ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರ ಗೆಲುವು ನಿಶ್ಚಿತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರ ಗೆಲುವು ನಿಶ್ಚಿತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಪಟ್ಟಣದ ಬಿಕೆಐಟಿ ಕಾಲೇಜು ಸಭಾಂಗಣದಲ್ಲಿ ಶನಿವಾರ ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಶರಣಪ್ಪ ಮಟ್ಟೂರ ಪರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಪಕ್ಷ ಕಾಂಗ್ರೆಸ್‌ ಪಕ್ಷವಾಗಿದೆ. ಜವಾಹರಲಾಲ್‌ ನೆಹರು ಅವರ ಕಾಲದಿಂದಲೂ ಶಿಕ್ಷಕರಿಗಾಗಿ ಶ್ರಮಿಸುವ ಪಕ್ಷವಾಗಿದೆ ಎಂದರು.

ಶಿಕ್ಷಕರಾದ ಸರ್ವಪಲ್ಲಿ ರಾಧಾಕೃಷ್ಣನ್‌ ಅವರಿಗೆ ರಾಷ್ಟ್ರಪತಿಯನ್ನಾಗಿ ಮಾಡಿದ ಪಕ್ಷ ಕಾಂಗ್ರೆಸ್‌, ಹೀಗಾಗಿ ಎಲ್ಲಾ ಶಿಕ್ಷಕರು ಕಾಂಗ್ರೆಸ್‌ ಪರವಾಗಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಶಿಕ್ಷಕರ ಅಚ್ಚುಮೆಚ್ಚಿನ ನಾಯಕ ಶರಣಪ್ಪ ಮಟ್ಟೂರ ಅವರು ಶಿಕ್ಷಕರ ಸಮಸ್ಯೆಗಳಿಗಾಗಿ ಹಗಲಿರುಳು ಶ್ರಮಿಸುವವರಾಗಿದ್ದಾರೆ. ಅವರ ಗೆಲುವು ಶಿಕ್ಷಕರ ಗೆಲುವಾಗಿದೆ ಎಂದು ತಿಳಿಸಿದರು.

ಹೀಗಾಗಿ ಎಲ್ಲಾ ಶಿಕ್ಷಕರು ಈ ಬಾರಿ ಶರಣಪ್ಪ ಮಟ್ಟೂರ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಲು ಆತುರರಾಗಿದ್ದಾರೆ. ಅದಕ್ಕಾಗಿ ಈ ಸಲ ಶರಣಪ್ಪ ಮಟ್ಟೂರ ಅವರ ಗೆಲುವು ನಿಶ್ಚಿತವಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಶಿಕ್ಷಕರ ಹಾಗೂ ಉಪನ್ಯಾಸಕರ ಹಕ್ಕುಗಳ ರಕ್ಷಣೆ ಮತ್ತು ಅವರ ಸಮಸ್ಯೆಗಳಿಗೆ ಸ್ಪಂದನೆ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಶಿಕ್ಷಕರ ಸಮುದಾಯಕ್ಕೆ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಬ್ದುಲ್‌ ಮನ್ನಾನ್‌ ಸೇಠ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಶರಣಪ್ಪ ಮಟ್ಟೂರ ಅವರಿಗೆ ಶಿಕ್ಷಕರು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಹಣಮಂತರಾವ್‌ ಚವ್ಹಾಣ, ಮಾಜಿ ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಮುರಳೀಧರ ಎಕಲಾರಕರ್‌ ಸೇರಿದಂತೆ ತಾಲೂಕಿನ ಶಾಲಾ ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಬಸವರಾಜ ಕಾವಡಿ ನಿರೂಪಿಸಿದರು.