ಕಾಂಗ್ರೆಸ್‌ನದು ಹಣಬಲ ನಮ್ಮದು ಜನಬಲ

| Published : Jun 02 2024, 01:46 AM IST

ಸಾರಾಂಶ

ಚನ್ನಪಟ್ಟಣ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರದ್ದು ಹಣಬಲವಾದರೆ, ನಮ್ಮದು ಜನಬಲ. ಡಿ.ಕೆ.ಬ್ರದರ್ಸ್ ದೈತ್ಯಶಕ್ತಿ, ಹಣಬಲ, ಅಧಿಕಾರ ಬಲವಿದ್ದು, ಅಂತವರ ನಡುವೆ ನಮ್ಮದು ರೋಚಕ ಹೋರಾಟವಾಗಿದೆ.

ಚನ್ನಪಟ್ಟಣ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರದ್ದು ಹಣಬಲವಾದರೆ, ನಮ್ಮದು ಜನಬಲ. ಡಿ.ಕೆ.ಬ್ರದರ್ಸ್ ದೈತ್ಯಶಕ್ತಿ, ಹಣಬಲ, ಅಧಿಕಾರ ಬಲವಿದ್ದು, ಅಂತವರ ನಡುವೆ ನಮ್ಮದು ರೋಚಕ ಹೋರಾಟವಾಗಿದೆ. ಕಾಂಗ್ರೆಸ್‌ನವರೇ ಚುನಾವಣೆಗಾಗಿ ೪೦೦-೫೦೦ ಕೋಟಿ ಖರ್ಚಾಗಿದೆ ಎಂದು ಆಫ್ ದ ರೆಕಾರ್ಡ್ ಹೇಳುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಬಾಂಬ್ ಸಿಡಿಸಿದರು.

ನಗರದಲ್ಲಿ ಬೆಂಗಳೂರು ಪದವೀಧರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಅ.ದೇವೇಗೌಡ ಪರ ಹಮ್ಮಿಕೊಂಡಿದ್ದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರ ಸಭೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಸಹೋದರರು ಸಮಸ್ಯೆ ಸೃಷ್ಠಿಸಿ ಅವರೇ ಅದನ್ನು ಬಗೆಹರಿಸುತ್ತಾರೆ. ಅಂತವರ ನಡುವೆ ನಮ್ಮದು ರೋಚಕ ಹೋರಾಟ. ಈ ಚುನಾವಣೆ ನಮ್ಮ ಲೆಕ್ಕಕ್ಕೇ ಸಿಗುತ್ತಿಲ್ಲ. ಊಹೆಗೂ ಮೀರಿದ ಫಲಿತಾಂಶ ಬರುತ್ತೆ ಎಂಬ ನಿರೀಕ್ಷೆ ಇದೆ. ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ತಾರೆ ಅನ್ನೋ ವಿಶ್ವಾಸ ಇದೆ. ಆದರೂ ಅವರ ಹಣಬಲ ವರ್ಕೌಟ್ ಆಗುತ್ತಾ ನೋಡಬೇಕು ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆಯನ್ನೇ ಹರಿಸಿದೆ. ಚುನಾವಣೆ ಹಿಂದಿನ ದಿನ ಮಹಿಳೆಯರ ಖಾತೆಗೆ ಎರಡು ಸಾವಿರ ಜಮಾ ಮಾಡಿದ್ದಾರೆ. ಮಹಿಳೆಯರ ಅಕೌಂಟ್‌ಗೆ ಹಣ ಹಾಕಿದ್ದೀವಿ, ಮಹಿಳಾ ಮತದಾರರು ನಮ್ಮ ಕೈಹಿಡಿಯಲಿದ್ದು, ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಜನಾಭಿಪ್ರಾಯ ಏನಿದೆ ಅನ್ನೋದನ್ನ ಕಾದು ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.

೪೦೦-೫೦೦ ಕೋಟಿ ಖರ್ಚು:

ಚುನಾವಣೆ ಫಲಿತಾಂಶದ ಕುರಿತು ನಾವೇನು ಕಾನ್ಫಿಡೆನ್ಸ್ ಕಳೆದುಕೊಂಡಿಲ್ಲ. ನಮಗೆ ಎರಡೂ ಪಕ್ಷಗಳ ಬಲ, ಶಕ್ತಿ ಇದೆ. ಆದರೆ ಕಾಂಗ್ರೆಸ್‌ನವರು ಆಫ್ ದ ರೆಕಾರ್ಡ್ ೪೦೦-೫೦೦ಕೋಟಿ ಖರ್ಚು ಮಾಡಿದ್ದೀವಿ ಅಂತ ಹೇಳುತ್ತಿದ್ದಾರೆ. ಅಷ್ಟು ಹಣ ಖರ್ಚು ಮಾಡಿ ಗೆಲ್ಲಲೇಬೇಕು ಅನ್ನೋ ಹಠ ಇದೆ ಅವರಿಗೆ ಎಂದರು.

ಯಾಗದ ಬಗ್ಗೆ ಡಿಕೆಶಿಯನ್ನೇ ಕೇಳಿ:

ಡಿ.ಕೆ.ಶಿವಕುಮಾರ್ ವಿರುದ್ಧ ಶತ್ರು ಭೈರವಿ ಯಾಗ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಕೇರಳದ ಸಚಿವರು, ದೇವಾಲಯ ಆಡಳಿತ ಮಂಡಳಿ ಆ ರೀತಿ ಯಾವುದೇ ಪೂಜೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಡಿಕೆಶಿ ಅವರನ್ನೇ ಕೇಳಬೇಕು ಎಂದರು.

ಅ.ದೇವೇಗೌಡ ಗೆಲುವು ಖಚಿತ:

ವಿಧಾನಪರಿಷತ್ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೆಂಗಳೂರು ಪದವೀಧರರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿ ಅ.ದೇವೇಗೌಡರು ಕಣದಲ್ಲಿದ್ದಾರೆ. ನಮ್ಮ ತಾಲೂಕಿನಲ್ಲಿ ಐದುವರೆ ಸಾವಿರ ಪದವೀಧರರ ಮತದಾರರು ಇದ್ದಾರೆ. ಹಾಗಾಗಿ ಇಂದು ಸಭೆ ಮಾಡಿ ನಮ್ಮ ಅಭ್ಯರ್ಥಿ ಗೆಲುವಿನ ಬಗ್ಗೆ ಸಮಾಲೋಚನೆ ಮಾಡ್ತೇವೆ. ಹಿಂದೆಯೂ ಅ.ದೇವೇಗೌಡರು ಪರಿಷತ್ ಸದಸ್ಯರಾಗಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ಈ ಬಾರಿಯೂ ಪದವೀಧರರ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದರು. ಬಾಕ್ಸ್......................

ಸಿಎಂ ಕನಸಿನಲ್ಲಿ ಡಿಕೆಶಿ ಖರ್ಚು

ಡಿ.ಕೆ.ಶಿವಕುಮಾರರ್ ರಾಜ್ಯದ ಮುಖ್ಯಮಂತ್ರಿ ಆಗಬೇಕು ಅಂತ ಆಸೆ ಇಟ್ಕೊಂಡಿದ್ದಾರೆ. ಈ ಚುನಾವಣೆಯಲ್ಲಿ ತಮ್ಮ ಸೋಲು ಅನುಭವಿಸಿದರೆ ಸಿಎಂ ಕನಸಿಗೆ ಹಿನ್ನಡೆ ಆಗುತ್ತೆ ಅಂತ ಚುನಾವಣೆಗೆ ಖರ್ಚು ಮಾಡಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ಮತದಾರರನ್ನ ಬೆದರಿಸಿದ್ದಾರೆ. ನಾವು ಡಾ.ಮಂಜುನಾಥ್ ಅವರ ಒಳ್ಳೆತನ ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳಿದ್ದೇವೆ. ಹಾಗಾಗಿ ಫಲಿತಾಂಶ ಏನಾಗುತ್ತೋ ನೋಡೊಣ. ಡಾಕ್ಟರ್ ಗೆದ್ದರೆ ಜನಶಕ್ತಿಗೆ ಬೆಲೆ ಇದೆ ಅನ್ನೋದು ಗೊತ್ತಾಗುತ್ತೆ ಎಂದರು. ಬಾಕ್ಸ್‌...........

8 ಕ್ಷೇತ್ರದಿಂದಲೂ ಒಳ್ಳೆಯ ಫೀಡ್‌ಬ್ಯಾಕ್ ಬಂದಿದೆ: ಡಾ.ಮಂಜುನಾಥ್

ಚನ್ನಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿಂತಾಗ ಪ್ರಾರಂಭದಲ್ಲಿ ಹೇಗಿತ್ತೋ ಅದೇ ರೀತಿಯ ಬೆಂಬಲ ಇಂದಿಗೂ ಇದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲರೂ ನೀವು ಗೆಲ್ಲುತ್ತೀರಿ ಆರಾಮವಾಗಿ ಇರಿ ಎನ್ನುತ್ತಿದ್ದಾರೆ. ಲೀಡ್ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ನಂಬಿಕೆ ಇದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಎಂಟು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಒಳ್ಳೆಯ ಫೀಡ್ ಬ್ಯಾಕ್ ಬಂದಿದೆ. ಇದು ಈ ಬಾರಿಯ ಚುನಾವಣೆಯಲ್ಲಿ ನನಗೆ ಗೆಲ್ಲುವ ವಿಶ್ವಾಸ ಮೂಡಿಸಿದೆ ಎಂದರು.

ಅ.ದೇವೇಗೌಡರನ್ನು ಆಯ್ಕೆಮಾಡಿ:

ಕ್ರಿಯಾಶೀಲ ವ್ಯಕ್ತಿ ಅ.ದೇವೇಗೌಡ ಅವರಂತವರು ಮೇಲ್ಮನೆಗೆ ಆಯ್ಕೆಯಾದರೆ ಪರಿಷತ್ತಿನ ಘನತೆಗೆ ತಕ್ಕದಾಗಿರುತ್ತದೆ. ಕಳೆದ ಬಾರಿ ಪರಿಷತ್ತಿನ ಸದಸ್ಯರಾಗಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಇವರಿಗೆ ಸಾಕಷ್ಟು ಅನುಭವವಿದ್ದು, ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಸಹ ಪದವೀಧರರ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.ಪೊಟೋ೧ಸಿಪಿಟಿ೧:

ಚನ್ನಪಟ್ಟಣದಲ್ಲಿ ಬೆಂಗಳೂರು ಪದವೀಧರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಅ.ದೇವೇಗೌಡರ ಪರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್, ಡಾ.ಮಂಜನಾಥ್ ಇತರರು ಪಾಲ್ಗೊಂಡಿದ್ದರು.