ವಕ್ಪ್ ಸಂಸ್ಥೆಯ ಧರ್ಮಗುರುಗಳಿಗೆ ಕಾರ್ಯಾಗಾರ ಆತಂಕದ ವಿಷಯ: ನಳಿನ್‌

| Published : Feb 17 2024, 01:15 AM IST

ವಕ್ಪ್ ಸಂಸ್ಥೆಯ ಧರ್ಮಗುರುಗಳಿಗೆ ಕಾರ್ಯಾಗಾರ ಆತಂಕದ ವಿಷಯ: ನಳಿನ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಜೆಟ್ ಭಾಷಣದಲ್ಲಿ ಸಾಮಾನ್ಯವಾಗಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಮತ್ತು ಅಭಿವೃದ್ದಿ ಯೋಜನೆಗಳಿಗೆ ಹಣ ಹಂಚಿಕೆ ಬಗ್ಗೆ ರಾಜ್ಯದ ಜನತೆಗೆ ಸಮಗ್ರ ಮಾಹಿತಿ ನೀಡಲಾಗುತ್ತದೆ. ಆದರೆ ಸಿದ್ದರಾಮಯ್ಯ ಅವರು ರಾಜಕೀಯ ದ್ವೇಷದ ಭಾಷಣ ಮಾಡುವ ಕೆಟ್ಟ ಸಂಪ್ರದಾಯವನ್ನು ಈ ಬಜೆಟ್‌ನಲ್ಲೂ ಮುಂದುವರಿಸಿದ್ದಾರೆ ಎಂದು ನಳಿನ್‌ ಟೀಕಿಸಿದ್ದಾರೆ.

ಮಂಗಳೂರು: ವಕ್ಪ್ ಸಂಸ್ಥೆಯ ಧರ್ಮಗುರುಗಳಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಾಗಾರ ನಡೆಸುವುದಾಗಿ ರಾಜ್ಯ ಬಜೆಟ್‌ನಲ್ಲಿ ತಿಳಿಸಲಾಗಿದೆ. ಇದರ ಉದ್ದೇಶ ಏನು ? ಕಾರ್ಯಾಗಾರ ನಡೆಸುವವರು ಯಾರು ? ಎನ್ನುವ ಆತಂಕ ಸಹಜವಾಗಿಯೇ ಜನರಲ್ಲಿ ಮೂಡಿದೆ ಎಂದು ರಾಜ್ಯ ಬಜೆಟ್‌ ಬಗ್ಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಪ್ರತಿಕ್ರಿಯಿಸಿದ್ದಾರೆ.

ಬಜೆಟ್ ಭಾಷಣದಲ್ಲಿ ಸಾಮಾನ್ಯವಾಗಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಮತ್ತು ಅಭಿವೃದ್ದಿ ಯೋಜನೆಗಳಿಗೆ ಹಣ ಹಂಚಿಕೆ ಬಗ್ಗೆ ರಾಜ್ಯದ ಜನತೆಗೆ ಸಮಗ್ರ ಮಾಹಿತಿ ನೀಡಲಾಗುತ್ತದೆ. ಆದರೆ ಸಿದ್ದರಾಮಯ್ಯ ಅವರು ರಾಜಕೀಯ ದ್ವೇಷದ ಭಾಷಣ ಮಾಡುವ ಕೆಟ್ಟ ಸಂಪ್ರದಾಯವನ್ನು ಈ ಬಜೆಟ್‌ನಲ್ಲೂ ಮುಂದುವರಿಸಿದ್ದಾರೆ. ಕೇಂದ್ರ ಸರ್ಕಾರವನ್ನು ದೂಷಿಸಲು ಸೀಮಿತವಾದ ಈ ಬಜೆಟ್ ಯುಪಿಎ ಸರ್ಕಾರವನ್ನು ಹೊಗಳುವುದರ ಜತೆಗೆ ಭಾರತ್ ಜೋಡೋ ಯಾತ್ರೆಯನ್ನೂ ಉಲ್ಲೇಖಿಸಿರುವುದು ನಾಚಿಕೆಗೇಡಿನ ವಿಚಾರ. ಚುನಾವಣೆ ಸಂದರ್ಭ ಕರಾವಳಿಗೆ ಪ್ರತ್ಯೇಕ ಪ್ರಾಧಿಕಾರ ಸ್ಥಾಪಿಸಿ 2,500 ಕೋಟಿ ರು. ನೀಡುವುದಾಗಿ ಘೋಷಿಸಿದ್ದ ಕಾಂಗ್ರೆಸ್ ಬಜೆಟ್‌ನಲ್ಲಿ ಕರಾವಳಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದಿದ್ದಾರೆ.ರಾಜ್ಯದ ಆರ್ಥಿಕತೆಗೆ ಚೈತನ್ಯ: ಹರೀಶ್ ಕುಮಾರ್

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಅಭಿವೃದ್ಧಿ ಶಕೆಯೇ ಆರಂಭವಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಜನಸಾಮಾನ್ಯರು, ಮಧ್ಯಮ ವರ್ಗದವರ ಆರ್ಥಿಕತೆಗೆ ಚೈತನ್ಯ ನೀಡಿದ್ದು, ಸಿದ್ದರಾಮಯ್ಯರು ಮಂಡಿಸಿದ ಈ ಸಲದ ಬಜೆಟ್ ರಾಜ್ಯವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲಿದೆ. ಅದರಲ್ಲೂ ಕರಾವಳಿ ಜಿಲ್ಲೆಯ ಪ್ರಮುಖವಾಗಿರುವ ಮೀನುಗಾರಿಕಾ ಕ್ಷೇತ್ರಕ್ಕೆ ೩ ಸಾವಿರ ಕೋಟಿ ರು. ಮೊತ್ತದ ಯೋಜನೆ, ಸಮುದ್ರ ಅಂಬುಲೆನ್ಸ್, ಪುತ್ತೂರಿನಲ್ಲಿ ಪಶು ವೈದ್ಯಕೀಯ ಕಾಲೇಜು ನಿಜಕ್ಕೂ ಒಳ್ಳೆಯ ಯೋಜನೆಗಳು. ಈ ಮೂಲಕ ಸಿದ್ದರಾಮಯ್ಯರು ಆರ್ಥಿಕ ವಲಯದ ಮಾಸ್ಟರ್ ಮೈಂಡ್ ಎನ್ನುವುದನ್ನು ಮತ್ತೆ ಸಾಬೀತು ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.ಕರಾವಳಿಗೆ ಭರಪೂರ ಕೊಡುಗೆ: ಭಂಡಾರಿ

ರಾಜ್ಯ ಸರ್ಕಾರದ ಬಜೆಟ್ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕೃಷಿ, ಮೀನುಗಾರಿಕೆ, ಉದ್ಯಮ, ಕೈಗಾರಿಕೆ ಸೇರಿದಂತೆ ಎಲ್ಲ ವಲಯಗಳಿಗೆ ಪ್ರೋತ್ಸಾಹ ನೀಡಲಾಗಿದೆ. ರೈತ ಮಹಿಳೆಯರಿಗೆ ಹಸು-ಎಮ್ಮೆ ಖರೀದಿಗೆ ಸಾಲ ಸೌಲಭ್ಯ, ಮತ್ಸ್ಯ ಆಶಾಕಿರಣ ಯೋಜನೆಯಡಿ ಕರಾವಳಿ ಮೀನುಗಾರರ ಪರಿಹಾರ ಮೊತ್ತ ೩ ಸಾವಿರ ರು. ಹೆಚ್ಚಳ, ಕರಾವಳಿಯಲ್ಲಿ ಬಲಿಷ್ಠವಾಗಿರುವ ಸ್ವಸಹಾಯ ಗುಂಪುಗಳಿಗೆ ೧೦ ಕೋಟಿ ರು. ಮೀಸಲು, ಮಂಜೂರಿನಲ್ಲಿ ಹಜ್ ಭವನ, ಗ್ರಾಮ ಪಂಚಾಯಿತಿಗಳಲ್ಲಿ ಇ-ಆಫೀಸ್ ಆರಂಭ, ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಸ್ಮಾರ್ಟ್‌ಫೋನ್‌, ಮಂಗಳೂರಿನಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ಸ್ಥಾಪನೆ, ಅಡಕೆ ರೋಗ ನಿಯಂತ್ರಣಕ್ಕೆ ಸಂಶೋಧನೆ ಹಾಗೂ ಸಸ್ಯ ಸಂರಕ್ಷಣೆ ಉತ್ತೇಜನ ನೀಡಲಾಗಿದೆ, ಕರಾವಳಿಯ ಹಿರಿಯ ಪತ್ರಕರ್ತ ರಘುರಾಮ ಶೆಟ್ಟಿ ವಡ್ಡರ್ಸೆ ಹೆಸರಲ್ಲಿ ಪ್ರಶಸ್ತಿ, ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಆರಂಭಿಸಿರುವುದು ಒಳ್ಳೆಯ ಯೋಜನೆಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ.ಸಮಬಾಳು ಸಮಪಾಲು ಬಜೆಟ್ : ರಮಾನಾಥ ರೈ

ಕಾಂಗ್ರೆಸ್ ಸರ್ಕಾರ ಮತ್ತೊಂದು ಜನಪರ ಬಜೆಟ್ ಮಂಡನೆ ಮಾಡಿದ್ದು ಸಿಎಂ ಸಿದ್ದರಾಮಯ್ಯ ಅವರ ದಾಖಲೆಯ 15ನೇ ಬಜೆಟ್ ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ಎಲ್ಲಾ ವರ್ಗದ ಜನರಿಗೆ ಪಾಲು ನೀಡಲಾಗಿದೆ. ಇದು ಸರ್ವರಿಗೂ ಸಮಬಾಳು ಸಮಬಾಳು ಧ್ಯೇಯದಿಂದ ಕೂಡಿರುವ ಸರ್ವರ ಅಭಿವೃದ್ಧಿಯ ಗ್ಯಾರಂಟಿ ಬಜೆಟ್ ಇದಾಗಿದೆ. ಪುತ್ತೂರಿನಲ್ಲಿ ಪಶು ವೈದ್ಯಕೀಯ ಕಾಲೇಜು, ಅಡಕೆ ರೋಗ ನಿಯಂತ್ರಣಕ್ಕೆ ಸಂಶೋಧನೆ, ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆಗಳನ್ನು ಪರಿಚಯಿಸಲು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸುವ ಆಶ್ವಾಸನೆ, ಸ್ವಸಹಾಯ ಗುಂಪುಗಳಿಗೆ ಸಿಕ್ಕಿರುವ ಅನುದಾನ ಸೇರಿದಂತೆ ಕರಾವಳಿಗೆ ಮತ್ತು ದಕ್ಷಿಣ ಕನ್ನಡದ ಜಿಲ್ಲೆಗೆ ಬಜೆಟ್ ನಲ್ಲಿ ಬಂಪರ್ ಕೊಡುಗೆಗಳನ್ನು ನೀಡಲಾಗಿದೆ ಎಂದು ಮಾಜಿ ಸಚಿವರಾದ ರಮಾನಾಥ ರೈ ಹೇಳಿದ್ದಾರೆ.ಪೊಳ್ಳು ಭರವಸೆ ಬಜೆಟ್‌: ಕ್ಯಾ.ಬ್ರಿಜೇಶ್‌ ಚೌಟ

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕರಾವಳಿ ಅಭಿವೃದ್ಧಿ ನಿಗಮ ಎಂದು ಘೋಷಣೆ ಮಾಡಿತ್ತು. ಅದರ ಬಗ್ಗೆಯೂ ತುಟಿ ಪಿಟಿಕ್ ಎನ್ನದೆ, ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರು. ಕೊಡಬೇಕೆಂಬ ಬೇಡಿಕೆಗೆ ಸ್ಪಂದಿಸದೆ, ಬಂಟ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆಯೂ ಚಕಾರ ಎತ್ತದೆ, ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಆಗಬೇಕೆಂಬ ಬೇಡಿಕೆಗೆ ಮನ್ನಣೆಯೂ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಕೇವಲ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿ ಪೊಳ್ಳು ಭರವಸೆಗೆ ಮಾತ್ರ ಸೀಮಿತವಾಗಿದೆ ಬಿಜೆಪಿ ಕರ್ನಾಟಕ ಕಾರ್ಯದರ್ಶಿ ಕ್ಯಾಪ್ಟನ್ ಬೃಜೇಶ್ ಚೌಟ ಹೇಳಿದ್ದಾರೆ.ಸ್ವಾಗತಾರ್ಹ ಬಜೆಟ್‌: ಅನಂತೇಶ್‌ ಪ್ರಭು

ರಾಜ್ಯ ಬಜೆಟ್‌ನಲ್ಲಿ ಮೀನುಗಾರಿಕಾ ವಲಯದ ಸಮಗ್ರ ಅಭಿವೃದ್ಧಿಗೆ 3 ಸಾವಿರ ಕೋಟಿ ರು. ನೀಡಿರುವುದು ಸ್ವಾಗತಾರ್ಹ. ಅದೇ ರೀತಿ ಕೃಷಿ ಕಾಂಪ್ಲೆಕ್ಸ್‌ಗೆ 35 ಕೋಟಿ ರು., ಇನ್‌ಕ್ಯುಬೇಷನ್‌ ಕೇಂದ್ರ ಸ್ಥಾಪನೆ, ಎಲೆಕ್ಟ್ರಿಕ್‌ ವಾಹನಕ್ಕೆ ಒತ್ತು, ಮಂಗಳೂರಲ್ಲಿ ಬಂದರು ಅಭಿವೃದ್ಧಿ, ವಾಟರ್‌ ಮೆಟ್ರೋ ಸಂಚಾರ, ಸಣ್ಣ ಮತ್ತು ಮಧ್ಯ ಕೈಗಾರಿಕೆ ಅಭಿವೃದ್ಧಿಗೆ 39 ಕೋಟಿ ರು. ನೆರವು ಮುಂತಾದ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ ಮಂಗಳೂರಲ್ಲಿ ಐಟಿ ಪಾರ್ಕ್‌ ಸ್ಥಾಪನೆ ಬಗ್ಗೆ ಪ್ರಸ್ತಾಪವಿಲ್ಲ ಎಂದು ಮಂಗಳೂರು ಕೆಸಿಸಿಐ ಅಧ್ಯಕ್ಷ ಅನಂತೇಶ್‌ ವಿ.ಪ್ರಭು ಅಭಿಪ್ರಾಯಪಟ್ಟಿದ್ದಾರೆ.