕಾಂಗ್ರೆಸ್ ಪುಡಿಪುಡಾರಿಗಳು ಒತ್ತಾಯ ಮಾಡುತ್ತಾರೆಂಬ ಮಾಹಿತಿ ತಿಳಿದು ಬಂದಿದೆ. ನೀವೆಷ್ಟು ಪುಡಾರಿಗಳಿದ್ದಿರಿ ಎಂಬುವುದು ನನಗೆ ಚೆನ್ನಾಗಿ ಗೊತ್ತಿದೆ. ನಿಮಗಿಂತ ದೊಡ್ಡ ಪುಡಾರಿ ನಾನಿದ್ದೇನೆ. ಆದರೆ, ನಾನ್ಯಾವತ್ತಿಗೂ ಪುಡಾರಿಕೆ ಮಾಡಿಲ್ಲ. ಇನ್ನುಮುಂದೆ ಅದು ಅನಿವಾರ್ಯವಾಗಬಹುದು. ಸದ್ಯ ತಾಲೂಕಿನಲ್ಲಿ ಏಷ್ಟು ಜನ ಕಾಂಗ್ರೆಸ್ ಪುಡಿ ಪುಡಾರಿಗಳಿದ್ದಿರಿ ಮುಂದಿನ ಮೂರುವರೇ ವರ್ಷದಲ್ಲಿ ರಾಜ್ಯದಲ್ಲಿ ನಮ್ಮದೇ ಸರ್ಕಾರ ಬರುತ್ತೆ. ಮತ್ತೆ ನಾನೇ ಗೆದ್ದು ಬರುತ್ತೇನೆ. ಈಗಾಗಲೇ ನಿಮ್ಮ ಲಿಸ್ಟ್ ರೇಡಿ ಮಾಡಿಕೊಂಡಿದ್ದೇನೆ. ಆಗ ಮನೆ, ಮನೆ ಕಿತ್ತಿಸುತ್ತೆ ಎಚ್ಚರದಿಂದಿರಿ ಎಂದು ಗುಡುಗಿದರು.ಈ ವೇಳೆ ತಾಲೂಕು ಮಂಡಲದ ಅಧ್ಯಕ್ಷ ಜಗದೀಶ ಪಂಪಣ್ಣವರ, ಮುಖಂಡರಾದ ರಾಜಶೇಖರ ಮ್ಯಾಗೇರಿ, ಸೋಮನಗೌಡ ಬಿರಾದಾರ, ಪ್ರಭುಕಡಿ, ಮಲಕೇಂದ್ರಾಯಗೌಡ ಪಾಟೀಲ, ಡಾ.ವಿರೇಶ ಪಾಟೀಲ, ಪುರಸಭೆ ಸದಸ್ಯರಾದದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಸಿದ್ಧರಾಜ ಹೊಳಿ, ರೇವಣಸಿದ್ದಪ್ಪ ಮಸೂತಿ, ಸಂಜು ಬಾಗೇವಾಡಿ, ಶ್ರೀಶೈಲ ದೊಡಮನಿ, ಕಮಲಾ ಇಂಗಳೇಶ್ವರ, ನೀಲಮ್ಮ ಸಾಲಿ, ರಾಜು ಬಳ್ಳೋಳ್ಳಿ, ಶಿವೂ ಅತ್ತೂರ, ಪ್ರೀತಿಕಂಬಾರ, ಕಾವೇರಿ ಕಂಬಾರ ಸೇರಿದಂತೆ ಹಲವರು ಇದ್ದರು.ಸಾಮಾಜಿಕ ಸೇವೆ ಸಲ್ಲಿಸುವ ಗುರಿ ಹೊಂದಿದ ಏಕೈಕ ಪಕ್ಷ ಬಿಜೆಪಿ: ನಡಹಳ್ಳಿ
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಉತ್ತಮ ಆಡಳಿತ ಮತ್ತು ಆರ್ಥಿಕ ಸುಭದ್ರತೆ ಕಂಡು ವಿದೇಶಿಗರು ಹಾಡಿಹೊಗಳುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಬಣ್ಣಿಸಿದರು.ಭ್ರಷ್ಟಾಚಾರ ಮುಕ್ತ ಬಲಿಷ್ಠ ರಾಷ್ಟ್ರ ಕಟ್ಟುವಲ್ಲಿ ಪ್ರಧಾನಿ ಬಲಪಡಿಸಬೇಕಾದರೇ ದೇಶದಲ್ಲೆಡೆ ಭಾಜಪ ಸದಸ್ಯರ ಸಂಖ್ಯೆ ಹೆಚ್ಚಿಸುವ ಮೂಲಕ ಭಾರತೀಯ ಸಂವಿಧಾನದಲ್ಲಿ ಅಳವಡಿಸಿರುವ ಎಲ್ಲ ಮೌಲ್ಯಗಳ ಅನುಸಾರ ಉತ್ತಮ ಸಾಮಾಜಿಕ ಸೇವೆ ಸಲ್ಲಿಸುವ ಗುರಿ ಹೊಂದಿದ ಏಕೈಕ ಬಿಜೆಪಿ ಪಕ್ಷವನ್ನಾಗಿ ಮಾಡಲು ಎಲ್ಲ ಕಾರ್ಯಕರ್ತರ ಪ್ರಮುಖ ಪಾತ್ರವಹಿಸುತ್ತದೆ ಎಂದರು.ಕೇವಲ ಚುನಾವಣೆಗಳು ಬಂದಾಗ ಮಾತ್ರ ಕಾಂಗ್ರೆಸ್ ಪಕ್ಷ ಸದಸ್ಯತ್ವ ಪ್ರಾರಂಭಿಸುತ್ತದೆ. ಆದರೆ, ಭಾಜಪಾ ಹಾಗಲ್ಲ ಪ್ರತಿ ವರ್ಷವೂ ಪ್ರತಿ ಗ್ರಾಮ ಬೂತ್‌ಮಟ್ಟದಿಂದಲೂ ಲಕ್ಷಾಂತರ ಜನರನ್ನು ಸದಸ್ಯತ್ವ ಪಡೆದುಕೊಳ್ಳುವ ಮೂಲಕ ಇಡೀ ವಿಶ್ವದಲ್ಲಿಯೇ ಅತೀ ದೊಡ್ಡರಾಜಕೀಯ ಪಕ್ಷ ಮಾತ್ರವಲ್ಲದೇ ಪ್ರಜಾಸತ್ಯಾತ್ಮ ಪಕ್ಷವಾಗಿ ಬೆಳೆದು ನಿಂತಿದೆ. ಈ ನಿಟ್ಟಿನಲ್ಲಿ ಮತಕ್ಷೇತ್ರದ ಎಲ್ಲ ಕಾರ್ಯಕರ್ತರು ಹಾಗೂ ಮುಖಂಡರು ಸದ್ಯ ಕೇಂದ್ರದ ವರಿಷ್ಠರು ಒಟ್ಟು 60 ಸಾವಿರ ಸದಸ್ಯತ್ವ ಮಾಡುವ ಗುರಿ ನೀಡಿದ್ದು, ಎಲ್ಲ ಕಾರ್ಯಕರ್ತರು ಪ್ರಧಾನ ನರೇಂದ್ರ ಮೋದಿಯವರ ಜನಪರ ಆಡಳಿತ ಮತ್ತು ಸಾಧನೆಗಳ ಬಗ್ಗೆ ಜನರಲ್ಲಿ ತಿಳಿಸುವ ಮೂಲಕ ಹೆಚ್ಚೆಚ್ಚು ಸದಸ್ಯತ್ವ ಮಾಡುವಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.
ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸ್ ಇಲಾಖೆ ಮೂಲಕ ತೊಂದರೆ ಕೊಡುವುದು ಸರಿಯಲ್ಲ. ಪಿಎಸೈ ಸೇರಿದಂತೆ ಕೆಲವು ಪೊಲೀಸ್‌ರು ಕಾಂಗ್ರೆಸ್ ಕಚೇರಿಯಂತೆ ಬಿಂಬಿಸಬೇಡಿ. ಹಾಗೇನಾದರೂ ಕಂಡು ಬಂದರೇ ನಾನು ಸುಮ್ಮನಿರಲ್ಲ. ನಮ್ಮ ಅಧಿಕಾರ ಬಂದ ಮೇಲೆ ನಿಮ್ಮನ್ನು ಸುಮ್ಮನೆ ಬೀಡುವುದೇ ಇಲ್ಲ ಎಂಬುವುದು ಅರ್ಥ ಮಾಡಿಕೊಳ್ಳಬೇಕು. ಕಳೆದ ನನ್ನ ಅವಧಿಯಲ್ಲಿ ನಾನೆಷ್ಟು ಅನುದಾನ ತಂದಿದ್ದೇನೆ. ಯಾವೆಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ ಎಂಬುವುದನ್ನು ದಾಖಲೆ ಸಮೇತ ಬರುತ್ತೇನೆ. ನೀವು ಶಾಸಕರಾಗಿ ಒಂದೂವರೆ ವರ್ಷದಲ್ಲಿ ನೀವೆಷ್ಟು ನಿಮ್ಮ ಸರ್ಕಾರದಿಂದ ಎಷ್ಟು ಅನುದಾನ ತಂದಿದ್ದಿರಿ? ನೀವು ದಾಖಲೆ ಸಮೇತ ಬನ್ನಿ ಬಹಿರಂಗ ಚರ್ಚೆ ಮಾಡೋಣ.
-ಎ.ಎಸ್.ಪಾಟೀಲ(ನಡಹಳ್ಳಿ), ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷರು.