ಅಂಬೇಡ್ಕರ್‌ಗೆ ಕೈನಿಂದ ಹೆಜ್ಜೆಹೆಜ್ಜೆಗೂ ಅವಮಾನ: ಜೋಶಿ

| Published : Apr 12 2025, 12:45 AM IST

ಸಾರಾಂಶ

ಕಾಂಗ್ರೆಸ್‌ ಪಕ್ಷ ಹೆಜ್ಜೆ ಹೆಜ್ಜೆಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರನ್ನು ಅವಮಾನಿಸುತ್ತಲೇ ಬಂದಿದೆ. ಅಂಬೇಡ್ಕರ್‌ ಗೆದ್ದಂತಹ ಹಿಂದೂ ಬಾಹುಳ್ಯದ ಕ್ಷೇತ್ರಗಳನ್ನೇ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಂತಹ ದುರುಳ ನೀತಿ ತೋರಿದವರು ಕಾಂಗ್ರೆಸ್ಸಿಗರು. ಈಗ ದಲಿತರ ವೋಟ್‌ ಬ್ಯಾಂಕ್‌ಗಾಗಿ ಮೊಸಳೆ ಕಣ್ಣೀರಿಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶುಕ್ರವಾರ ನಗರದಲ್ಲಿ ಬಿಜೆಪಿಯ ಭೀಮ ಹೆಜ್ಜೆ ರಥಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಅಂಬೇಡ್ಕರ್‌ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಲೆಂದೇ ಕಾಂಗ್ರೆಸ್‌ ಅಂದು ಅಂಬೇಡ್ಕರ್‌ ಗೆದ್ದಂತಹ ಜೈಸೂರು, ಕುಲ್ಲಾ, ಹರೀದ್ಪುರ ಪ್ರದೇಶಗಳ ಕ್ಷೇತ್ರಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿತು ಎಂದು ಆರೋಪ ಮಾಡಿದರು.ದೇಶಕ್ಕೆ ಒಂದು ಸಂವಿಧಾನದ ಸುಭದ್ರ ಚೌಕಟ್ಟು ನಿರ್ಮಿಸಿಕೊಟ್ಟಂಥ ಮಹಾನ್‌ ನಾಯಕ ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ ಪಕ್ಷ ಸ್ವತಂತ್ರ ಪೂರ್ವದಿಂದಲೂ ಮಹಾ ಅವಮಾನಗಳನ್ನೇ ಮಾಡುತ್ತಾ ಬಂದಿದೆ. ಗಾಂಧಿ, ನೆಹರು ಕಾಲದಿಂದ ಇಲ್ಲಿವರೆಗೂ ಇದು ಮುಂದುವರಿದೇ ಇದೆ. ಪ್ರಸ್ತುತದಲ್ಲಿ ಭೀಮ ಹೆಜ್ಜೆ ಶತಮಾನ ಸಂಭ್ರಮ ಆಚರಿಸದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಅವಗಣನೆಯೂ ಇದಕ್ಕೊಂದು ನಿದರ್ಶನ ಎಂದರು.ಮಹಾತ್ಮಗಾಂಧಿ ಅವರು ಬೆಳಗಾವಿಗೆ ಬಂದು ಹೋದ ನೆನಪಿಗೆ ಶತಮಾನ ಸಂಭ್ರಮ ಆಚರಿಸಿದ ಕಾಂಗ್ರೆಸ್‌ ಸರ್ಕಾರ, ಅದೇ ಬೆಳಗಾವಿಯ ನಿಪ್ಪಾಣಿಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಬಂದು ಹೋದ ನೆನಪಿಗೆ ಶತಮಾನ ಸಂಭ್ರಮ ಆಚರಿಸದೆ ಅವಮಾನ ಸಂಪ್ರದಾಯವನ್ನು ಮುಂದುವರೆಸಿದೆ ಎಂದು ಆರೋಪಿಸಿದರು.

ಮಹಾತ್ಮ ಗಾಂಧಿ ಅವರ ಶತಮಾನ ಸಂಭ್ರಮವೇ ಆಗಲಿ, ಅಂಬೇಡ್ಕರ್‌ ಅವರ ಭೀಮ ಹೆಜ್ಜೆ ಸಂಭ್ರಮವೇ ಆಗಲಿ ರಾಜ್ಯ ಸರ್ಕಾರ ಸರ್ವಪಕ್ಷಗಳ ಸಭೆ ಕರೆದು, ದಲಿತ ನಾಯಕರು ಮತ್ತು ದಲಿತ ಚಿಂತಕರನ್ನು ಕರೆದು ಚರ್ಚಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಬೇಕಿತ್ತು. ಆದರೆ, ಸರ್ಕಾರ ಮಹಾತ್ಮಾ ಗಾಂಧಿ ಅವರ ಶತಮಾನ ಸಮಾರಂಭವನ್ನು ಪಕ್ಷದ ಒಂದು ಸಮಾವೇಶದ ರೀತಿ ಆಚರಿಸಿದರೆ, ಭೀಮ ಹೆಜ್ಜೆಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಸಚಿವ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.