ಸಾರಾಂಶ
ಚಿಕ್ಕಬಳ್ಳಾಪುರ : ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸದಸ್ಯತ್ವ ಅಭಿಯಾನದ ಮೂಲಕ ಬಿಜೆಪಿಗೆ 50 ಸಾವಿರ ಜನರನ್ನು ನೋಂದಾಯಿಸಬೇಕು. ಇದರಿಂದ ಮುಂದಿನ ಎಲ್ಲ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು ಸಾಧ್ಯವಾಗಲಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಕರೆ ನೀಡಿದರು.
ಬೆಂಗಳೂರು ಜಿಲ್ಲೆಯ ನೆಲಮಂಗಲ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ 1,200 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ನೀಡುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ. ಬಿಜೆಪಿ ಮತ್ತೆ ಜನಬೆಂಬಲ ಪಡೆದು ಅಧಿಕಾರಕ್ಕೆ ಬರಬೇಕು. ಇದಕ್ಕಾಗಿ ಬಿಜೆಪಿಯ ಸಂಘಟನೆ ಉತ್ತಮವಾಗಿ ನಡೆಯಬೇಕು ಎಂದರು.
ಹೆಚ್ಚು ಜನರನ್ನು ನೋಂದಾಯಿಸಿದರೆ ಸ್ಥಳೀಯ ಚುನಾವಣೆ ಸೇರಿ ಎಲ್ಲ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಬಹುದು. ಪಕ್ಷದ ಮರ ಗಟ್ಟಿಯಾಗಿದ್ದರೆ ನಾವೆಲ್ಲರೂ ಸುಭದ್ರವಾಗಿ ಇರಬಹುದು. ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಸೇರಿಸಿಕೊಂಡು ನೋಂದಣಿ ಅಭಿಯಾನ ನಡೆಸಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್‌ನಿಂದ ಭ್ರಷ್ಟಾಚಾರ
ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಅತ್ಯಾಚಾರ, ಭ್ರಷ್ಟಾಚಾರ ನಡೆಯುತ್ತಿದೆ. ಜಮ್ಮು- ಕಾಶ್ಮೀರ ಚುನಾವಣೆಯಲ್ಲಿ 370ನೇ ವಿಧಿಯನ್ನು ಮತ್ತೆ ತರುವುದಾಗಿ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಮೈತ್ರಿ ಪಕ್ಷ ಹೇಳಿದೆ. ಇಂತಹ ವರ್ತನೆಯಿಂದಲೇ ಇನ್ನೂ 50 ವರ್ಷ ಕಾಂಗ್ರೆಸ್ ಕೇಂದ್ರದಲ್ಲಿ ಆಡಳಿತಕ್ಕೆ ಬರುವುದಿಲ್ಲ. ದೇಶದ ಕಾನೂನು ಹಾಗೂ ಜಮ್ಮು ಕಾಶ್ಮೀರದ ಕಾನೂನನ್ನು ಬೇರೆ ಮಾಡಬೇಕೆಂಬುದು ಕಾಂಗ್ರೆಸ್ ಉದ್ದೇಶ. ಆದರೆ ದೇಶದಲ್ಲಿ ಒಂದೇ ಧ್ವಜ, ಒಂದೇ ಸಂವಿಧಾನ ಇರಬೇಕು ಎಂದರು.
ವಿಶೇಷ ಸ್ಥಾನಮಾನ ರದ್ದಾದ ಬಳಿಕ ಜಮ್ಮು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಬೆಳೆದಿದೆ. ರೈತರು ಬಂದು ಜಮೀನು ಖರೀದಿ ಮಾಡಿದ್ದಾರೆ. ಇಂತಹ ಸುವ್ಯವಸ್ಥೆಯನ್ನು ಬಿಜೆಪಿ ತಂದಿದ್ದರೆ, ಕಾಂಗ್ರೆಸ್ ಅದನ್ನು ವಿರೋಧ ಮಾಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ವೈದ್ಯೆ ಮೇಲೆ ಅತ್ಯಾಚಾರವಾದರೂ ಅಲ್ಲಿನ ಸರ್ಕಾರ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ. ದುಷ್ಕರ್ಮಿಗಳು ಆಸ್ಪತ್ರೆಗೆ ನುಗ್ಗಿ ಸಾಕ್ಷ್ಯ ನಾಶ ಮಾಡಿದ್ದಾರೆ. ಸ್ಥಳೀಯ ರಾಜಕಾರಣಿಗಳ ಬೆಂಬಲವಿಲ್ಲದೆ ಹೀಗೆ ಮಾಡಲು ಸಾಧ್ಯ ಇಲ್ಲ. ಬಿಜೆಪಿ ಆಡಳಿತ ಇಲ್ಲದ ಕಡೆಗಳಲ್ಲಿ ಇಂತಹ ಅಮಾನುಷ ಕೃತ್ಯಗಳು ನಡೆಯುತ್ತಿವೆ ಎಂದು ದೂರಿದರು.
ಭಾರತೀಯ ಜನತಾ ಪಕ್ಷ ಅತಿ ದೊಡ್ಡ ಪಕ್ಷವಾಗಿ ವೇಗವಾಗಿ ಬೆಳೆದಿದೆ. ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಯ, ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ ಮೊದಲಾದ ನಾಯಕರು ಪಕ್ಷವನ್ನು ಕಟ್ಟಿ ಬೆಳೆಸಿದರು. ಬಿಜೆಪಿ ಕೇವಲ ರಾಜಕೀಯ ಆಂದೋಲನವಾಗಿ ಉಳಿದಿಲ್ಲ, ಅದು ಈಗ ಸಾಮಾಜಿಕ ಆಂದೋಲನವಾಗಿ ಬೆಳೆದಿದೆ. ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಸೇವೆಯೇ ಸಂಘಟನೆ ಎಂದು ಹೇಳಿದ್ದಾರೆ ಎಂದರು.
ಬಿಜೆಪಿಯಲ್ಲಿ ಐದು ವರ್ಷಕ್ಕೊಮ್ಮೆ ಸದಸ್ಯರ ನೋಂದಣಿ ಅಭಿಯಾನ ನಡೆಯುತ್ತದೆ. ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 276 ಬೂತ್‌ಗಳಿವೆ. ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಒಮ್ಮತದಿಂದ ಕೆಲಸ ಮಾಡಿ, 33 ಸಾವಿರಕ್ಕೂ ಅಧಿಕ ಮತಗಳನ್ನು ತಂದುಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ನರೇಂದ್ರ ಮೋದಿಯವರು ಪ್ರಧಾನಿಯಾದ ಕೂಡಲೇ ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ ಕಡತಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ರೈತರು ದೇಶದ ಬೆನ್ನೆಲುಬು ಎಂಬುದನ್ನು ಸಾಬೀತುಪಡಿಸಿದ್ದಾರೆ. ರೈತರು, ಮಹಿಳೆಯರು, ಯುವಜನರು ಹಾಗೂ ಕಾರ್ಮಿಕರು ಎಂಬ ನಾಲ್ಕು ವರ್ಗಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ ಎಂದರು.ನೆಲಮಂಗಲ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.