ಸಾರಾಂಶ
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದಂತಹ ಭಯೋತ್ಪಾದಕ ಕೃತ್ಯವನ್ನು ಖಂಡಿಸಿದರು.
ಮುಂಡಗೋಡ: ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದಂತಹ ಭಯೋತ್ಪಾದಕ ಕೃತ್ಯವನ್ನು ಖಂಡಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ರಾತ್ರಿ ಪಟ್ಟಣದಲ್ಲಿ ಮೇಣದಬತ್ತಿಯ ಮೌನ ಮೆರವಣಿಗೆ ನಡೆಸಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಇಲ್ಲಿಯ ಪ್ರವಾಸಿ ಮಂದಿರದಿಂದ ಮೇಣ ಬತ್ತಿಯನ್ನು ಹಿಡಿದು ಮೌನ ಮೆರವಣಿಗೆ ಮುಖಾಂತರ ಶಿವಾಜಿ ಸರ್ಕಲ್ ವರೆಗೆ ತೆರಳಿ ಸರ್ಕಲ್ ನಲ್ಲಿ ಹುತಾತ್ಮರಾದವರ ಭಾವಚಿತ್ರಗಳ ಮುಂದೆ ಎಣ್ಣೆ ದೀಪ ಹಚ್ಚಿ ಶ್ರದ್ಧಾಂಜಲಿಯನ್ನು ಸಲ್ಲಿಸಿ ಮೌನಾಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಮಾತನಾಡಿ, ನಮ್ಮ ಬಳಿ ಇಷ್ಟು ದೊಡ್ಡ ಸೇನಾ ಶಕ್ತಿ ಇದ್ದರೂ ಸರ್ಕಾರದ ಭದ್ರತಾ ವೈಫಲ್ಯದಿಂದಾಗಿ ಉಗ್ರರ ದಾಳಿ ನಡೆದಿರುವುದು ದೇಶದ ಪ್ರತಿ ನಾಗರಿಕರು ತಲೆ ತಗ್ಗಿಸುವಂತಾಗಿದೆ. ಸ್ವರ್ಗ ಸುಖವನ್ನು ಅನುಭವಿಸಲು ಹೋದ ಪ್ರವಾಸಿಗರು ಹೆಣವಾಗಿ ಬಂದಿರುವುದು ಶೋಚನೀಯ. ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವಿದ್ದರೂ ಈ ಸಂದರ್ಭದಲ್ಲಿ ರಾಷ್ಟ್ರದ ಹಿತದೃಷ್ಟಿಯಿಂದ ರಾಜಕೀಯ ಮಾಡದೇ ಉಗ್ರರನ್ನು ಸದೆಬಡೆಯಲು ಕೇಂದ್ರ ಸರ್ಕಾರ ಏನೇ ಕ್ರಮ ಕೈಗೊಂಡರೂ ನಾವು ಬೆಂಬಲ ನೀಡುತ್ತೇವೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಎಂ.ಎನ್. ದುಂಡಸಿ, ಮಂಜುನಾಥ ವೆರ್ಣೇಕರ ಉಪಸ್ಥಿತರಿದ್ದರು.ಮುಂಡಗೋಡದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್‌ನಿಂದ ಮೇಣದಬತ್ತಿ ಮೌನ ಮೆರವಣಿಗೆ ನಡೆಸಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.