ಕಾಂಗ್ರೆಸ್ ದೇಶ ಪ್ರಗತಿಗೆ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಿಲ್ಲ

| Published : May 12 2024, 01:17 AM IST

ಕಾಂಗ್ರೆಸ್ ದೇಶ ಪ್ರಗತಿಗೆ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು 60 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರ ದೇಶದ ಪ್ರಗತಿಗೆ ಅಗತ್ಯವಿರುವ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಿಲ್ಲ. ಆದ್ದರಿಂದ ಶಿಕ್ಷಣದ ಗುಣಮಟ್ಟ ದಿನೇ ದಿನೇ ಕುಸಿಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಸುಮಾರು 60 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರ ದೇಶದ ಪ್ರಗತಿಗೆ ಅಗತ್ಯವಿರುವ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಿಲ್ಲ. ಆದ್ದರಿಂದ ಶಿಕ್ಷಣದ ಗುಣಮಟ್ಟ ದಿನೇ ದಿನೇ ಕುಸಿಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು. ನಗರದ ಸೇವಾ ಸದನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲ ಶಾಲೆಗಳಲ್ಲಿ ಶಿಕ್ಷಕ ಹಾಗೂ ಮತ್ತೊಂದೆಡೆ ಕೊಠಡಿಗಳ ಕೊರತೆ ಇದೆ. ಪಾಠ ಮಾಡುವ ಶಿಕ್ಷಕರಿಗೆ ಸರಿಯಾಗಿ ಸಂಬಳ ನೀಡುವುದಿಲ್ಲ. ಶಿಕ್ಷಣ ಸಚಿವರು ತಮಗೆ ತೋಚಿದ ರೀತಿ ನೀತಿಗಳನ್ನು ಜಾರಿ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಬಾರಿ 2023-24ನೇ ಸಾಲಿನ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದ ಫಲಿತಾಂಶ ಕಳಪೆ ಬಂದಿದ್ದು, ಕಳೆದ 10 ವರ್ಷಗಳ ಹಿಂದೆ ಇದ್ದ ಫಲಿತಾಂಶ ಬಂದಿದೆ ಎಂದರು.

ಸುಮಾರು 8.59 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇದರಲ್ಲಿ ಸುಮಾರು 6.39 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಸುಮಾರು 1.70 ಲಕ್ಷ ಮಕ್ಕಳು ಚೆನ್ನಾಗಿ ಪರೀಕ್ಷೆ ಬರೆದಿದ್ದಕ್ಕೆ ಕೃಪಾಂಕ ನೀಡಿ ಪಾಸು ಮಾಡಲಾಗಿದೆ. ಈಗಾಗಲೇ ಅಂತರಿಕ ಅಂಕ 20 ಇದ್ದು, ವಿದ್ಯಾರ್ಥಿಗಳು ಪಾಸಾಗಲು 28 ಅಂಕ ಬೇಕು. ಅದನ್ನೂ ಸಹ ಸರ್ಕಾರದಿಂದಲೇ ನೀಡಿ ಪಾಸು ಮಾಡಿದರೆ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಪ್ರಗತಿ ಹೇಗಾಗುತ್ತದೆ. ಇದಕ್ಕೆಲ್ಲಾ ಕಾರಣ ಗುಣಮಟ್ಟದ ಶಿಕ್ಷಣ, ಮೂಲ ಸೌಕರ್ಯ ಕೊರತೆಯಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸುಮಾರು 60 ಸಾವಿರ ಕೊಠಡಿಗಳ ಅಗತ್ಯವಿದೆ ಎಂದು ಪತ್ರಿಕೆಗಳಲ್ಲಿ ವರದಿ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಸುಮಾರು 56 ಸಾವಿರ ಕೋಟಿ ರು. ವ್ಯಯ ಮಾಡುವ ಬದಲು ಒಂದು ವರ್ಷದ ಗ್ಯಾರಂಟಿ ಯೋಜನೆಯ ಹಣವನ್ನು ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿಗೆ ಖರ್ಚು ಮಾಡಿದರೆ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಉತ್ತಮ ಶಿಕ್ಷಣ ದೊರಕುತ್ತದೆ. ಇಲ್ಲದೇ ಹೋದರೆ ಸರ್ಕಾರಿ ಶಾಲೆಗಳು ಮುಚ್ಚಿಹೋಗುತ್ತವೆ. ಇದಕ್ಕೆ ನೇರವಾಗಿ ಮುಖ್ಯಮಂತ್ರಿ, ಶಿಕ್ಷಣ ಸಚಿವರೇ ಕಾರಣರಾಗುತ್ತಾರೆ ಎಂದರು. ವಿದ್ಯಾರ್ಥಿಗಳು ಧೃತಿಗೆಡಬೇಡಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ದೃತಿಗೆಡಬೇಡಿ. ಅನುತ್ತೀರ್ಣರಾದವರಿಗೆ ಮತ್ತೊಮ್ಮೆ ಪರೀಕ್ಷೆ ಬರುತ್ತದೆ. ಆ ಪರೀಕ್ಷೆಯನ್ನು ಉತ್ತಮವಾಗಿ ಬರೆದು ಪಾಸಾಗಿ. ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕಗಳಿಸಿ. ಇದು ಇಲ್ಲಿಗೆ ಕೊನೆಯಲ್ಲ. ಯಾರೂ ಆತ್ಮಹತ್ಯೆಯಂತಹ ಕೆಟ್ಟ ಕೆಲಸಕ್ಕೆ ಕೈ ಹಾಕಬೇಡಿ ಎಂದು ಸಲಹೆ ನೀಡಿದರು. 100 ವಿದ್ಯಾರ್ಥಿಗಳ ಜವಾಬ್ದಾರಿ: 2023-24ನೇ ಸಾಲಿನ ಸ್ಟೇಟ್ ಬೋರ್ಡ್‌ನಲ್ಲಿ 610 ಕ್ಕೂ ಹೆಚ್ಚು ಅಂಕಗಳಿಸಿದ, ಐಸಿಎಸ್ಸಿ ಹಾಗೂ ಸಿಬಿಎಸ್ಸಿಯಲ್ಲಿ ಶೇ. 95 ಅಂಕ ಪಡೆದ ಸುಮಾರು 100 ವಿದ್ಯಾರ್ಥಿಗಳ ಮುಂದಿನ ಪಿಯುಸಿ ಶಿಕ್ಷಣದ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ರಾಜ್ಯದ ಯಾವ ಜಿಲ್ಲೆಯವರಾದರೂ ಸಹ ಇದರ ಸದುಪಯೋಗಪಡಿಸಿಕೊಳ್ಳಿ. ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.