ಸಾರಾಂಶ
ಹುಬ್ಬಳ್ಳಿ: ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ನ್ಯಾಯ ಎಂದು ಚುನಾವಣಾ ಪ್ರಣಾಳಿಕೆ ಘೋಷಿಸಿದ್ದಾರೆ. ಆದರೆ, ಇವರು ಯಾವತ್ತೂ ದೇಶಕ್ಕೆ ನ್ಯಾಯ ಕಲ್ಪಿಸಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾವು ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೂ ಗೊತ್ತಿದೆ. ಹೀಗಾಗಿ ಮನಬಂದಂತೆ ಏನೆಲ್ಲ ಘೋಷಣೆ ಮಾಡುತ್ತಿದ್ದಾರೆ ಅಷ್ಟೇ ಎಂದು ಲೇವಡಿ ಮಾಡಿದರು.
ಗರೀಬಿ ಹಠಾವೋ, ರೋಟಿ-ಕಪಡಾ-ಮಕಾನ್ ಘೋಷಣೆ ಮಾಡಿದ್ದರು. ಆದರೆ ಆ ರೀತಿ ಮಾಡಿದರಾ? 2004ರಲ್ಲಿ ಕಾಂಗ್ರೆಸ್ ಕೆ ಹಾಥ್ ಗರೀಬ್ ಲೋಗೊಂಕೆ ಸಾಥ್ ಎಂದು ಘೋಷಿಸಿದರು. ಆದರೆ ಏನು ಮಾಡಿದರು? ಎಂದು ಜೋಶಿ ಪ್ರಶ್ನಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ₹ 12 ಲಕ್ಷ ಕೋಟಿ ಭ್ರಷ್ಟಾಚಾರ ಮಾಡಿದರೇ ಹೊರತು, ಬಡವರಿಗೆ ಏನೂ ಕೊಟ್ಟಿಲ್ಲ. ದೇಶಕ್ಕೆ ಯಾವ ನ್ಯಾಯವನ್ನೂ ಕೊಟ್ಟಿಲ್ಲ. ಈಗ ನ್ಯಾಯ ಘೋಷಣೆ ಮಾಡಿರುವುದು ಹಾಸ್ಯಾಸ್ಪದ. ನ್ಯಾಯ ಘೋಷಣೆ, ಯಾತ್ರೆ ಏನೇ ಮಾಡಿದರೂ ಈಗ ಜನ ಅವರನ್ನು ನಂಬುವುದಿಲ್ಲ ಎಂದು ಜೋಶಿ ಪ್ರತಿಕ್ರಿಯಿಸಿದರು.
ಭಯೋತ್ಪಾದಕರು ಇವರ ಬ್ರದರ್ಸ್: ಭಯೋತ್ಪಾದಕರು ನಮ್ಮ ಬ್ರದರ್ಸ್ ಎಂಬ ನೀತಿ ಕಾಂಗ್ರೆಸ್‌ನದ್ದು. ಕಾಂಗ್ರೆಸ್‌ನವರಿಗೆ ತುಷ್ಟೀಕರಣದ ರಾಜಕಾರಣ ಒಂದೇ ಗೊತ್ತಿದೆ. ಹಾಗಾಗಿ ಅತ್ಯಂತ ಬಾಲಿಶವಾಗಿ ಮಾತನಾಡುತ್ತಾರೆ. ಪುಲ್ವಾಮಾ ದಾಳಿ ಆನಂತರ ದೇಶದಲ್ಲಿ ನಡೆದ ಸರ್ಜಿಕಲ್ ಏರ್‌ಸ್ಟ್ರೇಕ್‌ನಲ್ಲಿ ಪಾಕ್ ಕೈಗೆ ಅಭಿನಂದನ್ ಸಿಕ್ಕಾಗ ಕಾಂಗ್ರೆಸ್‌ನವರಿಗೆ ಖುಷಿಯಾಗಿತ್ತು. ಪಾಕಿಸ್ತಾನ ಅಭಿನಂದನ್ ಅವರನ್ನು ಕೊಲ್ಲುತ್ತದೆ. ನಾವಿಲ್ಲಿ ಪ್ರಧಾನಿ ಮೋದಿ ಅವರನ್ನು ಟಾರ್ಗೆಟ್ ಮಾಡಬಹುದು ಎಂದುಕೊಂಡಿತ್ತು ಕಾಂಗ್ರೆಸ್. ಆದರೆ, ಮೋದಿ ಅವರು ಅಭಿನಂದನ್ ಅವರನ್ನು ಸುರಕ್ಷಿತವಾಗಿ ಕರೆ ತರಲು ಮೊದಲೇ ಯೋಜನೆ ರೂಪಿಸಿದ್ದರು ಎಂದರು.