ಸಾರಾಂಶ
೬ ಬಾರಿ ಸಂಸದರಾಗಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವ ಹೇಳಿಕೆ ದೇಶದಲ್ಲಿ ಅಶಾಂತಿ ಹುಟ್ಟಿಸಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಯಲ್ಲಾಪುರ
ರಾಜೀವ ಗಾಂಧಿ ಸಂವಿಧಾನಕ್ಕೆ ತಿದ್ದುಪಡಿ ತಂದು ೧೮ ವರ್ಷದ ಯುವಕರಿಗೆ ಮತದಾನದ ಹಕ್ಕು, ಮಹಿಳೆಯರಿಗೆ ಮೀಸಲಾತಿ ತರುವ ಮೂಲಕ ದೇಶಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಆದರೆ, ಯುವಜನಾಂಗ ಕಾಂಗ್ರೆಸ್ ಮರೆತಿದೆ ಎಂದು ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದ ಅಡಿಕೆ ಭವನದಲ್ಲಿ ಶನಿವಾರ ಬೂತ್ ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
೬ ಬಾರಿ ಸಂಸದರಾಗಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವ ಹೇಳಿಕೆ ದೇಶದಲ್ಲಿ ಅಶಾಂತಿ ಹುಟ್ಟಿಸಿದೆ. ಅತಿಕ್ರಮಣದಾರರಿಗೆ ನಮ್ಮ ಸರ್ಕಾರ ಇದ್ದಾಗ ಮಂಜೂರಿ ಮಾಡುವ ಪ್ರಕ್ರಿಯೆ ಪ್ರಾರಂಭ ಮಾಡಿದೆವು. ಆದರೆ, ಮೋದಿ ಸರ್ಕಾರ ಬಂದಮೇಲೆ ತೀವ್ರ ನಿರ್ಲಕ್ಷಿಸಿದೆ. ಪ್ರತಿಯೊಬ್ಬರ ಖಾತೆಗೆ ₹೧೫ ಲಕ್ಷ, ಪ್ರತಿವರ್ಷ ೨ ಕೋಟಿ ಉದ್ಯೋಗ ಸೃಷ್ಟಿ ಹೇಳಿದ ಮೋದಿ ಏನು ಮಾಡಿದ್ದಾರೆ ಎಂದರು.ಶಿರಸಿ, ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯಕ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ಒಂದು ತೊಲೆ ಬಂಗಾರಕ್ಕೆ ₹೨೨,೦೦೦ ಇತ್ತು. ಬಿಜೆಪಿ ಬಂದ ಮೇಲೆ ₹೭೨,೦೦೦ ಆಗಿದೆ. ಹೀಗೆ ಸಾಮಾನ್ಯ ಜನರು ಖರೀದಿಸುವ ಪೆಟ್ರೋಲ್, ಆಹಾರಧಾನ್ಯ ಪ್ರತಿಯೊಂದೂ ಗಗನಕ್ಕೇರಿದೆ. ಇದು ಬಿಜೆಪಿಯ ದುರಾಡಳಿತಕ್ಕೆ ಸಾಕ್ಷಿ. ನೆಹರೂ ಅವರಿಂದ ಹಿಡಿದು ಮನಮೋಹನ ಸಿಂಗ್ ವರೆಗೂ ಅನ್ನದಾತನಿಗೆ ಶಕ್ತಿ ತುಂಬಿದ್ದರು ಎಂದರು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರನಾಥ ನಾಯ್ಕ ಮಾತನಾಡಿ, ಬಿಜೆಪಿ ಅತಿಕ್ರಮಣದಾರರಿಗೆ ತೀವ್ರ ಅನ್ಯಾಯ ಮಾಡಿದೆ. ಸದಾ ಹಿಂದೂ ಮುಸ್ಲಿಮರ ನಡುವೆ ಘರ್ಷಣೆಯಾಗುವಂತೆ ಮಾಡಿದೆ. ಬ್ಯಾಂಕ್‌ಗಳನ್ನು ವಿಲೀನ ಮಾಡಿ ತೊಂದರೆ ಉಂಟುಮಾಡಿದೆ. ಹೀಗೆ ಎಲ್ಲ ಕ್ಷೇತ್ರದಲ್ಲೂ ಬಿಜೆಪಿ ವಿಫಲವಾಗಿದೆ ಎಂದರು.ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ. ಭಟ್ಟ ಮೆಣಸುಪಾಲ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ವಿವೇಕ ಹೆಬ್ಬಾರ, ಶ್ರೀನಿವಾಸ ಭಟ್ಟ ಧಾತ್ರಿ, ವೆಂಕಟೇಶ ಹೆಗಡೆ ಹೊಸಬಾಳೆ, ನಾಗರಾಜ ನಾರ್ವೇಕರ, ದಿಲೀಪ್ ರೋಖಡೆ, ಸಿ.ವಿ. ಗೌಡರ್, ಲಾರೆನ್ಸ್ ಸಿದ್ದಿ, ವರದಾ ಹೆಗಡೆ, ನರಸಿಂಹ ನಾಯ್ಕ ಉಪಸ್ಥಿತರಿದ್ದರು.