ಸಾರಾಂಶ
ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಲಿಲ್ಲ, ಬಿಜೆಪಿ ಸರ್ಕಾರ ಈ ಸಂವಿಧಾನ ಶಿಲ್ಪಿಗೆ ಭಾರತ ರತ್ನ ನೀಡಿತು ಎಂದು ಅಮಿತ್ ಷಾ ಅವರು ಲೋಕಸಭೆಯಲ್ಲಿ ಹೇಳಿದ್ದರು. ಆದರೆ ಕಾಂಗ್ರೆಸ್ ಈ ಮಾತನ್ನು ತಿರುಚಿ, ಜನರಲ್ಲಿ ವಿಷ ಬೀಜ ಬಿತ್ತುವ ಕಾರ್ಯಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ದಿನಕರ ಬಾಬು ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿಇಂದು ಸದಾ ಅಂಬೇಡ್ಕರ್ ಹೆಸರನ್ನು ಜಪಿಸುವ ಕಾಂಗ್ರೆಸ್ ಪಕ್ಷ, ಅಂದು ರಾಷ್ಟ್ರದ ಮೊದಲ ಕ್ಯಾಬಿನೆಟ್‌ನಿಂದ ಅಂಬೇಡ್ಕರ್ ಅವರು ರಾಜೀನಾಮೆ ನೀಡುವಂತೆ ಮಾಡಿತ್ತು. ಕಾಂಗ್ರೆಸ್ ಸರ್ಕಾರದ ವಿದೇಶಿ ನೀತಿ, ಆರ್ಟಿಕಲ್ 370 ಜಾರಿಯನ್ನು ವಿರೋಧಿಸಿ ಅಂಬೇಡ್ಕರ್ ರಾಜೀನಾಮೆ ನೀಡಿದಾಗ, ನೆಹರು, ಅಂಬೇಡ್ಕರ್ ಅವರ ರಾಜೀನಾಮೆ ಏನೂ ಸಮಸ್ಯೆ ಆಗದು ಎಂದು ಹೇಳಿದ್ದರು. ಇಂತಹ ಕಾಂಗ್ರೆಸ್ ಇಂದು ಅಂಬೇಡ್ಕರ್ ಪರ ಎಂದು ತೋರಿಸಿಕೊಳ್ಳುತ್ತಿದೆ ರಾಜ್ಯ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ದಿನಕರ್ ಬಾಬು ಹೇಳಿದ್ದಾರೆ.
ಅಂಬೇಡ್ಕರ್ ನಿಧನರಾದಾಗಲೂ ಅಂಬೇಡ್ಕರ್ ಅವರ ಜನ್ಮ ಸ್ಥಳದಲ್ಲಿ ಸ್ಮಾರಕ ಮಾಡಲಿಕ್ಕೂ ನೆಹರು ಅವಕಾಶ ನೀಡಿರಲಿಲ್ಲ. ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಂಬೇಡ್ಕರ್ ಸ್ಮಾರಕ ನಿರ್ಮಾಣ ಮಾಡಲಾಯಿತು. ನ.26ನ್ನು ಸಂವಿಧಾನ ದಿನ ಆಗಿ ಘೋಷಣೆ ಮಾಡಿರುವುದು ಬಿಜೆಪಿ. ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಲಿಲ್ಲ, ಬಿಜೆಪಿ ಸರ್ಕಾರ ಈ ಸಂವಿಧಾನ ಶಿಲ್ಪಿಗೆ ಭಾರತ ರತ್ನ ನೀಡಿತು ಎಂದು ಅಮಿತ್ ಷಾ ಅವರು ಲೋಕಸಭೆಯಲ್ಲಿ ಹೇಳಿದ್ದರು. ಆದರೆ ಕಾಂಗ್ರೆಸ್ ಈ ಮಾತನ್ನು ತಿರುಚಿ, ಜನರಲ್ಲಿ ವಿಷ ಬೀಜ ಬಿತ್ತುವ ಕಾರ್ಯಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ದಿನಕರ ಬಾಬು ಹೇಳಿದ್ದಾರೆ.ಚುನಾವಣೆಯ ಭಾಷಣಗಳಲ್ಲಿ ಅಂಬೇಡ್ಕರ್ ಹೆಸರನ್ನು ಬಳಸುವ ಕಾಂಗ್ರೆಸ್, ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಎರೆಡೆರಡು ಬಾರಿ ಸೋಲಿಸಿತ್ತು. ಅಂಬೇಡ್ಕರ್ ಜೀವನದ 5 ಮಹತ್ವದ ಸ್ಥಳಗಳನ್ನು ಪಂಚತೀರ್ಥವಾಗಿ ಅಭಿವೃದ್ಧಿಪಡಿಸಿದ್ದು ಬಿಜೆಪಿ. ಇದನ್ನು ಅಮಿತ್ ಶಾ ರಾಷ್ಟ್ರಕ್ಕೆ ನೆನಪಿಸಿದ್ದನ್ನು ಅರಗಿಸಿಕೊಳ್ಳಲು ಆಗದೆ ಕಾಂಗ್ರೆಸ್ ನಾಯಕರು ಹಿಂಬಾಗಿಲಿನ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ನಿಜಕ್ಕೂ ತಲೆ ತಗ್ಗಿಸುವ ಸಂಗತಿ ಎಂದವರು ಪ್ರಕಟಣೆಯಲ್ಲಿ ಹೇಳಿದ್ದಾರೆ.