ಜನತೆಯ ಬದುಕಿನ ಗ್ಯಾರಂಟಿ ಕಸಿದುಕೊಂಡ ಕಾಂಗ್ರೆಸ್‌: ಅರವಿಂದ ಬೆಲ್ಲದ

| Published : Apr 22 2024, 02:01 AM IST

ಜನತೆಯ ಬದುಕಿನ ಗ್ಯಾರಂಟಿ ಕಸಿದುಕೊಂಡ ಕಾಂಗ್ರೆಸ್‌: ಅರವಿಂದ ಬೆಲ್ಲದ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಎಂದರೆ ಹೆಣ್ಣು ಮಕ್ಕಳ ಜೀವಕ್ಕೆ ರಕ್ಷಣೆ ಇಲ್ಲದಿರುವುದು, ರೈತರು, ಹಿಂದೂಗಳಿಗೆ ಹಾಗೂ ದಲಿತರ ಹಕ್ಕುಗಳಿಗೆ ಗ್ಯಾರಂಟಿ ಇಲ್ಲದಿರುವ ಗ್ಯಾರಂಟಿ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಟೀಕಿಸಿದ್ದಾರೆ.

ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಅಮಾನುಷ ಕೃತ್ಯವಾಗಿದ್ದು, ಇಂತಹ ಘಟನೆಗಳು ರಾಜ್ಯದಲ್ಲಿ ಪದೇ ಪದೇ ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರ ಜನತೆಯ ಬದುಕಿನ ಗ್ಯಾರಂಟಿ ಕಸಿದುಕೊಂಡಿದೆ ಎಂದು ಶಾಸಕ, ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಕಿಡಿಕಾರಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಘಟನೆಯು ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯನ್ನು ತೋರಿಸುತ್ತದೆ. ಬಾಲಕಿಯೋರ್ವಳ ಮೇಲೆ ಅಮಾನುಷ ಕೃತ್ಯ ನಡೆದಿದ್ದರೂ ಕಾಂಗ್ರೆಸ್‌ ನಾಯಕರು ಈ ವರೆಗೂ ಖಂಡನೆ ವ್ಯಕ್ತಪಡಿಸಿಲ್ಲ. ಮುಖ್ಯಮಂತ್ರಿಗಳಾಗಲಿ, ಗೃಹ ಸಚಿವರಾಗಲಿ ಈ ವರೆಗೂ ಮೃತಳ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳುವ ಕಾರ್ಯ ಮಾಡಿಲ್ಲ ಎಂದು ಆರೋಪಿಸಿದರು.

ಹಿಂದೂಗಳಿಗೆ ಹಾಗೂ ತಮ್ಮದೇ ಪಕ್ಷದ ಕಾರ್ಯಕರ್ತರಿಗೆ ರಾಜ್ಯ ಸರ್ಕಾರ ಬದುಕಿನ ಗ್ಯಾರಂಟಿ ಕೊಡದೆ, ಕೊಲೆ ಮಾಡಿದ ಆರೋಪಿಯ ಮನೆಗೆ ಪೊಲೀಸ್‌ ರಕ್ಷಣೆ ನೀಡುವ ಮೂಲಕ ಬದುಕಿನ ಗ್ಯಾರಂಟಿ ನೀಡುವುದರೊಂದಿಗೆ ಮತಾಂಧ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಎಂದರೆ ಹೆಣ್ಣು ಮಕ್ಕಳ ಜೀವಕ್ಕೆ ರಕ್ಷಣೆ ಇಲ್ಲದಿರುವುದು, ರೈತರು, ಹಿಂದೂಗಳಿಗೆ ಹಾಗೂ ದಲಿತರ ಹಕ್ಕುಗಳಿಗೆ ಗ್ಯಾರಂಟಿ ಇಲ್ಲದಿರುವ ಗ್ಯಾರಂಟಿ. ಅಲ್ಪಸಂಖ್ಯಾತರಿಗೆ, ಲವ್ ಜಿಹಾದ್, ಗಲಭೆಕೋರರಿಗೆ ಗಲಭೆ ಪ್ರಕರಣ ಸರಿಪಡಿಸುವ ಗ್ಯಾರಂಟಿ, ವಿದ್ಯುತ್, ಮದ್ಯ ತೆರಿಗೆ ಹೆಚ್ಚಳ ಮಾಡುವ ಕೆಲಸವೇ ಕಾಂಗ್ರೆಸಿನ ಗ್ಯಾರಂಟಿ ಎಂದು ಆರೋಪಿಸಿದರು.

ರಾಜ್ಯದಲ್ಲಿ ಲವ್ ಜಿಹಾದ್ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದರಿಂದಾಗಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳದೇ ಅವರ ತುಷ್ಟೀಕರಣಕ್ಕೆ ಇಳಿದಿರುವುದು ಖಂಡನಾರ್ಹ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ನೇಹಾ ಹತ್ಯೆ ನಡೆದ ಬಳಿಕ ಕೆಲ ಗಂಟೆಗಳಲ್ಲಿಯೇ ಪೊಲೀಸರು ಆರೋಪಿ ಹಾಗೂ ಅವನ ಮೊಬೈಲ್ ವಶಕ್ಕೆ ಪಡೆದುಕೊಳ್ಳುತ್ತಾರೆ. ಆದರೆ, ದುರ್ದೈವದ ಸಂಗತಿಯೆಂದರೆ ಮೊಬೈಲ್‌ನಲ್ಲಿನ ವಿಡಿಯೋಗಳು ಹೇಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಇದಕ್ಕೆ ಪೊಲೀಸರು ಸಹಕಾರ ನೀಡಿರುವ ಸಾಧ್ಯತೆಯಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ‌ಹತ್ಯೆ ವಿಚಾರವಾಗಿ ಕಾಂಗ್ರೆಸ್ ನಾಯಕರು ಆಕಸ್ಮಿಕ ಘಟನೆ ಎನ್ನುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ಪ್ರಕರಣವನ್ನು ಸರ್ಕಾರ ತಿರುಚುವ ಮೂಲಕ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಅಂಗಡಿ, ನಗರ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ ಸೇರಿದಂತೆ ಹಲವರಿದ್ದರು.